ಬೆಳ್ತಂಗಡಿ: ಖ್ಯಾತ ಯಕ್ಷಗಾನ ಕಲಾವಿದ ಕುಂಬ್ಳೆ ಶ್ರೀಧರ ರಾವ್ ಹೃದಯಾಘಾತದಿಂದ ಜುಲೈ 5ರಂದು ನಿಧನರಾಗಿದ್ದಾರೆ.
34 ನೆಕ್ಕಿಲಾಡಿ ಗ್ರಾಮದ ಶಾಂತಿನಗರ ಸಮೀಪದ ಬೇರಿಕೆ ನಿವಾಸಿ ಶ್ರೀಧರ ರಾವ್ ಅವರಿಗೆ ಬೆಳಿಗ್ಗೆ ತೀವ್ರ ಎದೆ ನೋವು ಕಾಣಿಸಿಕೊಂಡಿದ್ದು ಪುತ್ತೂರಿನ ಮಹಾವೀರ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ಅವರು ಚಿಕಿತ್ಸೆ ಫಲಕಾರಿಯಾಗದೆ ನಿಧನರಾಗಿದ್ದಾರೆ.
ಇವರು ಧರ್ಮಸ್ಥಳ ಮೇಳವೊಂದರಲ್ಲಿಯೇ ನಿರಂತರ 50 ವರ್ಷಗಳ ಸೇವೆ ಸಲ್ಲಿಸಿದ್ದು, ಸ್ತ್ರೀ ವೇಷಧಾರಿಯಾಗಿ ಪ್ರಸಿದ್ದರಾಗಿರುವ ಶ್ರೀಧರ ರಾವ್‌ರವರು ಪುರುಷ ವೇಷದಲ್ಲಿಯೂ ಸೈ ಅನ್ನಿಸಿಕೊಂಡಿದ್ದರು. ಧರ್ಮಸ್ಥಳ ಕ್ಷೇತ್ರ ಮಹಾತ್ಮೆಯ ಅಮ್ಮು ದೇವಿ, ಈಶ್ವರ, ಸೀತಾ ಪರಿತ್ಯಾಗದ ಸೀತೆ, ಲಕ್ಷ್ಮಣ, ಸುದರ್ಶನ ವಿಜಯದ ಲಕ್ಷ್ಮಿ, ವಿಷ್ಣು, ದಮಯಂತಿ ಸ್ವಯಂವರದ ದಮಯಂತಿ, ಭೀಷ್ಮ ವಿಜಯದ ಅಂಬೆ, ದೇವಿ ಮಹಾತ್ಮೆಯ ದೇವಿ ಮೊದಲಾದ ಪಾತ್ರಗಳ ಮೂಲಕ ಪ್ರಸಿದ್ದಿ ಪಡೆದಿದ್ದರು. ಕರ್ನಾಟಕ ಯಕ್ಷಗಾನ ಅಕಾಡೆಮಿ ಪ್ರಶಸ್ತಿ, ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರ ಪಟ್ಟಾಭಿಷೇಕದ ಸಂದರ್ಭದಲ್ಲಿ ಸನ್ಮಾನ, ಎಡನೀರು ಮಠದ ಸನ್ಮಾನ ಮಾತ್ರವಲ್ಲದೆ ಇನ್ನೂ ಹಲವೆಡೆ ಇವರನ್ನು ಸನ್ಮಾನಿಸಿ ಗೌರವಿಸಲಾಗಿತ್ತು. ಶ್ರೀ ಧರ್ಮಸ್ಥಳ ಮೇಳದ ಪ್ರದರ್ಶನಗಳಲ್ಲಿ ಸ್ತ್ರೀ ಪಾತ್ರಕ್ಕೆ ಪ್ರತ್ಯೇಕವಾದ ಸ್ವಂತಿಕೆಯ ಛಾಪನ್ನು ಒತ್ತಿದ್ದ ಇವರು ತಾಳಮದ್ದಳೆ ಅರ್ಥದಾರಿಯೂ ಆಗಿದ್ದಾರೆ. ಇತ್ತೀಚೆಗಷ್ಟೇ ದಶಮಾನೋತ್ಸವದ ಸಂಭ್ರಮದಲ್ಲಿರುವ ಮಂಗಳೂರು ವಿಶ್ವವಿದ್ಯಾನಿಲಯದ ಡಾ.ಪಿ. ದಯಾನಂದ ಪೈ ಮತ್ತು ಪಿ. ಸತೀಶ್ ಪೈ ಯಕ್ಷಗಾನ ಅಧ್ಯಯನ ಕೇಂದ್ರ ಕೊಡ ಮಾಡುವ ದಶಮಾನೋತ್ಸವ ಪ್ರಶಸ್ತಿಗೆ ಕುಂಬ್ಳೆ ಶ್ರೀಧರ ರಾವ್ ಆಯ್ಕೆಯಾಗಿದ್ದರು.
ಮೃತರು ಶಾಂತಿನಗರ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕಿಯಾಗಿ ಕಾರ್ಯ ನಿರ್ವಹಿಸಿ ನಿವೃತ್ತರಾಗಿರುವ ಪತ್ನಿ ಸುಲೋಚನಾ, ಪುತ್ರರಾದ ಬೆಂಗಳೂರಿನಲ್ಲಿ ಪತ್ರಕರ್ತರಾಗಿರುವ ಗಣೇಶ್ ಪ್ರಸಾದ್, ಕೃಷ್ಣಪ್ರಸಾದ್ ಮತ್ತು ದೇವಿಪ್ರಸಾದ್, ಸೊಸೆಯಂದಿರು ಹಾಗೂ ಮೊಮ್ಮಕ್ಕಳನ್ನು ಅಗಲಿದ್ದಾರೆ.