ಹಿರಿಯ ಹಿಮ್ಮೇಳ ವಾದಕ ಧರ್ಮಸ್ಥಳದ ಸೀತಾರಾಮ ತೋಳ್ಪಾಡಿತ್ತಾಯರಿಗೆ ಕುರಿಯ ವಿಠಲ ಶಾಸ್ತ್ರಿ ನೆನಪಿನ ‘ಕುರಿಯ ಪ್ರಶಸ್ತಿ’ ಪ್ರದಾನ

Suddi Udaya

ಬೆಳ್ತಂಗಡಿ: ಪುತ್ತೂರಿನ ಶ್ರೀ ವೆಂಕಟರಮಣ ದೇವಸ್ಥಾನದ ಶ್ರೀ ಸುಕೃತೀಂದ್ರ ಸಭಾವನದಲ್ಲಿ ಜರುಗಿದ ತಾಳಮದ್ದಳೆ ಸಪ್ತಾಹದ ಸಮಾರೋಪ ಸಮಾರಂಭದಲ್ಲಿ ಕುರಿಯ ವಿಠಲ ಶಾಸ್ತ್ರಿ ಸಾಂಸ್ಕೃತಿಕ ಪ್ರತಿಷ್ಠಾನ ಉಜಿರೆ ಇವರ ನೇತೃತ್ವದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಕುರಿಯ ವಿಠಲ ಶಾಸ್ತ್ರಿ ನೆನಪಿನ ‘ಕುರಿಯ ಪ್ರಶಸ್ತಿ’ಯನ್ನು ಹಿರಿಯ ಹಿಮ್ಮೇಳ ವಾದಕರಾದ ಧರ್ಮಸ್ಥಳದ ಬಿ.ಸೀತಾರಾಮ ತೋಳ್ಪಾಡಿತ್ತಾಯರಿಗೆ ಎಡನೀರು ಮಠದ ಪರಮಪೂಜ್ಯ ಶ್ರೀ ಸಚ್ಚಿದಾನಂದ ಭಾರತೀ ಶ್ರೀಪಾದಂಗಳವರು ಪ್ರದಾನ ಮಾಡಿದರು.


ಇದೇ ಸಂದರ್ಭದಲ್ಲಿ ಪದ್ಯಾಣ ಮನೆತನದ ಹಿರಿಯ ಪುಟ್ಟು ನಾರಾಯಣ ಭಾಗವತರ ಸ್ಮೃತಿಯಲ್ಲಿ ನೀಡುವ ‘ಪದ್ಯಾಣ ಪ್ರಶಸ್ತಿ’ಯನ್ನು ಹಿರಿಯ ಭಾಗವತ ಕುರಿಯ ಗಣಪತಿ ಶಾಸ್ತ್ರಿ ಹಾಗೂ ಕುರಿಯ ಸ್ಮೃತಿ ಗೌರವವನ್ನು ಯಕ್ಷಗಾನ ಅರ್ಥದಾರಿಗಳಾದ ಕೆ.ಭಾಸ್ಕರ ರಾವ್ ಹಾಗೂ ಭಾಸ್ಕರ ನೂರಿತ್ತಾಯ ಬಾರ್ಯ ಇವರಿಗೆ ನೀಡಲಾಯಿತು.


ಸಂದೇಶ ನೀಡಿದ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿಗಳು ಯಕ್ಷಗಾನ ಬಯಲಾಟಗಳು ಮನಸ್ಸಿಗೆ ಮೋದವನ್ನು ನೀಡಿದರೆ, ತಾಳಮದ್ದಳೆಯು ಬುದ್ದಿಗೆ ಗ್ರಾಸವನ್ನು ಒದಗಿಸುತ್ತದೆ. ಭಾಷಾಶುದ್ಧತೆ, ಪುರಾಣ ಜ್ಞಾನ, ಅಂದವಾಗಿ ಮಾತನಾಡುವ ಶಕ್ತಿ, ಗ್ರಹಿಕಾ ಸಾಮರ್ಥ್ಯ ಮತ್ತು ಬದುಕಿಗೆ ಬೇಕಾದ ಸಂದೇಶಗಳನ್ನು ಯಕ್ಷಗಾನವು ಒದಗಿಸುತ್ತದೆ. ಅಕ್ಷರಾಭ್ಯಾಸ ಇಲ್ಲದವರೂ ಆಟ, ಕೂಟಗಳನ್ನು ನೋಡಿಯೇ ಪುರಾಣ ಜ್ಞಾನವನ್ನು ಪಡೆದವರಿದ್ದಾರೆ. ಅದು ಯಕ್ಷಗಾನದ ಶಕ್ತಿ.” ಎಂದರು.
ಈ ಸಂದರ್ಭದಲ್ಲಿ ಪುತ್ತೂರು ಮುಳಿಯ ಜ್ಯುವೆಲ್ಲರ್ಸ್‌ನ ಆಡಳಿತ ನಿರ್ದೇಶಕ ಮುಳಿಯ ಕೇಶವ ಪ್ರಸಾದ್, ಯಕ್ಷಗಾನ ವಿದ್ವಾಂಸ ಡಾ.ಎಂ.ಪ್ರಭಾಕರ ಜೋಷಿ, ಶ್ರೀಮತಿ ಶೀಲಾ ಗಣಪತಿ ಭಟ್ ಉಪಸ್ಥಿತರಿದ್ದರು. ಸಮಾರಂಭದ ಅಧ್ಯಕ್ಷತೆಯನ್ನು ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಆಯೋಗದ ಹಂಗಾಮಿ ಅಧ್ಯಕ್ಷ ಡಾ.ಟಿ.ಶ್ಯಾಮ ಭಟ್ ವಹಿಸಿದ್ದರು.
ಕುರಿಯ ವಿಠಲ ಶಾಸ್ತ್ರಿ ಸಾಂಸ್ಕೃತಿಕ ಪ್ರತಿಷ್ಠಾನದ ಸಂಚಾಲಕ ಉಜಿರೆ ಅಶೋಕ ಭಟ್ಟರು ಸಂಮಾನಿತರನ್ನು ನುಡಿಹಾರಗಳ ಮೂಲಕ ಅಲಂಕರಿಸಿದರು.


ಕಲಾವಿದ, ಲೇಖಕ ನಾ. ಕಾರಂತ ಪೆರಾಜೆ ನಿರ್ವಹಿಸಿದರು. ಪದ್ಯಾಣ ಪ್ರಶಸ್ತಿ ಸಮಿತಿಯ ಸ್ವಸ್ತಿಕ್ ಪದ್ಯಾಣ ವಂದಿಸಿದರು. ಉಜಿರೆ ಅಶೋಕ ಭಟ್ಟರ ಸಪ್ತಾಹ ಸಂಯೋಜನೆಯ ಸುಭಗತೆಯು ಸಪ್ತಾಹದ ಒಟ್ಟೂ ಯಶಸ್ಸಿನಲ್ಲಿ ಅನಾವರಣಗೊಂಡಿತ್ತು. ಕೊನೆಯಲ್ಲಿ ‘ಗಂಗಾ ಸಾರಥ್ಯ’ ಪ್ರಸಂಗದ ತಾಳಮದ್ದಳೆ ನಡೆಯಿತು.

Leave a Comment

error: Content is protected !!