ಬೆಳ್ತಂಗಡಿ: ಪುಂಜಾಲಕಟ್ಟೆಯಿಂದ ಚಾರ್ಮಾಡಿ ತನಕ ನಡೆಯುತ್ತಿರುವ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯಿಂದಾಗಿ ಮಳೆಗೆ ಸಾಕಷ್ಟು ಸಂಚಾರ ಸಮಸ್ಯೆಗಳು ಕಂಡುಬಂದ ಹಿನ್ನೆಲೆಯಲ್ಲಿ ಪುತ್ತೂರು ಸಹಾಯಕ ಕಮಿಷನರ್ ಜುಬಿನ್ ಮೋಹಪಾತ್ರ ಜು.9 ರಂದು ಭೇಟಿ ನೀಡಿ ರಸ್ತೆ ಸ್ಥಿತಿ ವೀಕ್ಷಣೆ ನಡೆಸಿದರು.
ಉಜಿರೆ, ಕಾಶಿಬೆಟ್ಟು, ಮುಂಡಾಜೆ ಮೊದಲಾದ ಕಡೆ ರಸ್ತೆಯ ಪರಿಸ್ಥಿತಿ ವೀಕ್ಷಿಸಿದ ಅವರು ಗುತ್ತಿಗೆದಾರರಿಗೆ ಕಟ್ಟುನಿಟ್ಟಿನ ಆದೇಶ ನೀಡಿ ಮುಂದಿನ ಮೂರು ದಿನಗಳಲ್ಲಿ ರಸ್ತೆಯನ್ನು ಸಂಚಾರ ಯೋಗ್ಯ ಮಾಡಿಕೊಡುವಂತೆ ತಿಳಿಸಿದರು. ಅವ್ಯವಸ್ಥಿತ ಕಾಮಗಾರಿ ಬಗ್ಗೆ ಗುತ್ತಿಗೆದಾರ ಕಂಪೆನಿಯ ಸಿಬ್ಬಂದಿಗೆ ಎಚ್ಚರಿಕೆ ನೀಡಿ ಮುಂದಿನ ದಿನಗಳಲ್ಲಿ ಸಾರ್ವಜನಿಕ ಹಾಗೂ ವಾಹನ ಸವಾರರಿಗೆ ತೊಂದರೆಯಾಗದಂತೆ ಕಾಮಗಾರಿ ನಿರ್ವಹಿಸಿ, ಅಗೆದು ಹಾಕಲಾದ ಸ್ಥಳಗಳಲ್ಲಿ ಜಲ್ಲಿ ಹಾಕಿ ಸಂಚಾರಕ್ಕೆ ವ್ಯವಸ್ಥೆ ಮಾಡಿಕೊಡುವಂತೆ ತಿಳಿಸಿದರು.
ಈ ಸಂದರ್ಭದಲ್ಲಿ ತಹಸೀಲ್ದಾರ್ ಪೃಥ್ವಿ ಸಾನಿಕಂ, ಕಂದಾಯ ನಿರೀಕ್ಷಕ ಪ್ರತೀಶ್, ಮುಂಡಾಜೆ ವಿ. ಎ ರಣಿತಾ, ಮುಂಡಾಜೆ ಗ್ರಾ.ಪಂ ಅಧ್ಯಕ್ಷ ಗಣೇಶ್ ಬಂಗೇರ ಮತ್ತಿತರರು ಉಪಸ್ಥಿತರಿದ್ದರು.