ಉಜಿರೆ : ಉಜಿರೆ ಗ್ರಾಮ ಪಂಚಾಯತದ 2024-25ನೇ ಸಾಲಿನ ಮೊದಲನೇ ಹಂತದ ಗ್ರಾಮ ಸಭೆಯು ಗ್ರಾ. ಪಂ. ಅಧ್ಯಕ್ಷೆ ಶ್ರೀಮತಿ ಉಷಾಕಿರಣ್ ಕಾರಂತ್ ರವರ ಅಧ್ಯಕ್ಷತೆಯಲ್ಲಿ ಉಜಿರೆ ಶಾರದಾ ಮಂಟಪದಲ್ಲಿ ಜು.9ರಂದು ನಡೆಯಿತು.
ಮಾರ್ಗದರ್ಶಿ ಅಧಿಕಾರಿಯಾಗಿ ನೆರಿಯ ಪಶು ಆಸ್ಪತ್ರೆಯ ಪಶು ವೈದ್ಯಾಧಿಕಾರಿ ಯತೀಶ್ ಕುಮಾರ್ ಭಾಗವಹಿಸಿ ಗ್ರಾಮ ಸಭೆಯನ್ನು ಮುನ್ನಡೆಸಿದರು.
2023-24ನೇ ಸಾಲಿನ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಶೇ.100 ಫಾಲಿತಾಂಶ ಬಂದಂತಹ ಸರಕಾರಿ ಶಾಲೆ ಹಳೆಪೇಟೆ ಹಾಗೂ ಬದನಾಜೆಯ ಶಿಕ್ಷಕ ವೃಂದಕ್ಕೆ ಅಭಿನಂದಿಸಲಾಯಿತು. ಹಾಗೂ ಅತೀ ಹೆಚ್ಚು ಅಂಕ ಪಡೆದ ಹಳೆಪೇಟೆ ಶಾಲೆಯ ಸಮೀಮಾ (580), ಬದನಾಜೆ ಶಾಲೆಯ ವೈಷ್ಣವಿ (577) ಇವರಿಗೆ ಪ್ರೋತ್ಸಾಹ ಧನ ರೂ.2000 ವನ್ನು ನೀಡಿ ಅಭಿನಂದಿಸಲಾಯಿತು.
ಪರಿಶಿಷ್ಟ ಜಾತಿ, ಪಂಗಡದ ವಿಶೇಷ/ ದಿವ್ಯಾ0ಗ ಚೇತನ ಸಹಾಯ ಧನ ನೀಡಲಾಯಿತು.
ಹಳೆಪೇಟೆ ಶಾಲೆ ಹಾಗೂ ಬದನಾಜೆ ಶಾಲೆಗೆ ತಲಾ ರೂ. 50 ಸಾವಿರ ಮೊತ್ತದ ಪ್ರಯೋಗಾಲಯದ ಕಿಟ್ ನ್ನು ವಿತರಿಸಲಾಯಿತು. ಹಾಗೂ ಮುಂದಿನ ದಿನ ಈ ಶಾಲೆಗಳಿಗೆ ವ್ಯವಸ್ಥಿತ ಕ್ರೀಡಾಂಗಣವನ್ನು ವ್ಯವಸ್ಥೆ ಮಾಡಲಾಗುತ್ತದೆ ಎಂದರು.
ಕೆ ಎಸ್ ಆರ್ ಟಿ ಸಿ ಬಸ್ ನ ಹಿಂದೆ ಹೋದರೆ ಹೊಗೆಯನ್ನು ಸೇವನೆ ಮಾಡಿಕೊಂಡು ಹೋಗಬೇಕು. ಕೆ ಎಸ್ ಆರ್ ಟಿ ಸಿ ಬಸ್ ರಸ್ತೆಯ ಮಧ್ಯೆಯೇ ನಿಲ್ಲಿಸುತ್ತಾರೆ. ಟಿ ಸಿ ಯವರು ಸರಿಯಾದ ಮಾಹಿತಿಯನ್ನು ನೀಡುವುದಿಲ್ಲ. ಅವರಿಗೂ ಕೂಡ ಬಸ್ ಯಾವ ಸಮಯಕ್ಕೆ ಬರುತ್ತದೆ ಎಂಬ ಮಾಹಿತಿ ಇರುವುದಿಲ್ಲ ಎಂದು ಗ್ರಾಮಸ್ಥರು ಹೇಳಿದರು.
ಸಮಯಗಿಂತ ಮುಂಚೆಯೇ ವೈನ್ ಶಾಪ್ ಗಳು ಹಾಗೂ ಮದ್ಯ ಮಾರಾಟ ಆಗುತ್ತಿದೆ. ಅದರ ಬಗ್ಗೆ ಕ್ರಮಕೈಗೊಳ್ಳಬೇಕು ಎಂದು ಗ್ರಾಮಸ್ಥರಾದ ಸುಬ್ರಹ್ಮಣ್ಯ ಭಟ್ ಆಗ್ರಹಿಸಿದರು. ಅಬಕಾರಿ ಇಲಾಖೆ ಅಕ್ರಮ ಮದ್ಯ ಮಾರಾಟಕ್ಕೆ ದಿಡೀರ್ ದಾಳಿ ಮಾಡಬೇಕು ಎಂದು ಪ್ರವೀಣ್ ಪೆರ್ನಾಂಡಿಸ್ ಸಲಹೆ ನೀಡಿದರು. ಅಕ್ರಮ ಮದ್ಯ ನಿಲ್ಲಿಸಿ ಹಾಗೂ ಉಜಿರೆ ಪರಿಸರದಲ್ಲಿ ಡ್ರಗ್ಸ್ ಮಾರಾಟ ಆಗುತ್ತಿದೆ ಎಂಬ ಸುದ್ದಿ ಹರಡುತ್ತಿದೆ ಅದರ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ಥರು ಹೇಳಿದರು.
ಉಪಾಧ್ಯಕ್ಷ ರವಿಕುಮಾರ್ ಬರಮೇಲು, ಮಾಜಿ ಅಧ್ಯಕ್ಷೆ ಪುಷ್ಪಾವತಿ ಆರ್ ಶೆಟ್ಟಿ, ಪಂಚಾಯತ್ ಸದಸ್ಯರು, ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಮಸ್ಥರು ಉಪಸ್ಥಿತರಿದ್ದರು.
ವಿವಿಧ ಇಲಾಖೆಯ ಅಧಿಕಾರಿಗಳು ತಮ್ಮ ಇಲಾಖೆಯಲ್ಲಿ ದೊರೆಯುವ ಸೌಲಭ್ಯ ಹಾಗೂ ಮಾಹಿತಿ ನೀಡಿದರು.
ಪಂಚಾಯತ್ ಅಭಿವೃದ್ಧಿ ಅಧಿಕಾರಿ ಪಿ.ಹೆಚ್. ಪ್ರಕಾಶ್ ಶೆಟ್ಟಿ ಸ್ವಾಗತಿಸಿ, ನಿರ್ವಹಿಸಿದರು. ಕಾರ್ಯದರ್ಶಿ ಶ್ರವಣ್ ಕುಮಾರ್ ಅನುಪಾಲನ ವರದಿಯನ್ನು ವಾಚಿಸಿದರು.