ಬೆಳ್ತಂಗಡಿ :ಕೊಯ್ಯೂರು ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಕಾನೂನು ಅರಿವು ಕಾರ್ಯಕ್ರಮ ಜುಲೈ 12 ರಂದು ನಡೆಯಿತು
“ಸಕರಾತ್ಮಕ ಯೋಚನೆಗಳಿಂದ ಗುರಿ ಸಾಧನೆ ಸಾಧ್ಯ. ನಾವು ಸಾಗುತ್ತಿರುವ ದಾರಿಯ ಬಗ್ಗೆ ಜಾಗ್ರತೆ ವಹಿಸಿದಾಗ ಮಾತ್ರ ಜೀವನದಲ್ಲಿ ಯಶಸ್ಸು ಕಾಣಲು ಸಾಧ್ಯ ” ಎಂದು ಜೆ. ಎಮ್. ಎಫ್. ಸಿ. ನ್ಯಾಯಾಲಯ ಬೆಳ್ತಂಗಡಿ ಇಲ್ಲಿಯ ಹೆಚ್ಚುವರಿ ಸಿವಿಲ್ ನ್ಯಾಯಧೀಶರಾದ ಶ್ರೀ ವಿಜಯೇಂದ್ರ ಟಿ. ಹೆಚ್. ಅಭಿಪ್ರಾಯ ಪಟ್ಟರು.ಅವರು ತಾಲೂಕು ಕಾನೂನು ಸೇವೆಗಳ ಸಮಿತಿ, ಬೆಳ್ತಂಗಡಿ ವಕೀಲರ ಸಂಘ (ರಿ.) ಹಾಗೂ ಕೊಯ್ಯೂರು ಸರ್ಕಾರಿ ಪದವಿಪೂರ್ವ ಕಾಲೇಜುಗಳ ಸಂಯುಕ್ತ ಆಶ್ರಯದಲ್ಲಿ ನಡೆದ ಪೋಕ್ಸೋ ಕಾಯಿದೆ ಹಾಗೂ ಬಾಲ್ಯ ವಿವಾಹ ಕುರಿತ ಕಾನೂನು ಮಾಹಿತಿ ಕಾರ್ಯಕ್ರಮವನ್ನು ಉದ್ಘಾಟಿಸಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು. ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಬೆಳ್ತಂಗಡಿ ತಾಲೂಕು ವಕೀಲರ ಸಂಘದ ಅಧ್ಯಕ್ಷರಾದ ಶ್ರೀ ವಸಂತ ಮರಕಡ ರವರು ” ಹಕ್ಕು ಮತ್ತು ಕರ್ತವ್ಯ ಇವೆರಡರ ಜ್ಞಾನ ಪ್ರತಿಯೊಬ್ಬರೂ ಪಡೆಯಬೇಕು. ನಮ್ಮ ಹಕ್ಕು ಇನ್ನೊಬ್ಬರಿಗೆ ತೊಂದರೆ ಉಂಟುಮಾಡಿದರೆ ಅದು ಹಕ್ಕುಚ್ಯುತಿಯಾಗುತ್ತದೆ ”ಎಂದು ಅನಿಸಿಕೆ ವ್ಯಕ್ತಪಡಿಸಿದರು. ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ್ದ ಬೆಳ್ತಂಗಡಿ ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ಶ್ರೀ ನವೀನ್ ಬಿ. ಕೆ. ಯವರು ವಿವಿಧ ನಿದರ್ಶನಗಳ ಮೂಲಕ ಪೋಕ್ಸೋ ಕಾಯಿದೆ ವ್ಯಾಪ್ತಿ ಹಾಗೂ ಅಪ್ರಾಪ್ತ ಮಕ್ಕಳು ಲೈಂಗಿಕ ಕಿರುಕುಳಕ್ಕೆ ಒಳಗಾದರೆ ಕಾನೂನು ಯಾವ ರೀತಿ ರಕ್ಷಣೆ ನೀಡುತ್ತದೆ ಎಂಬ ಬಗ್ಗೆ ವಿವರಿಸಿದರು.ಸಂಸ್ಥೆಯ ಪ್ರಾಂಶುಪಾಲರಾದ ಮೋಹನ ಗೌಡ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಕೊoಡಿದ್ದರು. ವೇದಿಕೆಯಲ್ಲಿ ಯುವ ನ್ಯಾಯವಾದಿ ಯಕ್ಷಿತಾ ಉಪಸ್ಥಿತರಿದ್ದರು.ನ್ಯಾಯಾಲಯದ ಸಿಬ್ಬಂದಿ ಶ್ರೀ ಯಲ್ಲಪ್ಪ ಮತ್ತು ಕಾನೂನು ಸ್ವಯಂ ಸೇವಕ ಶ್ರೀ ರಾಘವೇಂದ್ರರವರು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.
ವಿದ್ಯಾರ್ಥಿನಿಯರಾದ ಭವ್ಯ,ರಂಝಿನ, ಪ್ರಜ್ಞಾ, ನಿಶ್ಮಿತಾ, ಕವಿತಾ ಪ್ರಾರ್ಥನೆ ಗೈದರು. ವಾಣಿಜ್ಯ ಶಾಸ್ತ್ರ ಉಪನ್ಯಾಸಕಿ ಶ್ರೀಮತಿ ಪ್ರೀತಿ ಸ್ವಾಗತಿಸಿ, ಉಪನ್ಯಾಸಕಿ ಶ್ರೀಮತಿ ಭವ್ಯ ಎಮ್. ವಂದಿಸಿದರು. ಇತಿಹಾಸ ಉಪನ್ಯಾಸಕ ಶ್ರೀ ಲಕ್ಷ್ಮಣ ಗೌಡ ಕಾರ್ಯಕ್ರಮ ನಿರ್ವಹಿಸಿದರು.