ಬೆಳ್ತಂಗಡಿ: ಕಡಿರುದ್ಯಾವರ ಗ್ರಾಮ ಪಂಚಾಯತ್ ನ 2024-25 ನೇ ಸಾಲಿನ ಪ್ರಥಮ ಸುತ್ತಿನ ಗ್ರಾಮ ಸಭೆಯು ಪಂಚಾಯತ್ ಅಧ್ಯಕ್ಷೆ ರತ್ನಾವತಿ ಇವರ ಅಧ್ಯಕ್ಷತೆಯಲ್ಲಿ ಪಂಚಾಯತ್ ನ ಸ್ವಾಮಿ ವಿವೇಕಾನಂದ ಸಭಾಭವನದಲ್ಲಿ ಜು. 12 ರಂದು ನಡೆಯಿತು.
ಮಾರ್ಗದರ್ಶಿ ಅಧಿಕಾರಿಯಾಗಿ ಸಹಕಾರ ಅಭಿವೃದ್ಧಿ ಅಧಿಕಾರಿ ಪ್ರತಿಮಾ ಅವರು ಗ್ರಾಮಸಭೆಯನ್ನು ಉತ್ತಮವಾಗಿ ನಡೆಸಿಕೊಟ್ಟರು.
ಎರ್ಮಾಲ್ ಪಲ್ಕೆಯಲ್ಲಿ ಚರಂಡಿ ಸರಿಯಿಲ್ಲದೆ ರಸ್ತೆ ಜರಿದು ಹೋಗಿದೆ. ಕಳೆದ 2 ಗ್ರಾಮ ಸಭೆಯಲ್ಲಿ ಈ ರಸ್ತೆಯ ಬಗ್ಗೆ ಪ್ರಸ್ತಾಪ ಮಾಡಿರುತ್ತೇನೆ. ಒಂದು ವಾರದೊಳಗೆ ಸರಿಪಡಿಸುತ್ತೇವೆಂದು ಹೇಳಿ 2 ವರ್ಷವಾದರೂ ಸರಿಮಾಡಿಲ್ಲ. ಗ್ರಾಮ ಸಭೆಯಲ್ಲಿ ನಮ್ಮ ಮಾತಿಗೆ ಬೆಲೆಯಿಲ್ಲವೇ ಎಂದು ಸಂತೋಷ್ ವಳಂಬ್ರ ಅಸಮಾಧಾನ ವ್ಯಕ್ತಪಡಿಸಿದರು.
ಪಂಚಾಯತ್ ಅಧ್ಯಕ್ಷರು ಮಾತನಾಡಿ ಇಗಾಗಲೇ ಇಂಜಿನಿಯರ್, ಪಿಡಿಓ ರಸ್ತೆ ಜರಿದಿರುವ ಪ್ರದೇಶಕ್ಕೆ ಭೇಟಿ ನೀಡಿದ್ದಾರೆ. ಕೆಲಸ ನಡೆಯುತ್ತಿದೆ ಎಂದರು. ದೊಡ್ಡ ಮೊತ್ತ ಬೇಕಾಗಿರುವುದರಿಂದ ಜಿ.ಪಂ ಹಾಗೂ ತಾ.ಪಂಗೆ ಪತ್ರ ಬರೆಯಬೇಕಿದೆ ಎಂದು ಪಿಡಿಓ ಹೇಳಿದರು.
ಕಡಿರುದ್ಯಾವರ ಮಲ್ಲಡ್ಕ ಜಂಕ್ಷನ್, ಶಾಲೆ ಇರುವ ಪ್ರದೇಶದಲ್ಲಿ ದಾರಿದೀಪ ಅಳವಡಿಸಬೇಕು. ರಾತ್ರಿ ವಾಹನಗಳ ಓಡಾಟ ಇರುತ್ತದೆ. ದಾರಿದೀಪ ಅಗತ್ಯವಿದೆ ಎಂದು ಗ್ರಾಮಸ್ಥರು ತಿಳಿಸಿದರು.
ಶೀಘ್ರವಾಗಿ ದಾರಿದೀಪ ವಿಸ್ತರಿಸುವ ಬಗ್ಗೆ ಕ್ರಮ ಕೈಗೊಳ್ಳಲಾಗುವುದು ಎಂದು ಪಂಚಾಯತ್ ಭರವಸೆ ನೀಡಿತು.
ಕಡಿರುದ್ಯಾವರ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಸಂಜೆ 6 ಗಂಟೆಗೆ ವಿದ್ಯುತ್ ಆಫ್ ಆದರೆ ಬರುವಂತದ್ದು ಮರುದಿನ ಬೆಳಿಗ್ಗೆ 8 ಗಂಟೆಗೆ.ವಿದ್ಯುತ್ ಸಮಸ್ಯೆ ಎದುರಾದಾಗ ಲೈನ್ ಮ್ಯಾನ್ ಗೆ ಕಾಲ್ ಮಾಡಿದಾಗ ಸರಿಯಾಗಿ ರೆಸ್ಪಾನ್ಸ್ ಇಲ್ಲ. ಕೆಲವು ಲೋಕಲ್ ಕಾಂಜಿಪಿಂಜಿಗಳಿಗೆ ಕಾಲ್ ಮಾಡಿ ಲೈನ್ ಮ್ಯಾನ್ ಗಳು ಕೆಲಸ ಮಾಡಿಸುತ್ತಾರೆ. ಇದರಿಂದ ಅನಾಹುತವಾದರೇ ಯಾರು ಹೊಣೆ ಎಂದು ಸಂತೋಷ್ ವಳಂಬ್ರ ಮೆಸ್ಕಾಂ ಅಧಿಕಾರಿಯನ್ನು ಪ್ರಶ್ನಿಸಿದರು.
ಮಿತ್ತಬಾಗಿಲು, ಕೊಲ್ಲಿ, ಕಡಿರುದ್ಯಾವರ ಪರಿಸರದಲ್ಲಿ ವಾಲ್ಟೇಜ್ ಇಲ್ಲ. ಟ್ರೀ ಕಟ್ಟಿಂಗ್ ಮಾಡುವುದಿಲ್ಲ. ವಯರ್ ಕಟ್ ಆಗಿ ಬಿದ್ದು ಮೂರು ದಿವಸ ಆದ್ರು ಲೈನ್ ಮ್ಯಾನ್ ಗಳು ಸ್ಪಂದಿಸುವುದಿಲ್ಲ. ಹಿಂದಿನ ಲೈನ್ ಮ್ಯಾನ್ ರಮೇಶ್ ಅವರು ಉತ್ತಮ ಕೆಲಸ ಮಾಡುತ್ತಿದ್ದರು. ಅವರ 50% ಕೆಲಸ ಈಗಿನವರು ಮಾಡುವುದಿಲ್ಲ ಎಂದು ಗ್ರಾಮಸ್ಥರು ಮೆಸ್ಕಾಂ ಇಲಾಖೆಯನ್ನು ತರಾಟೆಗೆ ತೆಗೆದುಕೊಂಡರು.
ಕಾನರ್ಪದಲ್ಲಿ ಪವರ್ ಇಲ್ಲ. ಹಳೆ ತಂತಿ ತೆಗೆದು ಹೊಸ ತಂತಿ ಜೋಡನೆ ಮಾಡಬೇಕು. ಒಂದಕ್ಕೊಂದು ವಯರ್ ಟಚ್ ಆಗುತ್ತಿದೆ. ಲೈನ್ ಮ್ಯಾನ್ ಗೆ ಜಂಪರ್ ಎಲ್ಲಿದೆ ಎಂದು ಗೊತ್ತಿಲ್ಲ ಎಂದು ಗ್ರಾಮಸ್ಥರು ದೂರಿದರು. ಬರುವ ಗ್ರಾಮ ಸಭೆಯ ಒಳಗೆ ಎಲ್ಲ ಸಮಸ್ಯೆ ಪರಿಹಾರವಾಗಬೇಕು ಎಂದು ಗ್ರಾಮಸ್ಥರು ತಿಳಿಸಿದರು. ಮುಂದಿನ ದಿನದಲ್ಲಿ ಈ ಭಾಗಕ್ಕೆ ಅನುಭವಿ ಲೈನ್ ಮ್ಯಾನ್ ಅವರನ್ನು ನೇಮಿಸಬೇಕು ಎಂದು ಗ್ರಾಮಸ್ಥ ಸುರೇಶ್ ಕೌಡಂಗೆ ತಿಳಿಸಿದರು.
ಮೆಸ್ಕಾಂ ಅಧಿಕಾರಿ ಮಾತನಾಡಿ ನಾವು 2 ಗಂಟೆ ರಾತ್ರಿಯು ಕಾಲ್ ರಿಸೀಮ್ ಮಾಡುತ್ತೇವೆ. ಈ ಭಾಗದಲ್ಲಿ ಮೊಬೈಲ್ ನೆಟ್ವರ್ಕ್ ಸಮಸ್ಯೆ ಇದೆ. ನಮ್ಮ ಕೆಲಸವನ್ನು ನಾವು ಮಾಡುತ್ತಿದ್ದೇವೆ. ಮುಂದಿನ ಗ್ರಾಮಸಭೆಯ ಒಳಗೆ ಸಮಸ್ಯೆಗಳನ್ನು ಬಗೆ ಹರಿಸುವ ಭರವಸೆ ನೀಡಿದರು.
ಮುಂಡಾಜೆ ಡ್ಯಾಮ್ ನಿಂದ ಕಡಿರುದ್ಯಾವರ ಪ್ರದೇಶದಲ್ಲಿ ಆನೆ ಹಾವಳಿ ಇದೆ. ಇದನ್ನು ತಡೆಗಟ್ಟುವ ವ್ಯವಸ್ಥೆ ಆಗಬೇಕು. ಅರಣ್ಯ ಸಮಿತಿ ಮಾಡಬೇಕು ಎಂದು ರಾಘವೇಂದ್ರ ಭಟ್ ಅರಣ್ಯ ಇಲಾಖೆಯ ಅಧಿಕಾರಿಯಲ್ಲಿ ಒತ್ತಾಯಿಸಿದರು. ಮರ ಕಡಿದು ವಾಹನಗಳ ಓಡಾಟದಿಂದ ಕಾನರ್ಪ- ಇಂದಬೆಟ್ಟು ರಸ್ತೆ ಹಾಳಾಗಿದೆ.ಅದನ್ನು ಅರಣ್ಯ ಇಲಾಖೆ ಸರಿಪಡಿಸಿ ಕೊಡುತ್ತಿರ ಎಂದು ಸುರೇಶ್ ಕೌಡಂಗೆ ತಿಳಿಸಿದರು.ಅರಣ್ಯ ಇಲಾಖಾ ಅಧಿಕಾರಿ ಸಮಸ್ಯೆಗಳನ್ನು ಪರಿಹರಿಸುವ ಭರವಸೆ ನೀಡಿದರು.
ವೇದಿಕೆಯಲ್ಲಿ ಪಂಚಾಯತ್ ಉಪಾಧ್ಯಕ್ಷೆ ಸಾವಿತ್ರಿ, ಪಂ.ಅ.ಅಧಿಕಾರಿ ರವಿ ಬಸಪ್ಪ ಗೌಡ್ರ, ಕಾರ್ಯದರ್ಶಿ ಜನಾರ್ಧನ ಗೌಡ ಪಂಚಾಯತ್ ಸದಸ್ಯರು, ವಿವಿಧ ಇಲಾಖೆಯ ಇಲಾಖಾಧಿಕಾರಿಗಳು ಉಪಸ್ಥಿತರಿದ್ದರು.