ಸನಾತನ ಸಂಸ್ಥೆ ಅಧ್ಯಾತ್ಮಪ್ರಸಾರ ಮಾಡುವ ಸಂಸ್ಥೆಯಾಗಿದೆ. ಜಿಜ್ಞಾಸುಗಳಿಗೆ ಅಧ್ಯಾತ್ಮವನ್ನು ಶಾಸ್ತ್ರೀಯ ಭಾಷೆಯಲ್ಲಿ ಪರಿಚಯ ಮಾಡಿಕೊಡುವುದು, ಹಾಗೆಯೇ ಸಾಧಕರಿಗೆ ವೈಯಕ್ತಿಕ ಸಾಧನೆಯ ಬಗ್ಗೆ ಮಾರ್ಗದರ್ಶನ ನೀಡಿ ಈಶ್ವರಪ್ರಾಪ್ತಿಯ ಮಾರ್ಗವನ್ನು ತೋರಿಸುವುದು ಸಂಸ್ಥೆಯ ಮುಖ್ಯ ಉದ್ದೇಶವಾಗಿದೆ. ಸಾಧನೆಯನ್ನು ಮಾಡುವ ಜೀವಗಳ ದೃಷ್ಟಿಯಿಂದ ‘ಗುರುಪೂರ್ಣಿಮೆ’ಯು ಒಂದು ಅತ್ಯಂತ ಮಹತ್ವದ ದಿನವಾಗಿದೆ. ಗುರುಪೂರ್ಣಿಮೆಯ ನಿಮಿತ್ತ ನಾವು ಜೀವನದಲ್ಲಿ ಗುರುಗಳ ಮಹತ್ವ ಹಾಗೂ ಗುರುಕೃಪೆಯು ಹೇಗೆ ಕಾರ್ಯ ಮಾಡುತ್ತದೆ?
ಆಷಾಢ ಶುದ್ಧ ಹುಣ್ಣಿಮೆಗೆ ಗುರುಪೂರ್ಣಿಮೆ ಎನ್ನುತ್ತಾರೆ. ಈ ವರ್ಷ ಜುಲೈ 21 ರಂದು ಗುರುಪೂರ್ಣಿಮೆಯಿದೆ. ಗುರುಪೂರ್ಣಿಮೆ ಎಂದರೆ ಗುರುಗಳ ಬಗ್ಗೆ ಕೃತಜ್ಞತೆಯನ್ನು ವ್ಯಕ್ತಪಡಿಸುವ ದಿನ! ಗುರು ಮತ್ತು ಈಶ್ವರನಲ್ಲಿ ವ್ಯತ್ಯಾಸವಿಲ್ಲ. ಗುರು ಎಂದರೆ ಈಶ್ವರನ ಸಗುಣ ಸಾಕಾರ ರೂಪ! ಸಾಧನೆಯನ್ನು ಮಾಡುವ ಪ್ರತಿಯೊಂದು ಜೀವಕ್ಕಾಗಿ ಗುರುಗಳು ತತ್ತ್ವರೂಪದಲ್ಲಿ ಅಖಂಡವಾಗಿ ಕಾರ್ಯನಿರತರಾಗಿರುತ್ತಾರೆ.
ಗುರು ಈ ಪದದ ಅರ್ಥ : ಗುರು ಎಂಬ ಪದವು ಗು ಮತ್ತು ರು ಈ ಎರಡು ಅಕ್ಷರಗಳಿಂದ ರೂಪುಗೊಂಡಿದೆ. ‘ಗು’ಕಾರ ಎಂದರೆ ಅಜ್ಞಾನರೂಪಿ ಅಂಧಕಾರ ಮತ್ತು ‘ರು’ಕಾರ ಎಂದರೆ ಆ ಅಂಧಕಾರವನ್ನು ನಾಶ ಮಾಡುವ ಜ್ಞಾನರೂಪಿ ತೇಜಸ್ಸು. ಅಜ್ಞಾನರೂಪಿ ಅಂಧಕಾರವನ್ನು ಜ್ಞಾನರೂಪಿ ತೇಜಸ್ಸಿನಿಂದ ಹೋಗಲಾಡಿಸುವವನು ಗುರು.
ಗುರುಪರಂಪರೆಯ ಇತಿಹಾಸ : ಗುರುಪರಂಪರೆಗೆ ಮೂಲವಿರುವುದಿಲ್ಲ: ಅನಾದಿ ಕಾಲದಿಂದ ನಡೆದು ಬಂದಿರುವ ಗುರುಪರಂಪರೆಯು ಕೊನೆಗೆ ಈಶ್ವರನನ್ನು ತಲುಪುತ್ತದೆ. ವೈಷ್ಣವ ಸಂಪ್ರದಾಯದಲ್ಲಿನ ಗುರು-ಶಿಷ್ಯ ಪರಂಪರೆಯು ಶ್ರೀವಿಷ್ಣು-ನಾರದರಿಂದ ಪ್ರಾರಂಭವಾಗಿದೆ. ಶೈವ ಸಂಪ್ರದಾಯದಲ್ಲಿ ಶಿವನು ಆದಿಗುರು ಆಗಿದ್ದಾನೆ.
ಗುರುಗಳ ಮಹತ್ವ : ಗುರುಗಳಿಂದಲೇ ಶಿಷ್ಯನು ಜನ್ಮಮೃತ್ಯುವಿನ ಚಕ್ರದಿಂದ ಬಿಡುಗಡೆಯಾಗುವುದರಿಂದ ಶಿಷ್ಯನ ಜೀವನದಲ್ಲಿ ಗುರುಗಳಿಗೆ ಅಸಾಧಾರಣ ಮಹತ್ವವಿದೆ. ಶ್ರೀಗುರುಗಳ ಮಹಿಮೆಯನ್ನು ಶಬ್ದಗಳಲ್ಲಿ ವರ್ಣಿಸುವುದು ಅಸಾಧ್ಯವೇ ಆಗಿದೆ. ಶ್ರೀಗುರುಗಳು ಒಬ್ಬ ಶಿಲ್ಪಿಯಂತೆ ಇರುತ್ತಾರೆ. ಶಿಲೆಯಲ್ಲಿ ಯಾರಿಗೆ ಮೂರ್ತಿಯು ಕಾಣಿಸುತ್ತದೆಯೋ ಅವನೇ ಅದರಲ್ಲಿರುವ ಅನವಶ್ಯಕ ಭಾಗಗಳನ್ನು ತೆಗೆದು ಅದಕ್ಕೆ ಆಕಾರವನ್ನು ನೀಡಬಲ್ಲನು ಮತ್ತು ಮೂರ್ತಿಯನ್ನು ಕೆತ್ತಬಲ್ಲನು. ಗುರುಗಳು ಅದೇ ರೀತಿ ಶಿಷ್ಯನ ಜೀವನದ ದೋಷ, ಅಹಂ ಮತ್ತು ಮಾಯೆಯ ಆವರಣವನ್ನು ದೂರಗೊಳಿಸಿ ಆಂತರ್ಯದಲ್ಲಿರುವ ಈಶ್ವರೀ ತತ್ತ್ವವನ್ನು ಜಾಗೃತಗೊಳಿಸುತ್ತಾರೆ. ಮತ್ತು ಶಿಷ್ಯನನ್ನು ಗುರುಗಳ ಸಮಾನ ಮಾಡಿಬಿಡುತ್ತಾರೆ. ಸ್ಪರ್ಶಮಣಿಯು ಕಬ್ಬಿಣವನ್ನು ಚಿನ್ನವನ್ನಾಗಿ ರೂಪಾಂತರಿಸುತ್ತದೆ. ಆದರೆ ಇನ್ನೊಂದು ಸ್ಪರ್ಶಮಣಿಯನ್ನು ತಯಾರಿಸಲಾರದು. ಕಲ್ಪತರುವು ನಮಗೆ ಏನು ಬೇಕೋ ಅದೆಲ್ಲವನ್ನೂ ನೀಡಬಲ್ಲದು. ಆದರೆ ಅದಕ್ಕಾಗಿ ಪ್ರಾರ್ಥನೆಯನ್ನು ಮಾಡಬೇಕಾಗುತ್ತದೆ. ಗುರುಗಳು ಮಾತ್ರ ಶಿಷ್ಯನನ್ನು ಗುರುಸಮಾನರಾಗಿ ಮಾಡಿಬಿಡುತ್ತಾರೆ. ತಂದೆತಾಯಿ ಜೀವಕ್ಕೆ ಜನ್ಮ ನೀಡುತ್ತಾರೆ; ಆದರೆ ಗುರುಗಳು ಅವನನ್ನು ಜನ್ಮ ಮೃತ್ಯುವಿನ ಚಕ್ರದಿಂದ ಮುಕ್ತಗೊಳಿಸುತ್ತಾರೆ.
ಗುರುತತ್ತ್ವ ಒಂದೇ! : ಎಲ್ಲ ಗುರುಗಳು ಬಾಹ್ಯತಃ ಸ್ಥೂಲದೇಹದಿಂದ ಬೇರೆಬೇರೆ ಅನಿಸಿದರೂ ಆಂತರ್ಯದಿಂದ ಒಂದೇ ಆಗಿರುತ್ತಾರೆ. ಹೇಗೆ ದನದ ಎಲ್ಲ ಕೆಚ್ಚಲಿನಿಂದ ಒಂದೇ ರೀತಿಯಲ್ಲಿ ಶುದ್ಧ, ನಿರ್ಮಲ ಹಾಲು ಬರುತ್ತದೆಯೋ ಅದೇ ರೀತಿ ಪ್ರತಿಯೊಬ್ಬ ಗುರುವಿನಲ್ಲಿರುವ ಗುರುತತ್ತ್ವವು ಒಂದೇ ಆಗಿರುವುದರಿಂದ ಅವರಿಂದ ಬರುವ ಆನಂದದ ಲಹರಿಗಳು ಸಹ ಸಮಾನವಾಗಿರುತ್ತದೆ. ಶಾಶ್ವತ ಆನಂದವನ್ನು ದೊರಕಿಸಿಕೊಡುವುದು ಗುರುಗಳ ನಿಜವಾದ ಕಾರ್ಯವಾಗಿರುತ್ತದೆ.
ಗುರುಕೃಪೆಯು ಹೇಗೆ ಕಾರ್ಯವನ್ನು ಮಾಡುತ್ತದೆ?: ಗುರುಕೃಪೆಯು ಸಂಕಲ್ಪ ಮತ್ತು ಅಸ್ತಿತ್ವ ಈ ಎರಡು ವಿಧಗಳಿಂದ ಕಾರ್ಯ ಮಾಡುತ್ತದೆ. ಶಿಷ್ಯನ ಆಧ್ಯಾತ್ಮಿಕ ಉನ್ನತಿಯಾಗಲಿ ಎಂಬ ಸಂಕಲ್ಪವು ಗುರುಗಳ ಮನಸ್ಸಿಗೆ ಬಂದೊಡನೆ ಶಿಷ್ಯನ ನಿಜವಾದ ಉನ್ನತಿಯಾಗುತ್ತದೆ. ಇದನ್ನೇ ಗುರುಕೃಪೆ ಎನ್ನುತ್ತಾರೆ. ಗುರುಗಳ ಕೇವಲ ಅಸ್ತಿತ್ವದಿಂದ, ಸಾನಿಧ್ಯದಿಂದ ಅಥವಾ ಸತ್ಸಂಗದಿಂದ ಶಿಷ್ಯನ ಸಾಧನೆ ಮತ್ತು ಉನ್ನತಿಯು ತನ್ನಿಂದತಾನೆ ಆಗುತ್ತದೆ. ಅಧ್ಯಾತ್ಮದಲ್ಲಿ ನಾವಾಗಿ ಗುರುಗಳನ್ನು ಮಾಡಿಕೊಳ್ಳಲು ಇರುವುದಿಲ್ಲ. ಗುರುಗಳು ಶಿಷ್ಯನೆಂದು ನಮ್ಮನ್ನು ಸ್ವೀಕರಿಸಬೇಕಿರುತ್ತದೆ. ಉತ್ತಮ ಶಿಷ್ಯನಾಗಲು ಗುರುಗಳಿಗೆ ಏನು ಇಷ್ಟವಾಗುತ್ತದೆ ಅದನ್ನು ನಾವು ಮಾಡಬೇಕು, ಅಂದರೆ ತಳಮಳದಿಂದ ಸಾಧನೆಯನ್ನು ಮಾಡಬೇಕು. ಗುರುಗಳ ಅಥವಾ ಸಂತರ ಕಾರ್ಯ ಸಂಪೂರ್ಣ ಸಮಾಜಕ್ಕೆ ಅಧ್ಯಾತ್ಮದ ಮಾಧುರ್ಯವನ್ನು ನೀಡಿ ಸಾಧನೆಯನ್ನು ಮಾಡಲು ಉದ್ಯುಕ್ತಗೊಳಿಸುವುದು. ನಾವು ಅಧ್ಯಾತ್ಮ ಪ್ರಸಾರದ ಕಾರ್ಯದಲ್ಲಿ ನಮ್ಮದೇ ಪರಿಯಿಂದ ಜೀವತೇದು ಸಹಭಾಗಿಯಾದಲ್ಲಿ ಗುರುಗಳಿಗೆ, ‘ಇವನು ತನ್ನವನು’ ಅನಿಸುತ್ತದೆ ಮತ್ತು ಗುರುಕೃಪೆಯಾಗುತ್ತದೆ. ಗುರುಗಳು ಆತ್ಮಜ್ಞಾನವನ್ನೇ ನೀಡುತ್ತಿರುವುದರಿಂದ ಗುರುಗಳಿಗಾಗಿ ಏನು ಮಾಡಿದರೂ ಅದು ಅಲ್ಪವೇ ಇರುತ್ತದೆ.
ಗುರುಗಳ ಮಹಾನತೆ: ಈ ಜಗತ್ತಿನಲ್ಲಿ ನಿಜವಾದ ಸಂಬಂಧ ಯಾವುದಾದರೂ ಇದೆ ಅಂದರೆ ಅದು ಗುರು-ಶಿಷ್ಯ ಸಂಬಂಧ ಮಾತ್ರವೇ. ಗುರುಗಳು ಯಾರನ್ನು ಸ್ವೀಕರಿಸುತ್ತಾರೋ ಅವನನ್ನು ದೇವತೆಗಳೂ ಸ್ವೀಕರಿಸುತ್ತಾರಾದ್ದರಿಂದ ಸಹಜವಾಗಿಯೇ ಆ ಜೀವಿಯ ಕಲ್ಯಾಣವಾಗುತ್ತದೆ. ಸದ್ಗುರುಗಳು ತಮ್ಮ ಶಿಷ್ಯನನ್ನು ಕ್ಷಣಾರ್ಧದಲ್ಲಿ ಮೋಕ್ಷಕ್ಕೆ ಅಧಿಕಾರಿಯನ್ನಾಗಿ ಮಾಡುತ್ತಾರೆ. ಹಿಂದೂ ಸಂಸ್ಕೃತಿಯಲ್ಲಿ ಗುರುಗಳಿಗೆ ಭಗವಂತನಿಗಿಂತಲೂ ಮಿಗಿಲಾದ ಸ್ಥಾನವನ್ನು ಕೊಡಲಾಗಿದೆ; ಸೂರ್ಯನು ಉದಯಿಸುವುದರಿಂದ ಹೂಗಳು ಅರಳುತ್ತವೆ. ಅಂತೆಯೇ ಗುರುಗಳ ಅಸ್ತಿತ್ವದಿಂದ ಶಿಷ್ಯನ ಉನ್ನತಿಯಾಗುತ್ತದೆ. ಗುರುಗಳ ಕೃಪೆ ಅಥವಾ ಆಶೀರ್ವಾದದಿಂದ ಜೀವಿಯ ಪ್ರಾರಬ್ಧಾಧೀನ ಸಂಗತಿಗಳು ದೈವಾಧೀನವಾಗಿ ಬಿಡುತ್ತವೆ. ಗುರುಗಳಿಂದ ಪ್ರಾರಬ್ಧವನ್ನು ಭೋಗಿಸುವ ಕ್ಷಮತೆಯೂ ಹೆಚ್ಚುತ್ತದೆ. ಗುರುಪೂರ್ಣಿಮೆಯಂದು ಗುರುತತ್ತ್ವವು ಒಂದು ಸಾವಿರ ಪಟ್ಟು ಹೆಚ್ಚು ಪ್ರಮಾಣದಲ್ಲಿ ಕಾರ್ಯನಿರತವಾಗಿರುತ್ತದೆ. ಹಾಗಾಗಿ ಗುರುಪೂರ್ಣಿಮೆ ನಿಮಿತ್ತ ಮಾಡಿದ ಸೇವೆ, ತ್ಯಾಗ ಇವುಗಳ ಆಧ್ಯಾತ್ಮಿಕ ಲಾಭವು ಇತರ ದಿನಗಳಂದು ಮಾಡಿದ ಸೇವೆ ಮತ್ತು ತ್ಯಾಗದ ತುಲನೆಯಲ್ಲಿ ಒಂದು ಸಾವಿರ ಪಟ್ಟು ಹೆಚ್ಚು ಸಿಗುತ್ತದೆ.
-ವಿನೋದ್ ಕಾಮತ್
ರಾಜ್ಯ ವಕ್ತಾರರು, ಸನಾತನ ಸಂಸ್ಥೆ