ಬೆಳಾಲು: ಪರಿಸರ ಮತ್ತು ಜಲ ಸಂರಕ್ಷಣೆಯ ಕಾಳಜಿ ಇಂದಿನ ಅಗತ್ಯದ ಕಾರ್ಯಗಳಾಗಿವೆ. ಆದರೆ ಈ ಬಗ್ಗೆ ಗಂಭೀರ ಪ್ರಯತ್ನಗಳಾಗಲಿ, ನಿರಂತರ ಪ್ರಯೋಗಗಳಾಗಲಿ ನಡೆಯುತ್ತಿರುವುದು ವಿರಳವೆಂದೇ ಹೇಳಬಹುದು. ಹೇಳಿಕೆಗಳು, ವಾರ್ಷಿಕ ಸ್ಮರಣೆಯಂತೆ ಆಯೋಜನೆಗೊಳ್ಳುತ್ತಿರುವ ವನಮಹೋತ್ಸವ… ಪರಿಸರ ಸಂರಕ್ಷಣೆಯ ಪಾಠ, ಜಲಸಂರಕ್ಷಣೆಯ ಮಾದರಿಗಳು ಧಾರಾಳವಾಗಿ ಕಾಣಸಿಗುತ್ತದೆ. ಶೈಕ್ಷಣಿಕ ಕಾರ್ಯಕ್ರಮವಾಗಿಯೂ ಎಲ್ಲೆಡೆ ಜರಗುತ್ತಲಿವೆ. ಒಳ್ಳೆಯದೆ… ಆದರೆ ನಮಗೆ ಬೇಕಾದ್ದು ಮಾದರಿ ಕಾರ್ಯಕ್ರಮಗಳಲ್ಲ, ನೈಜ ಕಾಳಜಿಯ ಪ್ರಯೋಗಗಳು. ಇಂತದ್ದಕ್ಕೆಲ್ಲ ಉದಾಹರಣೆಯಾಗಿ ಬೆಳಾಲು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪ್ರೌಢಶಾಲೆಯ ಪರಿಸರ ಮತ್ತು ಜಲಸಂರಕ್ಷಣೆಯ ಕಾರ್ಯಗಳು ಮಾದರಿಯಾಗಿದೆ.
ಬೆಳಾಲು ಪ್ರೌಢಶಾಲೆಯಲ್ಲಿ ಕಳೆದ ಇಪ್ಪತ್ತು ವರ್ಷಗಳ ಹಿಂದೆ ಶ್ರೀ ಪಡ್ರೆಯವರಿಂದ ನಡೆದ ಜಲಸಂರಕ್ಷಣೆಯ ಕಾರ್ಯಾಗಾರದ ಫಲ ರೂಪವಾಗಿ, ಇವತ್ತು ಬೆಳಾಲು ಪ್ರೌಢಶಾಲೆಯು ಸುಂದರ ಪರ್ಯಾವರಣ ಪ್ರದೇಶವಾಗಿ ಕಂಗೊಳಿಸುತ್ತಿದೆ.
ಆಡಳಿತ ಮಂಡಳಿಯ ಮಾರ್ಗದರ್ಶನದಲ್ಲಿ, ಮುಖ್ಯೋಪಾಧ್ಯಾಯರಾದ ರಾಮಕೃಷ್ಣ ಭಟ್ಟರ ನೇತೃತ್ವದಲ್ಲಿ, ಶಿಕ್ಷಕರ ಕ್ರಿಯಾಶೀಲತೆಯಿಂದಾಗಿ ಶಾಲಾವರಣವು ಸ್ವಚ್ಛ…ಹಚ್ಚಹಸಿರಿನ, ಎಲ್ಲೆಂದರಲ್ಲಿ ಹರಿಯುವ ನೀರು ಅಲ್ಲಲ್ಲೇ ಇಂಗುವ ಮಾದರಿ ಆವರಣವಾಗಿದೆ.
ಬೆಳಾಲು ಪ್ರೌಢಶಾಲೆಯ ಜಲಸಂರಕ್ಷಣೆಯ ಪ್ರಯೋಗಗಳು ಇದೀಗ ನಿತ್ಯ ಪಾಠ ಹೇಳುವ ತಾಣಗಳಾಗಿವೆ. ಗಿಡ ನೆಡುವ ಕಾರ್ಯಕ್ರಮ ಮಾಡಿ, ಇಕೊ ಕ್ಲಬ್ ರಚಿಸಿ… ವರದಿ ನೀಡಿ ಎಂದು ಶಿಕ್ಷಣ ಇಲಾಖೆ ಏನು ಹೇಳುತ್ತದೊ ಅದನ್ನು ವಿಶಿಷ್ಟ ರೀತಿಯಲ್ಲಿ ಜಾರಿಗೊಳಿಸಿ, ಅದನ್ನೇ ಶಾಶ್ವತ ಕಾರ್ಯಗಳನ್ನಾಗಿಸಿದೆ.
ಸದ್ಯ ಬೆಳಾಲು ಪ್ರೌಢಶಾಲೆಯ ಎಂಟೂವರೆ ಎಕರೆ ವಿಸ್ತೀರ್ಣದಲ್ಲಿ ಮೈದಾನ, ರಸ್ತೆ, ಕಟ್ಟಡ ಹೊರತುಪಡಿಸಿದರೆ ಮತ್ತೆ ಕಾಣುವುದು ಬರೀ ಹಸಿರು ಹಸಿರು. ಆರಂಭದಲ್ಲಿ ನೀರು ಸಹಜವಾಗಿ ಹರಿದು ಹೋಗುವ ಪ್ರದೇಶವನ್ನು ಗುರುತಿಸಿಕೊಂಡು ಅಲ್ಲೆಲ್ಲ ಸಣ್ಣದು,ದೊಡ್ಡದು, ಉದ್ದದ, ಸರಪಣಿ ಹೊಂಡಗಳ ಮೂಲಕ ಜೊತೆಗೆ ಸಸಿ ನೆಡುವ ಕೆಲಸ ಮಾಡಲಾಗಿತ್ತು. ಜಲಸಂರಕ್ಷಣೆಯ ಕೃತಕ ಪ್ರಯೋಗಗಳು ಇದೀಗ ಶಾಶ್ವತ ಮಾದರಿಗಳಾಗಿ, ಹಸಿರು ತುಂಬಿಕೊಳ್ಳುತ್ತಾ ಸಹಜವಾಗಿ ನೀರಿಂಗುವಿಕೆಯ ಪ್ರದೇಶವಾಗಿ ಪರಿವರ್ತಿತವಾಗಿದೆ. ಈ ಹಿನ್ನೆಲೆಯಲ್ಲಿ ಶಾಲಾ ಸುತ್ತಮುತ್ತ, ಆಟದ ಮೈದಾನದ ಬದಿಯುದ್ದಕ್ಕೂ ಮಾವು, ಹಲಸು, ಹೆಬ್ಬಲಸು, ಪುನರ್ಪುಳಿ, ರೆಂಜ, ನೇರಳೆ ಇತ್ಯಾದಿ ಇನ್ನೂರಕ್ಕಿಂತಲೂ ಅಧಿಕ ಕಾಡು ಹಣ್ಣುಹಂಪಲು ಸಸ್ಯಗಳನ್ನು ಬೆಳೆಸಲಾಗಿದ್ದು, ಪ್ರಸ್ತುತ ಶಾಲೆಯು ಸಮೃದ್ಧ ಸಸ್ಯ ಶ್ಯಾಮಲೆಯಾಗಿದೆ.
ಇಲ್ಲಿ ನೋಡಲೇಬೇಕಾದ ಇನ್ನೊಂದು ತಾಣವೆಂದರೆ ಮದಕ. ಕಳೆದ ವರ್ಷ ರೂಪುಗೊಂಡ ಈ ಮದಕವು ಇದೀಗ ತುಂಬಿ ತುಳುಕುತ್ತಾ ನೋಡುಗರನ್ನು ಪುಳಕಿತಗೊಳಿಸುತ್ತಿದೆ.
ಒಟ್ಟಾರೆಯಾಗಿ ಹೇಳುವುದಾದರೆ; ಶಿಕ್ಷಣ ಕೇಂದ್ರವೊಂದು ಜಲಸಂರಕ್ಷಣೆಯ ಮೂಲಕ ಊರಿಗೇ ಬದುಕಿನ ಪಾಠ ಹೇಳುವ ತಾಣವಾಗಿ ರೂಪುಗೊಂಡದ್ದು ಹೆಮ್ಮೆಯ ಸಂಗತಿಯಾಗಿದೆ.