ಬೆಳ್ತಂಗಡಿ: ದೇಶದಲ್ಲಿ ಸುವ್ಯವಸ್ಥಿತ ಆಡಳಿತ ನಡೆಯಬೇಕಾದರೆ ಪ್ರತಿಯೊಬ್ಬರು ಸಂವಿಧಾನಿಕ ಕಾನೂನುಗಳನ್ನು ಪಾಲಿಸಲೇಬೇಕು ಎಂದು ಬೆಳ್ತಂಗಡಿಯ ಪ್ರಧಾನ ಸಿವಿಲ್ ನ್ಯಾಯಾಧೀಶರಾದ ಸಂದೇಶ.ಕೆ ಹೇಳಿದರು. ಅವರು ತಾಲೂಕು ಕಾನೂನು ಸೇವೆಗಳ ಸಮಿತಿ ಬೆಳ್ತಂಗಡಿ ಮತ್ತು ವಕೀಲರ ಸಂಘ ಬೆಳ್ತಂಗಡಿ ಹಾಗೂ ವಾಣಿ ಪದವಿ ಪೂರ್ವ ಕಾಲೇಜಿನ ಕಾನೂನು ಸಾಕ್ಷರತಾ ಸಂಘದ ಆಶ್ರಯದಲ್ಲಿ ಜರುಗಿದ ಕಾನೂನು ಅರಿವು ಕಾರ್ಯಕ್ರಮವನ್ನು ಉದ್ಘಾಟಿಸಿ ಪೋಕ್ಸೊ ಕಾಯಿದೆಯ ಕುರಿತು ಮಾತನಾಡುತ್ತಾ, ವಿದ್ಯಾರ್ಥಿಗಳು ಕಾನೂನುಗಳ ಅರಿವನ್ನು ಹೊಂದಿರಬೇಕು. ಸಾರ್ವಜನಿಕವಾಗಿ ವ್ಯವಹರಿಸುವಾಗ ಜಾಗೃತವಾಗಿರಬೇಕು. ಲೈಂಗಿಕ ಅಪರಾಧಗಳಿಗೆ ಬಲಿಯಾಗದೆ ಸುಸ್ಥಿರ ಸಮಾಜದ ವಾರಿಸುದಾರರಾಗಬೇಕು ಎಂದರು.
ಸಂಪನ್ಮೂಲ ವ್ಯಕ್ತಿಗಳಾದ ಬೆಳ್ತಂಗಡಿ ತಾಲೂಕು ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿಗಳಾದ ನವೀನ್ ಬಿ.ಕೆ. ಪೋಕ್ಸೊ ಕಾಯಿದೆ ಹಾಗೂ ಬಾಲ್ಯ ವಿವಾಹದ ಕುರಿತು ವಿದ್ಯಾರ್ಥಿಗಳಿಗೆ ಮಾಹಿತಿಯನ್ನು ನೀಡುತ್ತಾ ಹದಿಹರೆಯದ ವಿದ್ಯಾರ್ಥಿಗಳು ಲೈಂಗಿಕ ತೊಂದರೆಗೆ ಒಳಗಾದಾಗ ಅವರ ಸಂರಕ್ಷಣೆ ಮತ್ತು ಅಪರಾಧಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಪೋಕ್ಸೊ ಕಾಯಿದೆ ಕರ್ತವ್ಯ ನಿರ್ವಹಿಸುತ್ತದೆ. ಬಾಲ್ಯ ವಿವಾಹದಂತಹ ಸಮಸ್ಯೆಗಳಿಂದ ಮುಕ್ತರಾಗಿ ಸಂವಿಧಾನ ನೀಡಲ್ಪಟ್ಟ ಹಕ್ಕುಗಳ ಬಗ್ಗೆ ತಿಳಿದುಕೊಂಡು ವ್ಯವಹರಿಸಬೇಕು. ಇದರೊಂದಿಗೆ ಕರ್ತವ್ಯಕ್ಕೆ ಬದ್ಧರಾಗಿರಬೇಕು ಎಂದರು.
ವಾಣಿ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಗಣೇಶ್ ಗೌಡ ಅಧ್ಯಕ್ಷತೆ ವಹಿಸಿದ್ದರು. ಬೆಳ್ತಂಗಡಿ ತಾಲೂಕು ವಕೀಲರ ಸಂಘದ ಅಧ್ಯಕ್ಷರಾದ ವಸಂತ ಮರಕಡ, ಕಾಲೇಜಿನ ಉಪಪ್ರಾಂಶುಪಾಲ ವಿಷ್ಣುಪ್ರಕಾಶ್ ಎಂ. ಉಪಸ್ಥಿತರಿದ್ದರು. ಕಾಲೇಜಿನ ಪ್ರಾಂಶುಪಾಲರಾದ ಯದುಪತಿ ಗೌಡ ಸ್ವಾಗತಿಸಿದರು. ಕಾಲೇಜಿನ ಕಾನೂನು ಸಾಕ್ಷರತಾ ಸಂಘದ ಸಂಯೋಜಕರಾದ ಶ್ರೀಮತಿ ಮೀನಾಕ್ಷಿ ವಂದಿಸಿದರು. ಕು|ರಾಜೇಶ್ವರಿ ಕಾರ್ಯಕ್ರಮ ನಿರೂಪಿಸಿದರು.