ಮುಂಡಾಜೆ ಗ್ರಾಮದ ಸೋಮಂತಡ್ಕ ಮಜಲು ರಸ್ತೆ ನಡೆದು ಹೋಗಲು ಅಸಾಧ್ಯವಾದ ರಸ್ತೆಯಾಗಿ ಪರಿಣಮಿಸಿದೆ.
ಆ.1 ರಂದು ವಾಹನಗಳು ಈ ರಸ್ತೆಯಲ್ಲಿ ಸಿಲುಕಿಕೊಂಡು ಸಾರ್ವಜನಿಕರ ಸಹಕಾರದಿಂದ ಮೇಲೆತ್ತಲಾಯಿತು. ನಂತರ ಗ್ರಾಮ ಪಂಚಾಯತ್ ಸದಸ್ಯೆ ದಿಶಾ ದಿನೇಶ ಪಟವರ್ಧನ್ ಅವರ ನೇತೃತ್ವದಲ್ಲಿ ಸ್ಥಳೀಯರು ಸೇರಿ ಎರಡು ಲೋಡು ಚರಲು ಹಾಕಲಾಯಿತು.
ರಸ್ತೆಯ ಇಕ್ಕಲಗಳಲ್ಲಿ ಕಾಲುವೆಗಳು ಕಸದಿಂದ ತುಂಬಿದ್ದು, ಏಪ್ರಿಲ್ -ಮೇ ತಿಂಗಳಲ್ಲಿ ಗ್ರಾಮ ಪಂಚಾಯತ್ ಸರಿಯಾದ ಕಾಮಗಾರಿ ನಡೆಸದೆ ಇದ್ದುದರಿಂದ ಈ ರೀತಿಯಾಗಿದೆ ಎಂದು ಸ್ಥಳೀಯರು ದೂರಿಕೊಂಡಿದ್ದಾರೆ. ರಸ್ತೆಯ ಇಕ್ಕೆಲಗಳಲ್ಲಿ ರಬ್ಬರ್ ತೋಟಗಳಿದ್ದು ಮರದ ಗೆಲ್ಲುಗಳು ರಸ್ತೆಗೆ ಬಿದ್ದು ರಸ್ತೆ ಸಂಪೂರ್ಣ ಹಾಳಾಗಿದೆ.
ಸುಮಾರು 20 ವರ್ಷಗಳ ಹಿಂದೆ ಈ ರಸ್ತೆಗೆ ಡಾಮರೀಕರಣವಾಗಿದ್ದು ನಂತರ ಯಾವುದೇ ಕಾಮಗಾರಿ ನಡೆದಿಲ್ಲ. ಮಳೆಗಾಲದಲ್ಲಿ ಬಿಡಿ, ಬೇಸಿಗೆಯಲ್ಲೂ ನಡೆದು ಹೋಗಲು ಕಷ್ಟವಾಗುತ್ತಿದ್ದು, ನೂರಾರು ವಿದ್ಯಾರ್ಥಿಗಳು ಇದೇ ರಸ್ತೆಯಲ್ಲಿ ಶಾಲೆಗೆ ನಡೆದು ಬರುತ್ತಿದ್ದಾರೆ. ಮುಂಡಾಜೆ ಗ್ರಾಮ ಪಂಚಾಯತಿಯ ವ್ಯಾಪ್ತಿಯ ಮುಖ್ಯ ರಸ್ತೆಯಾಗಿ ಇರುವ ಈ ದಾರಿ ಸರಿಯಾಗಲು ಇನ್ನೆಷ್ಟು ಸಮಯ ಕಾಯಬೇಕೋ ಎಂದು ಸ್ಥಳೀಯರು ಹಿಡಿ ಶಾಪ ಹಾಕುತ್ತಿದ್ದಾರೆ.
ಈ ಹಿಂದೆ ಹಲವಾರು ಬಾರಿ ಮಜಲು ವಾಳ್ಯದ ಮಂದಿ ಶ್ರಮದಾನದ ಮೂಲಕ ಈ ರಸ್ತೆಯ ಕಲ್ಲು ಹೆಕ್ಕುವ, ಕಾಲುವೆಯನ್ನು ದುರಸ್ತಿಗೊಳಿಸುವ ಕಾರ್ಯ ಮಾಡಿದ್ದರು. ಈ ವರ್ಷದ ಮಳೆಗೆ ಎಲ್ಲವೂ ಕೊಚ್ಚಿ ಹೋಗಿದೆ. ಈ ಮಳೆಗಾಲವಂತು ಈ ರಸ್ತೆಗೆ ದ್ವಿಚಕ್ರ ವಾಹನವೂ ಸೇರಿದಂತೆ ಯಾವುದೇ ವಾಹನ ಸಂಚಾರ ಅಸಾಧ್ಯದ ಮಾತು. ಮುಂದಿನ ದಿನಗಳಲ್ಲಾದರೂ ಕಾಂಕ್ರೀಟೀಕರಣವಾಗಲಿ ಎನ್ನುವುದು ಸ್ಥಳೀಯರ ಆಶಯ. ಈ ಪ್ರದೇಶದ ಮತದಾರರು ಮತದಾನ ಬಹಿಷ್ಕರಿಸುವ ಬೆದರಿಕೆ ಹಾಕಿದ್ದರು. ಆಗ ರಾಜಕಾರಣಿಗಳು ಸರಿಪಡಿಸುವ ಆಶ್ವಾಸನೆ ನೀಡಿದ್ದರು. ಆದರೆ ನಂತರ ಎಲ್ಲರೂ ಮರೆತು ಹೋಗಿದೆ.
ಆದಷ್ಟು ಬೇಗ ಸಂಬಂಧ ಪಟ್ಟವರು ರಸ್ತೆಯ ದುರವಸ್ಥೆಯನ್ನು ಸರಿಪಡಿಸಿ, ಸಾರ್ವಜನಿಕರಿಗೆ ಅನುಕೂಲ ಕಲ್ಪಿಸುವಂತಾಗಲಿ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.