ಬೆಳ್ತಂಗಡಿ: ಬೆಳ್ತಂಗಡಿಯಲ್ಲಿ ನೂತನವಾಗಿ ನಿರ್ಮಿಸಿರುವ
ಪ್ರವಾಸಿ ಬಂಗ್ಲೆ ಕಾಮಗಾರಿಯಲ್ಲಿ ಕೋಟ್ಯಾಂತರ ರೂ. ಅವ್ಯವಹಾರ ವಾಗಿದ್ದು, ಈ ಬಗ್ಗೆ ತನಿಖೆ ನಡೆಸುತ್ತಿರುವ ಲೋಕಾಯುಕ್ತ ಮೇಲೆ ಒತ್ತಡ ಹೇರುವ ಪ್ರಕ್ರಿಯೆ ಕೆಲವರಿಂದ ನಡೆಯುತ್ತಿದ್ದು, ಈ ಪ್ರಕರಣವನ್ನು ಸರಕಾರ ಎಸ್.ಐ.ಟಿ ತನಿಖೆ ಒಳಪಡಿಸಬೇಕು ಎಂದು ಕೆ.ಪಿ.ಸಿ.ಸಿ ಕಾರ್ಯದರ್ಶಿ ರಕ್ಷಿತ್ ಶಿವರಾಂ ಆಗ್ರಹಿಸಿದರು.
ಅವರು ಆ.5 ರಂದು ಬೆಳ್ತಂಗಡಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಐ.ಬಿ ಕಾಮಗಾರಿ ಪೂರ್ಣಗೊಂಡ ಬಳಿಕ ಚುನಾವಣೆ ಘೋಷಣೆ ಆಗುವ ಸ್ವಲ್ಪ ದಿನ ಮೊದಲು 2 ಕೋಟಿ ರೂ. ಹೆಚ್ಚುವರಿ ಅನುದಾನವನ್ನು ಮಂಜೂರು ಗೊಳಿಸಲಾಗಿದೆ. ಇದರಲ್ಲಿ ಯಾವುದೇ ರೀತಿಯಲ್ಲಿ ಕಾನೂನನ್ನು ಪಾಲಿಸದೆ ಈ ಅನುದಾನವನ್ನು ಮಂಜೂರು ಗೊಳಿಸಲಾಗಿದೆ ಇದರಲ್ಲಿ ದೊಡ್ಡ ಮಟ್ಟದ ಅವ್ಯವಹಾರ ನಡೆದಿದೆ ಎಂದು ಆರೋಪಿಸಿದರು.
ಐ ಬಿ ಕಾಮಗಾರಿಯ ಅವ್ಯವಹಾರದ ಬಗ್ಗೆ ಲೋಕಾಯುಕ್ತರಿಗೂ ದೂರು ನೀಡಲಾಗಿದೆ ಇಲ್ಲಿ ತನಿಖೆ ನಡೆಯದಂತೆ ಒತ್ತಡ ಹೇರುವ ಕೆಲಸ ಕೆಲವರಿಂದ ನಡೆಯುತ್ತಿದೆ ಎಂದು ತಿಳಿಸಿದರು.
ಬೆಳ್ತಂಗಡಿಯ ಕೆಲವರು ಈ ತನಿಖೆ ನಡೆಯದಂತೆ ಒತ್ತಡ ಹೇರುವ ಪ್ರಯತ್ನ ನಡೆಸುತ್ತಿದ್ದಾರೆ ಅವರು ಇದನ್ನು ನಿಲ್ಲಿಸದಿದ್ದರೆ ಮುಂದಿನ ದಿನಗಳಲ್ಲಿ ಅವರ ಹೆಸರನ್ನು ಬಹಿರಂಗ ಗೊಳಿಸುವುದಾಗಿ ತಿಳಿಸಿದರು.
ಅವ್ಯವಹಾರದ ಬಗ್ಗೆ ಧ್ವನಿಯೆತ್ತಿದ ಕಾರಣಕ್ಕಾಗಿ ನನಗೂ ಜೀವ ಬೆದರಿಕೆ ಹಾಕುವ ಕಾರ್ಯ ನಡೆಯುತ್ತಿದೆ ಆದರೆ ಅಂತಹ ಬೆದರಿಕೆಗಳಿಗೆ ನಾನು ಹೆದರುವುದಿಲ್ಲ ಈ ಪ್ರಕರಣದಲ್ಲಿ ತನಿಖೆ ನಡೆದು ಸತ್ಯ ಹೊರ ಬರುವ ವರೆಗೂ ನಮ್ಮ ಹೋರಾ ಮುಂದುವರಿಯಲಿದೆ ತಿಳಿಸಿದರು.
ಐ.ಬಿ ಗುತ್ತಿಗೆ ಪಡೆದಿದ್ದ ಬಿಮಲ್ ಕಂಪೆನಿಯ ಬಗ್ಗೆಯೂ ಹಲವು ಅನುಮಾನಗಳಿವೆ . ಇದರ ಮಾಲೀಕ ಯಾರು ಎಂಬುದೇ ಗೊತ್ತಾಗುತ್ತಿಲ್ಲ , ಕಂಪೆನಿ ನೀಡಿರುವ ದಾಖಲೆಗಳನ್ನು ಮಾಹಿತಿ ಹಕ್ಕಿನಲ್ಲಿ ಪಡೆದಾಗ ಇದು ನೀಡಿರುವ ದಾಖಲೆ ನಕಲಿ ಎಂದು ಬಹಿರಂಗಗೊಂಡಿದ್ದು ಈ ಬಗ್ಗೆಯೂ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು.
ರಾಷ್ಟ್ರೀಯ ಹೆದ್ದಾರಿ ಗುತ್ತಿಗೆದಾರರಿಂದ ಚುನಾವಣೆ ಸಂದರ್ಭದಲ್ಲಿ ಶಾಸಕರು ರೂ. 3 ಕೋಟಿ ಹಣ ಕಿಕ್ ಬ್ಯಾಕ್ ಪಡೆದಿದ್ದಾರೆ ಎಂದು ನೇರವಾಗಿ ಆರೋಪಿಸುವುದಾಗಿ ತಿಳಿಸಿದ ರಕ್ಷಿತ್ ಶಿವರಾಂ, ಈಗ ಬಿಮಲ್ ಕಂಪೆನಿಯವರು ಬೆಳ್ತಂಗಡಿಯಿಂದ ಕಾಲ್ಕಿತ್ತಿದ್ದಾರೆ , ಉಜಿರೆಯ ಪ್ಲಾಂಟ್ ಬಂದ್ ಆಗಿದೆ. ರಾಷ್ಟ್ರೀಯ ಹೆದ್ದಾರಿ ಗುತ್ತಿಗೆ ವಹಿಸಿಕೊಂಡವರು ಓಡಿ ಹೋಗುವ ದಿನ ದೂರವಿಲ್ಲ ಎಂದು ಈಗಿನ ಪರಿಸ್ಥಿತಿ ನೋಡಿದರೆ ಗೊತ್ತಾಗುತ್ತದೆ ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಬ್ಲಾಕ್ ಕಾಂಗ್ರೆಸ್ ಗ್ರಾಮೀಣ ಅಧ್ಯಕ್ಷ ನಾಗೇಶ್ ಕುಮಾರ್ ಗೌಡ ಮುಖಂಡರುಗಳಾದ ಧರಣೇಂದ್ರ ಕುಮಾರ್, ಶಾಹುಲ್ ಹಮೀದ್ , ಡಿ.ಕೆ ಅಯೂಬ್, ಶೇಖರ್ ಕುಕ್ಕೇಡಿ, ನಮಿತಾ ಪೂಜಾರಿ, ವಂದನಾ ಭಂಡಾರಿ, ಸಂತೋಷ ಕುಮಾರ್, ಹಕಿಮ್ ಕೊಕ್ಕಡ, ಇಸ್ಮಾಯಿಲ್ ಪೆರಿಂಜೆ ಉಪಸ್ಥಿತರಿದ್ದರು.