ಪುಂಜಾಲಕಟ್ಟೆ : ಸರಕಾರಿ ಪ್ರಥಮ ದರ್ಜೆ ಕಾಲೇಜು ಪುಂಜಾಲಕಟ್ಟೆ ಇದರ ಹಿರಿಯ ವಿದ್ಯಾರ್ಥಿ ಸಂಘದ ವಾರ್ಷಿಕ ಮಹಾಸಭೆ ಹಾಗೂ ನೂತನ ಪದಾಧಿಕಾರಿಗಳ ಆಯ್ಕೆ ಕಾಲೇಜಿನ ಸಭಾಂಗಣದಲ್ಲಿ ನಡೆಯಿತು.
ನಿಕಟ ಪೂರ್ವ ಅಧ್ಯಕ್ಷರಾದ ಪ್ರಜ್ವಲ್ ಸಂತೋಷ್ ಮಾತನಾಡಿ, ತಮ್ಮ ಅಧಿಕಾರವಾಧಿಯಲ್ಲಿ ಕಾಲೇಜಿನ ಬೆಳವಣಿಗೆಗೆ ಒತ್ತು ನೀಡಿ ಶ್ರಮಿಸಲಾಗಿದೆ. ಪ್ರಸ್ತುತ ಕಾಲೇಜಿನ ಶಿಕ್ಷಣ ಗುಣಮಟ್ಟ ಉನ್ನತ ದರ್ಜೆಯಲ್ಲಿದ್ದು, ಮತ್ತಷ್ಟು ಬೆಳವಣಿಗೆಗೆ ಪೂರಕವಾಗಿ ಅಭಿವೃದ್ಧಿ ಆಗಲು ಕಾಲೇಜಿನಲ್ಲಿ ಶಿಕ್ಷಣ ಪಡೆದ ಹಿರಿಯ ವಿದ್ಯಾರ್ಥಿಗಳ ಸಹಕಾರ ಅತ್ಯಗತ್ಯ ಎಂದರು. ಸರ್ವತೋಮುಖ ಬೆಳವಣಿಗೆಗೆ ಕೈಗೊಂಡ ಕಾರ್ಯಕ್ರಮಗಳ ವಾರ್ಷಿಕ ಮಂಡನೆಯನ್ನು ನಿಕಟಪೂರ್ವ ಕಾರ್ಯದರ್ಶಿ ರಮೇಶ್ ಮೂಲ್ಯ ಸಭೆಯಲ್ಲಿ ಮಂಡಿಸಿದರು.
ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಮಾಧವ ಎಂ ಮಾತನಾಡಿ, ಕಾಲೇಜಿನ ಹಿರಿಯ ವಿದ್ಯಾರ್ಥಿಗಳ ನಿರಂತರ ಸಹಕಾರ ಮತ್ತು ಶ್ರಮವನ್ನು ಸ್ಮರಿಸಿ ಅಭಿನಂದಿಸಿದರು. ಕಾಲೇಜಿಗೆ ಅತಿ ಅವಶ್ಯವಿರುವ ಬಾವಿಗೆ ರಿಂಗ್ ಅಳವಡಿಕೆಗೆ ಬೇಡಿಕೆ ಪ್ರಸ್ತಾಪಿಸಿದರು. ಈ ಬಗ್ಗೆ ಹಿರಿಯ ವಿದ್ಯಾರ್ಥಿಗಳು ಪರಿಶೀಲಿಸಿ, ಸ್ಥಿತಿಯ ಗಂಭೀರತೆಯನ್ನು ಅರಿತು ಬಾವಿ ರಿಂಗ್ ಅಳವಡಿಕೆ ಮಾಡಿಸಿಕೊಡುವುದಾಗಿ ಭರವಸೆ ನೀಡಿದರು.
ಕಾಲೇಜಿನ ಹಿರಿಯ ವಿದ್ಯಾರ್ಥಿ ಸಂಘದ ನೂತನ ಅಧ್ಯಕ್ಷರಾಗಿ ರಾಜೇಶ್, ಉಪಾಧ್ಯಕ್ಷರಾಗಿ ವಿಪುಲ್, ಕಾರ್ಯದರ್ಶಿಯಾಗಿ ರಮಾಶ್ರೀ, ಜತೆ ಕಾರ್ಯದರ್ಶಿಯಾಗಿ ವನಿತಾ, ಖಜಾಂಚಿಯಾಗಿ ಜಿತೇಶ್ ಕೆ ಹಾಗೂ ಕಾರ್ಯಕಾರಿಣಿ ಸಮಿತಿಯಲ್ಲಿ 17 ಮಂದಿ ಸದಸ್ಯರು ನೂತನ ಪದಾಧಿಕಾರಿಗಳಾಗಿ ಆಯ್ಕೆಯಾಗಿದ್ದಾರೆ. ನಿಕಟ ಪೂರ್ವ ಅಧ್ಯಕ್ಷರಾದ ಪ್ರಜ್ವಲ್ ಸಂತೋಷ್ ಅವರು ನೂತನ ಅಧ್ಯಕ್ಷರಾದ ರಾಜೇಶ್ ಅವರಿಗೆ ಅಧಿಕಾರ ಹಸ್ತಾಂತರಿಸಿದರು.
ಸಭೆಯಲ್ಲಿ ಕಾಲೇಜಿನ ದೈಹಿಕ ನಿರ್ದೇಶಕರಾದ ಹಾಗೂ ಹಿರಿಯ ವಿದ್ಯಾರ್ಥಿ ಸಂಘದ ಸಂಚಾಲಕರಾದ ಡಾ. ಶೈಲೇಶ್, ಗ್ರಂಥಪಾಲಕರಾದ ಪ್ರವೀಣ್ ಹಾಗೂ ಹಿರಿಯ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಕಾರ್ಯಕಾರಣಿ ಸಮಿತಿಯ ಸದಸ್ಯ ಸುನಿಲ್ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿ, ನಿಕಟಪೂರ್ವ ಕಾರ್ಯದರ್ಶಿ ರಮೇಶ್ ಮೂಲ್ಯ ಧನ್ಯವಾದವಿತ್ತರು.