ಬೆಳ್ತಂಗಡಿ: ಪುಂಜಾಲಕಟ್ಟೆ-ಚಾರ್ಮಾಡಿ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಈಗಾಗಲೇ ಪ್ರಾರಂಭವಾಗಿದ್ದು ಡಿ.ಪಿ.ಜೈನ್ ಕನ್‌ಸ್ಟ್ರಕ್ಷನ್ ಗುತ್ತಿಗೆಯನ್ನು ಪಡೆದುಕೊಂಡು ಕಾಮಗಾರಿಯನ್ನು ಪ್ರಾರಂಭಿಸಿದರೂ ಅವೈಜ್ಞಾನಿಕ ಕಾಮಗಾರಿಯಿಂದ ರಸ್ತೆಯಲ್ಲಿ ವಾಹನಗಳು ಸಂಚಾರ ಮಾಡದಂತಹ ಸ್ಥಿತಿದ ನಿರ್ಮಾಣವಾಗಿದೆ.
ಇದರಿಂದ ಸಾರ್ವಜನಿಕರು ಅಲ್ಲಲ್ಲಿ ಸಾಕಷ್ಟು ಬಾರಿ ಪ್ರತಿಭಟನೆಗಳನ್ನು ನಡೆಸಿ ಆಕ್ರೋಶವನ್ನು ವ್ಯಕ್ತಪಡಿಸಿದ ಘಟನೆಯೂ ನಡೆದಿತ್ತು.
ಇತ್ತೀಚಿನ ಬೆಳವಣಿಗೆಯಲ್ಲಿ ಡಿ.ಪಿ. ಜೈನ್ ಕಂಪನಿಯ ಕಾರ್ಮಿಕರು ಸಂಬಳ ನೀಡಿಲ್ಲ ಎಂಬ ಕಾರಣಕ್ಕೆ ಪ್ರತಿಭಟನೆಯನ್ನು ಮಾಡುತ್ತಿರುವ ಕಾರಣ ರಸ್ತೆ ಕಾಮಗಾರಿ ಸಂಪೂರ್ಣವಾಗಿ ಸ್ಥಗಿತಗೊಂಡಿತ್ತು. ಇದರ ಬೆನ್ನಲ್ಲೇ ಎಚ್ಚೆತ್ತ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಈ ರಸ್ತೆಯ ಮುಂದಿನ ಕಾಮಗಾರಿಯ ಜವಾಬ್ದಾರಿಯನ್ನು ಮೊಗ್ರೋಡಿ ಕನ್ ಸ್ಟ್ರಕ್ಷನ್(MCK)ಗೆ ನೀಡುವ ಕುರಿತು ಬೆಂಗಳೂರಿನ ವಿಕಾಸ ಸೌಧದಲ್ಲಿ ಆ.8 ರಂದು ಡಿ.ಪಿ.ಜೈನ್ ಕಂಪೆನಿಯ ಮಾಲೀಕರು, ಮೊಗ್ರೋಡಿ ಕನ್ ಸ್ಟ್ರಕ್ಷನ್ ಮಾಲೀಕರು, ಬೆಳ್ತಂಗಡಿ ಶಾಸಕರು, ಸಚಿವರ ನೇತೃತ್ವದಲ್ಲಿ ಮಾತುಕತೆ ನಡೆಸಲಾಗಿದೆ.
ಕಳೆದ ಕೆಲವು ಸಮಯಗಳಿಂದ ಈ ರಸ್ತೆಯ ಕಾಮಗಾರಿಯ ಗುತ್ತಿಗೆ ಪಡೆದಿದ್ದ ಡಿ.ಪಿ. ಜೈನ್ ಅವರು ಅವೈಜ್ಞಾನಿಕ ರೀತಿಯಲ್ಲಿ ಕಾಮಗಾರಿ ನಿರ್ವಹಿಸಿದ ಪರಿಣಾಮ ಮಳೆ ಪ್ರಾರಂಭದ ನಂತರ ಈ ರಸ್ತೆ ಹೊಂಡ ಗುಂಡಿಗಳಿಂದ ವಾಹನ ಸಂಚಾರ ಮಾಡದಂತಹ ಸ್ಥಿತಿ ನಿರ್ಮಾಣವಾಗಿದೆ. ಅದಲ್ಲದೇ ಕಂಪನಿ ಸರಿಯಾಗಿ ಸಂಬಳ ನೀಡುತ್ತಿಲ್ಲ ಎಂಬ ಕಾರಣವೊಡ್ಡಿ ಕಂಪನಿ ವಿರುದ್ಧ ಕಾರ್ಮಿಕರು ಪ್ರತಿಭಟನೆ ನಡೆಸಿ ಕೆಲಸ ಸ್ಥಗಿತಗೊಳಿಸಿದ್ದರು. ಇದರಿಂದ ಕಾಮಗಾರಿ ನಿರ್ವಹಿಸಲು ಕಾರ್ಮಿಕರ ಕೊರತೆಯಿಂದ ಕಳೆದ ಕೆಲವು
ದಿನಗಳಿಂದ ಕೆಲಸ ಸ್ಥಗಿತಗೊಂಡಿತ್ತು. ಸಾರ್ವಜನಿಕರು ಹಾಗೂ ಅಧಿಕಾರಿಗಳು ಕಾಮಗಾರಿಯ ಬಗ್ಗೆ ಅಸಮಾಧಾನಗೊಂಡಿದ್ದರಲ್ಲದೆ ಅಧಿಕಾರಿಗಳಲ್ಲಿ ಸರಿಯಾದ ಕ್ರಮಕೈಗೊಳ್ಳಲು ಒತ್ತಡ ಹಾಕಿದ್ದರು ಹಾಗೂ ಅಧಿಕಾರಿಗಳೂ ಕೂಡ ನಿಧಾನಗತಿ ಹಾಗೂ ಅಸಮರ್ಪಕ ಕೆಲಸದ ಬಗ್ಗೆ ಅಸಮಾಧಾನಗೊಂಡಿದ್ದರು.
ಈ ಎಲ್ಲ ಬೆಳವಣಿಗೆಯ ನಂತರ ಅಧಿಕಾರಿಗಳು ಡಿ.ಪಿ.ಜೈನ್ ಕಂಪನಿ ಕಾಮಗಾರಿಯನ್ನು ಮೊಗ್ರೋಡಿ ಕನ್ಸ್‌ಸ್ಟಕ್ಸನ್ಸ್ ಅವರಿಗೆ ನೀಡುವ ಕುರಿತು ಆ.8 ರಂದು ಮಾತುಕತೆ ನಡೆಸಿ ಈ ಬಗ್ಗೆ ಎಲ್ಲಾ ಲೆಕ್ಕಚಾರಗಳನ್ನು ಮಾಡಿ ಮುಂದಿನ ಕಾಮಗಾರಿ ನಡೆಸಲು ಕಾನೂನು ಪ್ರಕಾರ ಡಿ.ಪಿ.ಜೈನ್ ಕೈಯಿಂದ ಮೊಗ್ರೋಡಿ ಕನ್ಸ್‌ಸ್ಟಕ್ಸನ್ಸ್ ಗೆ ನೀಡಲಾಗಿದೆ. ಇಂದಿನಿಂದ ಮೊಗ್ರೋಡಿ ಕನ್‌ಸ್ಟಕ್ಸನ್ಸ್ ಅವರು ಪುಂಜಾಲಕಟ್ಟೆ ಚಾರ್ಮಾಡಿವರೆಗಿನ ರಾಷ್ಟ್ರೀಯ ಹೆದ್ದಾರಿಯ ಕಾಮಗಾರಿಯನ್ನು ಆರಂಭಿಸಲಿದ್ದಾರೆ ಎಂಬ ಬಗ್ಗೆ ಮಾಹಿತಿ ಲಭ್ಯವಾಗಿದೆ.