ನಾರಾವಿ : ಭಾರತೀಯ ಜೈನ್ ಮಿಲನ್ ನಾರಾವಿ ಶಾಖೆಯ ವತಿಯಿಂದ ವಿಶೇಷ ಆಟಿದ ಕೂಟ, ಆಹಾರೋತ್ಸವ, ವಸ್ತು ಪ್ರದರ್ಶನ ಮತ್ತು 2024-26ನೇ ಸಾಲಿನ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮವು ಆ. 11 ರಂದು ನಾರಾವಿ ಧರ್ಮಶ್ರೀ ಸಭಾ ಭವನದಲ್ಲಿ ನಡೆಯಿತು.
ಕಾರ್ಯಕ್ರಮವನ್ನು ಭಾರತೀಯ ಜೈನ್ ಮಿಲನ್ ಮಂಗಳೂರು ವಿಭಾಗದ ವಲಯ ನಿರ್ದೇಶಕ ಶ್ರೀವರ್ಮ ಅಜ್ರಿಯವರು ದೀಪ ಬೆಳಗಿಸಿ ಕಲಸೆಗೆ ಭತ್ತ ಹಾಕಿ ಚೆನ್ನೆಮಣೆಯನ್ನು ಆಡುವುದರ ಮೂಲಕ ಉದ್ಘಾಟಿಸಿ ಸಂಘಟನಾತ್ಮಕ ನುಡಿಗಳನ್ನಾಡಿ ನೂತನ ಪದಾಧಿಕಾರಿಗಳಿಗೆ ಪ್ರತಿಜ್ಞಾ ವಿಧಿಯನ್ನು ಬೋಧಿಸಿದರು. ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಪರುಷಗುಡ್ಡೆ ಕುತ್ಲೂರು ಜೈನ್ ಮಿಲನ್ ಅಧ್ಯಕ್ಷರಾದ ಪ್ರಭಾಕರ ಬುಣ್ಣು ಕಾಡಬೆಟ್ಟು ಗುತ್ತು ಇವರು ತನ್ನ ದಿಕ್ಸೂಚಿ ಭಾಷಣದಲ್ಲಿ ತುಳುನಾಡಿನ ಸಂಸ್ಕೃತಿ,ಪರಂಪರೆಯ ಜೊತೆಗೆ ಆಟಿ ಮಾಸದ ಮಹತ್ವದ ಬಗ್ಗೆ ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ವಿಶೇಷ ಆಕರ್ಷಣೆಯಾಗಿ ಜರುಗಿದ ಆಹಾರೋತ್ಸವದಲ್ಲಿ ತುಳುನಾಡಿನ ಸಾಂಪ್ರದಾಯಿಕ ಆಹಾರ ಪದಾರ್ಥಗಳು-ತಿಂಡಿ ತಿನಸುಗಳ ಪ್ರದರ್ಶನ ಮತ್ತು ತುಳುನಾಡಿನ ಪುರಾತನ ವಸ್ತುಗಳ ಪ್ರದರ್ಶನ ಎಲ್ಲರ ಮನಸೂರೆಗೊಂಡಿತು.
ಸಮಾರಂಭದ ಅಧ್ಯಕ್ಷತೆ ಮತ್ತು ನೇತೃತ್ವವನ್ನು ಭಾರತೀಯ ಜೈನ್ ಮಿಲನ್ ನಾರಾವಿಯ ಅಧ್ಯಕ್ಷ ಅಶೋಕ್ ಕುಮಾರ್ ಜೈನ್ ಈದು ವಹಿಸಿ ತನ್ನ ಅಧ್ಯಕ್ಷೀಯ ನುಡಿಯಲ್ಲಿ ತಮ್ಮ ಅವಧಿಯಲ್ಲಿ ನಡೆದ ಕಾರ್ಯ ಚಟುವಟಿಕೆಗಳ ವಿಸ್ತೃತ ವರದಿಯನ್ನು ವಿವರಿಸಿ ಮುಂದಿನ ಅವಧಿಯ ನೂತನ ಪದಾಧಿಕಾರಿಗಳಿಗೆ ಶುಭ ಹಾರೈಸಿ ಅಧಿಕಾರ ಹಸ್ತಾಂತರಿಸಿದರು. ನಾರಾವಿ ಜೈನ್ ಮಿಲನ್ ನ ಕಾರ್ಯದರ್ಶಿ ಅಭಿಜಿತ್ ಜೈನ್, ಕೋಶಾಧಿಕಾರಿ ಕುಸುಮ ವಿನಯ್ ಹೆಗ್ಡೆ ಮತ್ತು ಮಿಲನ್ ಬಂಧುಗಳು ಉಪಸ್ಥಿತರಿದ್ದರು.
ನಾರಾವಿ ಜೈನ್ ಮಿಲನ್ ನ ಗೌರವ ಸಲಹೆಗಾರರಾದ ಶಿಶುಪಾಲ್ ಜೈನ್ ಬೈರ್ನಡೆಗುತ್ತು ಪ್ರಾಸ್ತಾವಿಕದೊಂದಿಗೆ ಸ್ವಾಗತಿಸಿದರು. ಕಾರ್ಯದರ್ಶಿ ಅಭಿಜಿತ್ ಜೈನ್ ಧನ್ಯವಾದಗೈದರು. ಶಿಕ್ಷಕರಾದ ನಿರಂಜನ್ ಜೈನ್ ಈದು ಕಾರ್ಯಕ್ರಮ ನಿರ್ವಹಿಸಿದರು.
ಭಾರತೀಯ ಜೈನ್ ಮಿಲನ್ ನಾರಾವಿಯ 2024-26ನೇ ಸಾಲಿನ ನೂತನ ಅಧ್ಯಕ್ಷರಾಗಿ ಕಿಶೋರ್ ಕುಮಾರ್ ಕಂಠಾವು ಈದು, ಕಾರ್ಯದರ್ಶಿಯಾಗಿ ಶ್ರೇಯಾಂಸ ಜೈನ್ ಪಲಾಯಿಬೆಟ್ಟು ನಾರಾವಿ, ಕೋಶಾಧಿಕಾರಿಯಾಗಿ ಶ್ರೀಮತಿ ಸವಿತಾ ಅಜಿತ್ ಕುಮಾರ್ ಮುಳಿಕಾರು ಮತ್ತು ಉಪಾಧ್ಯಕ್ಷರುಗಳಾಗಿ ಪಾರ್ಶ್ವನಾಥ್ ಜೈನ್ ನಾರಾವಿ, ಸನತ್ ಕುಮಾರ್ ಈದು, ನಮಿರಾಜ್ ಜೈನ್ ಹೊಸ್ಮಾರು, ಪ್ರಶಾಂತ್ ಕುಮಾರ್ ಅಳಿಯೂರು, ಅಕ್ಷಯ್ ಜೈನ್ ನೆಲ್ಲಿಕಾರು ಮತ್ತು ಶ್ರೀಮತಿ ಪದ್ಮಶ್ರೀ ಜೈನ್ ಮರೋಡಿ ಹಾಗೂ ಗೌರವ ಸಲಹೆಗಾರರಾಗಿ ಅಶೋಕ್ ಕುಮಾರ್ ಪಡ್ಯಾರಮನೆ ಈದು ಇವರುಗಳು ಆಯ್ಕೆಯಾದರು.