ಬೆಳಾಲು: ಬೆಳಾಲು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಅನುದಾನಿತ ಪ್ರೌಢಶಾಲೆಯಲ್ಲಿ 78ನೇ ಸ್ವಾತಂತ್ರ್ಯೋತ್ಸವವನ್ನು ಸಂಭ್ರಮದಿಂದ ಆಚರಿಸಲಾಯಿತು. ಧ್ವಜಾರೋಹಣವನ್ನು ಶಿಕ್ಷಕ-ರಕ್ಷಕ ಸಂಘದ ಅಧ್ಯಕ್ಷರಾದ ಶ್ರೀಮತಿ ಭವಾನಿ ಮಾರ್ಪಾಲು ಇವರು ನೆರವೇರಿಸಿದರು. ಬಳಿಕ ಬೆಳಾಲು ಪೇಟೆಯಲ್ಲಿ ವಿದ್ಯಾರ್ಥಿಗಳು ಸ್ವಾತಂತ್ರ್ಯೋತ್ಸವದ ಜಯ ಘೋಷವನ್ನು ಹಾಕುತ್ತ ಮೆರವಣಿಗೆಯಲ್ಲಿ ಸಾಗಿದರು. ಗಾಂಧೀಜಿ ಹಾಗೂ ಡಾ| ಬಿ. ಆರ್. ಅಂಬೇಡ್ಕರ್ ರ ಭಾವಚಿತ್ರಕ್ಕೆ ಪುಷ್ಪ ನಮನವನ್ನು ಸಲ್ಲಿಸಲಾಯಿತು. ಸಮೂಹ ದೇಶಭಕ್ತಿ ಗಾಯನ ಹಾಗೂ ಛದ್ಮವೇಷ ಸ್ಪರ್ಧೆ ನಡೆಯಿತು. ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ಶಿಕ್ಷಕರಾದ ಶ್ರೀಯುತ ಸುಮನ್ ಯು. ಎಸ್ ಸ್ವಾತಂತ್ರ್ಯೋತ್ಸವದ ಸಂದೇಶವನ್ನು ನೀಡಿದರು. ವಿದ್ಯಾರ್ಥಿಗಳಾದ ಲಿಖಿತ ಮತ್ತು ಮೋಕ್ಷಿತ್ ಸ್ವಾತಂತ್ರ್ಯೋತ್ಸವದ ಕುರಿತು ಭಾಷಣ ಮಾಡಿದರು. ಶಿಕ್ಷಕರಕ್ಷಕ ಸಂಘದ ಅಧ್ಯಕ್ಷರಾದ ಶ್ರೀಮತಿ ಭವಾನಿ ಮಾರ್ಪಾಲು ಹಾಗೂ ಶಾಲಾ ಮುಖ್ಯೋಪಾಧ್ಯಾಯ ಶ್ರೀ ಜಯರಾಮ ಮಯ್ಯ ಸ್ವಾತಂತ್ರ್ಯದ ಸವಾಲು ಮತ್ತು ಅದನ್ನು ಉಳಿಸಿ ಬೆಳೆಸಬೇಕಾದ ಅಗತ್ಯತೆಯ ಬಗೆಗೆ ಸಂದೇಶ ನೀಡಿ, ಹಕ್ಕು ಕರ್ತವ್ಯ ಪಾಲನೆಯ ಬಗೆಗೆ ಮಾತನಾಡಿದರು. ಸ್ವಾತಂತ್ರ್ಯೋತ್ಸವದ ಪ್ರಯುಕ್ತ ಏರ್ಪಡಿಸಲಾದ ಸ್ಪರ್ಧೆಗಳ ವಿಜೇತರ ಪಟ್ಟಿಯನ್ನು ಶಿಕ್ಷಕಿ ಶ್ರೀಮತಿ ರಾಜಶ್ರೀ ವಾಚಿಸಿ ಬಹುಮಾನವನ್ನು ವಿತರಿಸಲಾಯಿತು. ನಿವೃತ್ತ ಮುಖ್ಯ ಶಿಕ್ಷಕ ಶ್ರೀ ಬಾಲಕೃಷ್ಣ ಭಟ್ ಹಾಗೂ ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಶ್ರೀ ಗಣೇಶ್ ಕನಿಕ್ಕಿಲ ಹಾಗೂ ಎಲ್ಲಾ ಶಿಕ್ಷಕ ಸಿಬ್ಬಂದಿಗಳು ಉಪಸ್ಥಿತರಿದ್ದರು. ವಿದ್ಯಾರ್ಥಿಗಳಾದ ಕುಮಾರಿ ಆಶಾ ಸ್ವಾಗತಿಸಿ, ಐಶ್ವರ್ಯ ಧನ್ಯವಾದವಿತ್ತ, ಈ ಕಾರ್ಯಕ್ರಮವನ್ನು ಇಂದುಮತಿ ನಿರೂಪಿಸಿದರು.