ವೇಣೂರು: ವಿಶ್ವ ಹಿಂದೂ ಪರಿಷತ್ ಬಜರಂಗದಳ ಪ್ರಖಂಡ ಹಾಗೂ ಹಿಂದೂ ಜಾಗರಣ ವೇದಿಕೆ ಇದರ ಆಶ್ರಯದಲ್ಲಿ ಅಖಂಡ ಭಾರತ ಸಂಕಲ್ಪ ದಿನ ಮತ್ತು ಪಂಜಿನ ಮೆರವಣಿಗೆಯು ಆ.14ರಂದು ವೇಣೂರು ಶ್ರೀರಾಮ ಭಜನಾ ಮಂದಿರದಿಂದ ಹೊರಟು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದವರೆಗೆ ಪಂಜನ್ನು ಹಿಡಿದು ಮೆರವಣಿಗೆಯ ಮೂಲಕ ನಡೆಯಿತು.
ಸಂಘದ ಮಂಗಳೂರು ವಿಭಾಗದ ಸಾಮರಸ್ಯ ಸಹ ಸಂಯೋಜಕ ಶಿವಪ್ರಸಾದ ಮಲೆಬೆಟ್ಟು ಇವರು ದಿಕ್ಸೂಚಿ ಭಾಷಣವನ್ನು ಮಾಡಿ ಸ್ವಾತಂತ್ರ್ಯದ ಪೂರ್ವದಲ್ಲಿ ಅಖಂಡವಾಗಿದ್ದ ಭಾರತ ತ್ರಿಖಂಡವಾದ ಕರಾಳ ದಿನದ ಸನ್ನಿವೇಶಗಳನ್ನು ನೆನಪಿಸಿ ಹಿಂದೂ ಸಮಾಜ ಸಂಘಟಿತವಾಗಿ ಜಾಗೃತವಾದಾಗ ಮಾತ್ರ ರಾಷ್ಟ್ರ ಉಳಿದೀತು ಎಂದರು.
ವೇದಿಕೆಯಲ್ಲಿ ವಿಶ್ವ ಹಿಂದೂ ಪರಿಷತ್ ಜಿಲ್ಲಾ ಕಾರ್ಯದರ್ಶಿ ನವೀನ್ ನೆರಿಯ, ಹಿಂದೂ ಜಾಗರಣ ವೇದಿಕೆ ತಾಲೂಕು ಸಂಚಾಲಕ ನಿರಂಜನ ನಿಟ್ಟಡೆ, ಪ್ರಮುಖರಾದ ವಿಜಯ ಗೌಡ, ಸುದರ್ಶನ್ ಕಾರಂತ್, ಸೋಮನಾಥ ಕೆ.ವಿ., ರಮೇಶ್ ಹೆಗ್ಡೆ, ದಿನೇಶ್ ಕರಿಮಣೇಲು, ಕೆ.ವೈ. ರವಿ ಭಟ್ ಇನ್ನಿತರರು ಉಪಸ್ಥಿತರಿದ್ದರು.
ವಿ.ಹಿಂ.ಪ. ನ ಪ್ರಮುಖರಾದ ಸುದೀಪ್ ಪಟವರ್ಧನ್ ಸ್ವಾಗತಿಸಿ, ರೋಹಿತ್ ಆಚಾರ್ಯ ನಡ್ತಿಕಲ್ಲು ವೈಯಕ್ತಿಕ ಗೀತೆ ಹಾಡಿದರು. ಸಂತೋಷ ಮಂಜಿಲ ಸಂಕಲ್ಪ ಬೋಧಿಸಿ, ವಿ.ಹಿಂ.ಪ. ನ ಪ್ರಮುಖ ಪ್ರಜ್ವಲ್ ವೇಣೂರು ಧನ್ಯವಾದ ವಿತ್ತರು. ಉಮೇಶ ನಡ್ತಿಕಲ್ಲು ಕಾರ್ಯಕ್ರಮವನ್ನು ನಿರೂಪಿಸಿದರು. ಸರ್ವಾರ್ಥ ಎಸ್ ಜೈನ್ ಹಾಡಿದ ವಂದೇಮಾತರಂ ಗೀತೆಯೊಂದಿಗೆ ಕಾರ್ಯಕ್ರಮ ಮುಕ್ತಾಯವಾಯಿತು.