ಉಜಿರೆ: ಸರ್ಕಾರದ ವಿವಿಧ ಇಲಾಖೆಗಳಲ್ಲಿ ಹಲವು ವರ್ಷಗಳ ಕಾಲ ಅನುಪಮವಾಗಿ ಕರ್ತವ್ಯ ನಿರ್ವಹಿಸಿ, ನಿವೃತ್ತರಾದ ನೌಕರರು ಸರ್ಕಾರಕ್ಕೂ, ಸಮಾಜಕ್ಕೂ ಉತ್ತಮ ಸೇವೆ ನೀಡಿದ್ದು ಸ್ವಾಭಿಮಾನದೊಂದಿಗೆ ಸ್ವಾವಲಂಬಿ ಜೀವನ ನಡೆಸಬೇಕು. ತಮ್ಮ ಅನುಭವದ ಪರಿಪಕ್ವತೆಯೊಂದಿಗೆ ನಿವೃತ್ತರು ಸಮಾಜಸೇವೆಯಲ್ಲಿ ಪ್ರವೃತ್ತರಾಗಬೇಕು ಎಂದು ಉಜಿರೆಯ ಎಸ್. ಡಿ. ಎಮ್. ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಪ್ರೊ. ಎಸ್. ಸತೀಶ್ಚಂದ್ರ ಹೇಳಿದರು.
ಅವರು ಆ.20 ರಂದು ಉಜಿರೆಯಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ನಿವೃತ್ತ ನೌಕರರ ಸಂಘದ ಬೆಳ್ತಂಗಡಿ ತಾಲೂಕು ಘಟಕದ ಆಶ್ರಯದಲ್ಲಿ ಆಯೋಜಿಸಿದ ಸದಸ್ಯತ್ವ ನೊಂದಣಿ ಮತ್ತು ಪಿಂಚಣಿ ಮಾಹಿತಿ ಸಮಾವೇಶ ಉದ್ಘಾಟಿಸಿ, ಮನವಿಪತ್ರ ಬಿಡುಗಡೆಗೊಳಿಸಿ ಮಾತನಾಡಿದರು.
ಪ್ರತಿಯೊಬ್ಬರ ಜೀವನದಲ್ಲಿಯೂ ನಿವೃತ್ತಿ ಒಂದು ಅನಿವಾರ್ಯ ಹಂತವಾಗಿದ್ದು ನಿವೃತ್ತರು ತಾಳ್ಮೆ ,ಪ್ರೀತಿ-ವಿಶ್ವಾಸ ಹಾಗೂ ಮಾನಸಿಕ ಪರಿಪಕ್ವತೆಯೊಂದಿಗೆ ಆರೋಗ್ಯಪೂರ್ಣ ಜೀವನ ನಡೆಸಬೇಕು. ಉತ್ತಮ ಹವ್ಯಾಸಗಳನ್ನು ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ನಿವೃತ್ತ ಪ್ರಾಂಶುಪಾಲರುಗಳಾದ ಪ್ರೊ ಟಿ. ಕೃಷ್ಣಮೂರ್ತಿ ಮತ್ತು ಪ್ರೊ. ಎ. ಜಯಕುಮಾರ್ ಶೆಟ್ಟಿ ಹಾಗೂ ವೇಣೂರಿನ ಶೀಲಾ ಎಸ್. ಹೆಗ್ಡೆ ಶುಭಾಶಂಸನೆೆ ಮಾಡಿದರು.
ಅಧ್ಯಕ್ಷತೆ ವಹಿಸಿದ ನಿವೃತ್ತ ನೌಕರರ ಸಂಘದ ಅಧ್ಯಕ್ಷ ಬಿ. ವಿಠಲಶೆಟ್ಟಿ ಮಾತನಾಡಿ, ನಿವೃತ್ತರು ವೃದ್ಧರಲ್ಲ, ಪ್ರಬುದ್ದರು. ಕಿರಿಯರಿಗೆ ಸಕಾಲಿಕ ಮಾಹಿತಿ, ಮಾರ್ಗದರ್ಶನ ನೀಡಬೇಕು. ಪ್ರತಿಯೊಬ್ಬ ಸದಸ್ಯರೂ ಸಂಘಟನೆ ಬಗ್ಗೆ ಅಭಿಮಾನ ಮತ್ತು ಆಸಕ್ತಿಯಿಂದ ಸೇವೆ ಮಾಡಬೇಕು ಎಂದು ಹೇಳಿದರು.
ಎಲ್ಲಾ ವಿಭಾಗಸಂಘಟಕರು ಮತ್ತು ಹೊಸ ಸದಸ್ಯರನ್ನು ಗೌರವಿಸಲಾಯಿತು.
ಸನ್ಮತ್ ಕುಮಾರ್ ನಾರಾವಿ ಪ್ರಾಸ್ತ್ತಾವಿಕವಾಗಿ ಮಾತನಾಡಿದರು.
ಬಿ ಸೋಮಶೇಖರ್ ಶೆಟ್ಟಿ ಸ್ವಾಗತಿಸಿದರು. ವಿಶ್ವಾಸ ರಾವ್ ಧನ್ಯವಾದವಿತ್ತರು. ವಸಂತ ರಾವ್ ನಾರಾವಿ ಕಾರ್ಯಕ್ರಮ ನಿರ್ವಹಿಸಿದರು.