ಆರೋಗ್ಯ ರಕ್ಷಕರಿಗೆ ರಕ್ಷೆ ಕಟ್ಟುವ ಮೂಲಕ ವಿಭಿನ್ನವಾಗಿ ರಕ್ಷಾಬಂಧನ ಆಚರಿಸಿದ ಪಟ್ಟೂರು ಶ್ರೀರಾಮ ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳು

Suddi Udaya

ಪಟ್ರಮೆ: ಪಟ್ಟೂರು ಶ್ರೀರಾಮ ವಿದ್ಯಾ ಸಂಸ್ಥೆಯ ನರ್ಸರಿ ವಿಭಾಗದ ವಿದ್ಯಾರ್ಥಿಗಳು ಕೊಕ್ಕಡ ಸಮುದಾಯ ಆರೋಗ್ಯ ಕೇಂದ್ರದ ವೈದ್ಯರು ಮತ್ತು ಸಿಬ್ಬಂದಿಗಳಿಗೆ ರಕ್ಷೆಯನ್ನು ಕಟ್ಟುವ ಮೂಲಕ ವಿಭಿನ್ನವಾಗಿ ರಕ್ಷಾ ಬಂಧನ ಆಚರಿಸಿದರು. ವಿದ್ಯಾರ್ಥಿಗಳಿಗೆ ಹೊರ ಸಂಚಾರವು ಪಾಠದ ಒಂದು ಭಾಗವಾಗಿದ್ದು, ಸಮುದಾಯದ ಸಹಭಾಗಿತ್ವ ಎನ್ನುವ ನಿಟ್ಟಿನಲ್ಲಿ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.


ಶಾಲಾ ಮುಖ್ಯ ಶಿಕ್ಷಕ ಚಂದ್ರಶೇಖರ ಶೇಟ್ ಮಾತನಾಡಿ ಸಮಾಜದಲ್ಲಿ ಜವಾಬ್ದಾರಿ ಹೊಂದಿರುವ ಉತ್ತರದಾಯಿ ಸೇವೆಗಳಲ್ಲೊಂದಾದ ಆರೋಗ್ಯ ಸೇವೆಯನ್ನು ನೀಡುತ್ತಿರುವ ಆರೋಗ್ಯ ಇಲಾಖೆಯ ಸಿಬ್ಬಂದಿಗಳು ನಮ್ಮ ಸಮಾಜದ ಆರೋಗ್ಯ ರಕ್ಷಣೆಗೆ ಅವಿರತವಾಗಿ ಶ್ರಮಿಸುತ್ತಿದ್ದಾರೆ. ರಕ್ಷಾಬಂಧನದ ಈ ಶುಭದಿನದಂದು ರಕ್ಷೆಯನ್ನು ಕಟ್ಟುವ ಮೂಲಕ ಆರೋಗ್ಯವಂತ ಸಮಾಜ ನಿರ್ಮಾಣ ಮಾಡಲು ಇನ್ನಷ್ಟು ಶಕ್ತಿ ಸಿಗುವಂತಾಗಲಿ ಎಂದು ಶುಭ ಹಾರೈಸಿದರು.


ಕೊಕ್ಕಡ ಸಮುದಾಯ ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿ ಹಾಗೂ ದಂತ ವೈದ್ಯಾಧಿಕಾರಿ ಡಾ. ತುಷಾರ ಕುಮಾರಿ ಮಕ್ಕಳಿಗೆ ನಿತ್ಯ ಜೀವನದಲ್ಲಿ ಮೈಗೂಡಿಸಿಕೊಳ್ಳಬೇಕಾದ ಆರೋಗ್ಯ ಸಲಹೆಗಳನ್ನು ನೀಡಿದರು. ಜೊತೆಗೆ ಅನಾರೋಗ್ಯ ಉಂಟು ಮಾಡುವ ಆಹಾರ ಪದಾರ್ಥಗಳನ್ನು ಸೇವಿಸದೆ ಪೋಷಕಾಂಶ ಭರಿತ ಆಹಾರ ಪದಾರ್ಥಗಳನ್ನು ಸೇವಿಸುವಂತೆ ಪುಟಾಣಿಗಳಿಗೆ ಕಿವಿಮಾತು ಹೇಳಿದರು. ಪುಟಾಣಿ ಮಕ್ಕಳು ಆಸ್ಪತ್ರೆಯಲ್ಲಿದ್ದ ಎಲ್ಲರಿಗೂ ರಕ್ಷೆಯನ್ನು ಕಟ್ಟುವ ಮೂಲಕ ಶುಭಾಶಯ ತಿಳಿಸಿದರು. ಭಾವನಾತ್ಮಕ ಕಾರ್ಯಕ್ರಮಕ್ಕೆ ಆಸ್ಪತ್ರೆಯಲ್ಲಿ ನೆರೆದಿದ್ದವರೆಲ್ಲ ಸಾಕ್ಷಿಯಾದರು.


ಶಾಲಾ ನರ್ಸರಿ ವಿಭಾಗದ ಮೇಲ್ವಿಚಾರಕಿ ಸ್ವಾತಿ ಕೆ. ವಿ, ನರ್ಸರಿ ವಿಭಾಗದ ಶಿಕ್ಷಕಿಯರಾದ ಕಾವ್ಯ ಡಿ. ಕೆ, ಅನುಶ್ರೀ ಎಚ್, ಸಹ ಶಿಕ್ಷಕ ದಿಲೀಪ್, ಶಾಲಾ ಸಿಬ್ಬಂದಿ ಜಯರಾಮ ಆರೋಗ್ಯ ಕೇಂದ್ರದ ಆಶಾ ಕಾರ್ಯಕರ್ತೆಯರು, ಶುಶ್ರೂಕಿಯವರು, ಆಸ್ಪತ್ರೆಯ ಸಿಬ್ಬಂದಿಗಳು ಜೊತೆಗಿದ್ದರು.

Leave a Comment

error: Content is protected !!