ಬೆಳ್ತಂಗಡಿ : ನಿವೃತ್ತ ಶಿಕ್ಷಕ ಕೊಲೆ ಪ್ರಕರಣ ಸಂಬಂಧಿಸಿದಂತೆ ಘಟನಾ ಸ್ಥಳಕ್ಕೆ ಎಸ್ಪಿ ಸೇರಿದಂತೆ ವಿವಿಧ ತಂಡ ಬಂದು ತನಿಖೆ ಮಾಡಿದ್ದು. ಘಟನೆ ಬಗ್ಗೆ ದ.ಕ.ಪೊಲೀಸ್ ವರಿಷ್ಠಾಧಿಕಾರಿ ಯತೀಶ್.ಎನ್ ಮಾಹಿತಿ ನೀಡಿದ್ದಾರೆ.
ಬೆಳ್ತಂಗಡಿ ತಾಲೂಕಿನ ಬೆಳಾಲು ಗ್ರಾಮದ ಎಸ್.ಪಿ.ಬಿ.ಕಾಂಪೌಂಡ್ ನ ನಿವೃತ್ತ ಶಿಕ್ಷಕನಾಗಿರುವ ಎಸ್.ಪಿ.ಬಾಲಕೃಷ್ಣ ಭಟ್(83) ಎಂಬವರು ಆ.20 ರಂದು ಮಧ್ಯಾಹ್ನದ ಬಳಿಕ ಮನೆಯ ಆಡುಗೆ ಕೊನೆಯಲ್ಲಿರುವಾಗ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ದಾಳಿ ಮಾಡಿದ್ದಾರೆ. ದಾಳಿಯಿಂದ ತಪ್ಪಿಸಿಕೊಳ್ಳಲು ಮನೆಯ ಅಂಗಳಕ್ಕೆ ಓಡಿ ಬಂದಿದ್ದು ಈ ವೇಳೆ ಕೂಡ ಕುತ್ತಿಗೆ, ಕೈಗೆ, ತಲೆಗೆ ದಾಳಿ ಮಾಡಿದ್ದು ಇದರಿಂದ ರಕ್ತಸ್ರಾವದಿಂದ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ.
ಪೊಲೀಸರ ಮಾಹಿತಿ ಪ್ರಕಾರ ಹಿರಿಯ ಪುತ್ರ ಸುರೇಶ್ ಭಟ್ ಉಪ್ಪಿನಂಗಡಿಯಿಂದ 3 ಗಂಟೆಗೆ ಮನೆಗೆ ಬಂದಾಗ ಘಟನೆ ಬೆಳಕಿಗೆ ಬಂದಿದೆ ಎಂದು ಸಂಬಂಧಿಕರಿಗೆ ಕರೆ ಮಾಡಿ ಮಾಹಿತಿ ನೀಡಿದ್ದು ಬಳಿಕ ಧರ್ಮಸ್ಥಳ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಎಸ್ಪಿ ಮಾಹಿತಿ: ನಿವೃತ್ತ ಶಿಕ್ಷಕನ ಕೊಲೆಯಾದ ಬಗ್ಗೆ ವರದಿಯಾಗಿದ್ದು. ಘಟನಾ ಸ್ಥಳಕ್ಕೆ ಬಂದು ಪರಿಶೀಲನೆ ಮಾಡಿದ್ದೇನೆ. ಹಾಗೂ ನಮ್ಮ ವಿವಿಧ ತಂಡ ಕೂಡ ಬಂದು ಮಾಹಿತಿ ಕಲೆ ಹಾಕುತ್ತಿದ್ದಾರೆ. ಯಾಕೆ ಈ ಕೊಲೆಯಾಗಿದೆ ಎಂದು ಮಾಹಿತಿ ಕಲೆ ಹಾಕಲಾಗುತ್ತಿದೆ. ಅದಲ್ಲದೆ ಮನೆಯಲ್ಲಿ ಯಾವುದೇ ಚಿನ್ನಾಭರಣ ಕಳ್ಳತನವಾಗಿಲ್ಲ. ಈ ಬಗ್ಗೆ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದ್ದು. ತನಿಖೆ ಬಳಿಕ ಹೆಚ್ಚಿನ ಮಾಹಿತಿ ನೀಡಲಾಗುವುದು ಎಂದರು.
ಕೊಲೆಯಾದ ಸ್ಥಳಕ್ಕೆ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯತೀಶ್.ಎನ್, ಬಂಟ್ವಾಳ ಉಪವಿಭಾಗದ ಡಿವೈಎಸ್ಪಿ ವಿಜಯ ಪ್ರಸಾದ್, ಬೆಳ್ತಂಗಡಿ ಸರ್ಕಲ್ ಇನ್ಸ್ಪೆಕ್ಟರ್ ನಾಗೇಶ್ ಕದ್ರಿ, ಧರ್ಮಸ್ಥಳ ಸಬ್ ಇನ್ಸ್ಪೆಕ್ಟರ್-1 ಕಿಶೋರ್.ಪಿ ಮತ್ತು ಸಬ್ ಇನ್ಸ್ಪೆಕ್ಟರ್-2 ಸಮರ್ಥ್.ಆರ್.ಗಾಣಿಗೇರ ಮತ್ತು ಸಿಬ್ಬಂದಿ,ಮಂಗಳೂರು ಬೆರಳಚ್ಚು ವಿಭಾಗದ ಡಿವೈಎಸ್ಪಿ ಗೌರೀಶ್ ಸಿಬ್ಬಂದಿ ಸಚಿನ್ ರೈ, ಉದಯ್ ,ಮಂಗಳೂರು ಎಫ್.ಎಸ್.ಎಲ್ ಸೋಕೋ ತಂಡದ ಅರ್ಪಿತಾ, ಮಂಗಳೂರು ಡಾಗ್ ಸ್ಕಾಡ್ ಮತ್ತು ತಂಡದ ಸಿಬ್ಬಂದಿ ಗಣೇಶ್, ಚಂದ್ರಪ್ಪ ಭೇಟಿ ನೀಡಿ ಪರಿಶೀಲನೆ ನಡೆಸಿದರು.