ಅರಸಿನಮಕ್ಕಿಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಕೊಕ್ಕಡ ಹೋಬಳಿ ಘಟಕಕ್ಕೆ ಚಾಲನೆ

Suddi Udaya

ಅರಸಿನಮಕ್ಕಿ: ಬೆಳ್ತಂಗಡಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಘಟಕ ಮತ್ತು ಅರಸಿನಮಕ್ಕಿ ಸರಕಾರಿ ಪ್ರೌಢಶಾಲೆಯ ಆಶ್ರಯದಲ್ಲಿ ಮಕ್ಕಳಿಗೆ ಸಾಹಿತ್ಯ ಪ್ರೇರಣೆ ಕಾರ್ಯಕ್ರಮ ಮತ್ತು ಕನ್ನಡ ಸಾಹಿತ್ಯ ಪರಿಷತ್ತಿನ ಕೊಕ್ಕಡ ಹೋಬಳಿ ಘಟಕದ ರಚನಾ ಪ್ರಕ್ರಿಯೆಗೆ ಚಾಲನೆ ನೀಡಲಾಯಿತು.

ಬೆಳ್ತಂಗಡಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಡಿ. ಯದುಪತಿ ಗೌಡರವರ ಅಧ್ಯಕ್ಷತೆಯಲ್ಲಿ ಜರುಗಿದ ಕಾರ್ಯಕ್ರಮವನ್ನು ಹಿರಿಯ ಸಹಕಾರಿಗಳು, ಸಾಹಿತ್ಯ ಸಾಂಸ್ಕೃತಿಕ ಸಂಘಟಕರೂ ಆದ ಶ್ರೀಕರ ರಾವ್ ಅಡ್ಕಾರಿಯವರು ದೀಪ ಬೆಳಗಿಸಿ ಚಾಲನೆ ನೀಡಿ ಅರಸಿನಮಕ್ಕಿಯಂತಹ ಹಳ್ಳಿ ಪ್ರದೇಶದಲ್ಲಿ ಸಾಹಿತ್ಯ ಸಾಂಸ್ಕೃತಿಕ ಕಾರ್ಯಕ್ರಮಗಳು ನಿರಂತರ ನಡೆಯಲಿ ಎಂದು ಶುಭಹಾರೈಸಿದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ ಕನ್ನಡ ಸಾಹಿತ್ಯ ಪರಿಷತ್ತಿನ ದ ಕ ಜಿಲ್ಲಾಧ್ಯಕ್ಷ ಡಾ. ಎಂ ಪಿ ಶ್ರೀನಾಥರು ಮಾತನಾಡುತ್ತಾ ಅರಸಿನಮಕ್ಕಿಯಲ್ಲಿ ಈ ದಿನ ಚಾಲನೆ ನೀಡುವ ಸಾಹಿತ್ಯ ಪರಿಷತ್ತಿನ ಹೋಬಳಿ ಘಟಕವು ಊರಿನ ಮತ್ತು ಶಾಲಾ ಮಕ್ಕಳ ಸಾಹಿತ್ಯ ಪ್ರತಿಭೆಗೆ ವೇದಿಕೆಯಾಗಲಿ. ಸಾಹಿತ್ಯಕ ಅಭಿರುಚಿ ಮತ್ತು ರಚನೆಯ ಮೂಲಕ ಸುಸಂಸ್ಕೃತ ಸಮಾಜ ಮತ್ತು ವ್ಯಕ್ತಿತ್ವ ನಿರ್ಮಾಣಕ್ಕೆ ಪೂರಕವಾಗಲಿ. ಈ ಮೂಲಕ ಅರಸಿನಮಕ್ಕಿ ಪ್ರದೇಶದ ಜನರ ಒಗ್ಗಟ್ಟು ಬಲವಾಗಲಿ ಎಂದು ಆಶಿಸಿದರು. ಹೋಬಳಿ ಘಟಕದ ನಿಯೋಜಿತ ಅಧ್ಯಕ್ಷೆ ಶ್ರೀಮತಿ ರೇಣುಕಾ ಸುಧೀರ್ ರವರು ಘಟಕದ ಯೋಜನೆಗಳು ಮತ್ತು ಸಾಹಿತ್ಯಕ ಚಟುವಟಿಕೆಗಳ ಕುರಿತು ಅನಿಸಿಕೆಗಳನ್ನು ವ್ಯಕ್ತಪಡಿಸಿದರು.

ಸಾಹಿತ್ಯ ಪರಿಷತ್ತಿನ ಕಾರ್ಯದರ್ಶಿಗಳಾದ ರಾಮಕೃಷ್ಣ ಭಟ್ ಚೊಕ್ಕಾಡಿಯವರು ಪ್ರಸ್ತಾವನೆಯ ಮೂಲಕ ಸಾಹಿತ್ಯ ಪ್ರೇರಣೆಯ ಮಾತುಗಳನ್ನಾಡಿದರು. ವೇದಿಕೆಯಲ್ಲಿ ತಾಲೂಕು ಪಂಚಾಯತ್ತಿನ ಮಾಜಿ ಸದಸ್ಯರಾದ ಶ್ರೀಮತಿ ಮಂಜುಳಾ ಕಾರಂತರವರು ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಅಧ್ಯಕ್ಷರಾದ ಡಿ. ಯದುಪತಿ ಗೌಡರವರು ಹೋಬಳಿ ಘಟಕದ ನಿಯೋಜಿತ ಅಧ್ಯಕ್ಷರಿಗೆ ಕನ್ನಡದ ಶಾಲು ನೀಡಿ ಘಟಕದ ರಚನಾ ಪ್ರಕ್ರಿಯೆಯ ಜವಾಬ್ದಾರಿಯನ್ನು ಹಸ್ತಾಂತರಿಸಿದರು. ಸಮಾರಂಭದ ಮೊದಲು ರಾಮಕೃಷ್ಣ ಭಟ್ ಚೊಕ್ಕಾಡಿಯವರು ಮಕ್ಕಳಿಗೆ ಸಾಹಿತ್ಯ ರಚನೆಯ ಕಾರ್ಯಾಗಾರವನ್ನು ಚಟುವಟಿಕೆಗಳ ಮೂಲಕ ನಡೆಸಿಕೊಟ್ಟರು. ಅಲ್ಲದೆ ಮಕ್ಕಳಿಂದ ಕವನ, ಕಥೆಗಳನ್ನು ರಚಿಸಿ, ವಾಚನವನ್ನೂ ಮಾಡಿಸಲಾಯಿತು.

ಮುಖ್ಯೋಪಾಧ್ಯಾಯರಾದ ಚಂದ್ರರವರು ಸ್ವಾಗತಿಸಿದರು, ಶಿಕ್ಷಕಿ ಶ್ರೀಮತಿ ಮಂಜುಳಾರವರು ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

Leave a Comment

error: Content is protected !!