ಬೆಳ್ತಂಗಡಿ : ಚಿತ್ತ ಪ್ರಸನ್ನತೆಯೊಂದಿಗೆ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಯೋಗದಿಂದ ಸಾಧ್ಯವಿದೆ ಎಂದು ಮಂಗಳೂರು ಆವಿಷ್ಕಾರ್ ಯೋಗ ತರಬೇತಿ ಕೇಂದ್ರದ ಸ್ಥಾಪಕ ಕುಶಾಲಪ್ಪ ಗೌಡ ನೆಕ್ಕರಾಜೆ ಹೇಳಿದರು.
ಅವರು ಶಾಲಾ ಶಿಕ್ಷಣ ಇಲಾಖೆ (ಪದವಿಪೂರ್ವ) ಮಂಗಳೂರು, ದಕ್ಷಿಣ ಕನ್ನಡ ಜಿಲ್ಲೆ ಮತ್ತು ವಾಣಿ ಪದವಿ ಪೂರ್ವ ಕಾಲೇಜು, ಬೆಳ್ತಂಗಡಿ ಇದರ ಸಹಯೋಗದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ಪದವಿಪೂರ್ವ ಕಾಲೇಜುಗಳ ಯೋಗಾಸನ ಸ್ಪರ್ಧೆಯನ್ನು ಉದ್ಘಾಟಿಸಿ ಮಾತನಾಡುತ್ತಾ, ಯೋಗ ಕಾಲ, ದೇಶ, ಜಾತಿ ಧರ್ಮವನ್ನು ಮೀರಿ ಬೆಳೆದಿದ್ದು ವಿಶ್ವ ಮಾನ್ಯತೆಯನ್ನು ಪಡೆದಿದೆ. ಮನುಷ್ಯನ ಮಾನಸಿಕ ಅಸ್ಥಿರತೆಯನ್ನು ಹೋಗಲಾಡಿಸಿ ಸ್ಥಿರತೆಯನ್ನು ಕಾಪಾಡುವ ಯೋಗ ಎಲ್ಲಾ ವಿದ್ಯೆಗಳಂತೆ ಮಹತ್ವವನ್ನು ಪಡೆದಿದೆ. ಇವತ್ತಿನ ಕಾಲದಲ್ಲಿ ಸಂಕಲ್ಪ ಬದ್ಧರಾಗಿ ನಿರಂತರ ಅಭ್ಯಾಸದಿಂದ ಯೋಗವನ್ನು ಅನುಷ್ಠಾನ ಮಾಡಿಕೊಳ್ಳುವುದರಿಂದ ಉನ್ನತ ಆರೋಗ್ಯದೊಂದಿಗೆ ಉತ್ತಮ ಉದ್ಯೋಗವನ್ನು ಗಳಿಸಬಹುದು ಎಂದರು.
ವಾಣಿ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷರಾದ ಕುಶಾಲಪ್ಪ ಗೌಡ ಅಧ್ಯಕ್ಷತೆ ವಹಿಸಿದ್ದರು. ದಕ್ಷಿಣ ಕನ್ನಡ ಪದವಿ ಪೂರ್ವ ಶಿಕ್ಷಣ ಇಲಾಖೆಯ ಕ್ರೀಡಾ ಸಂಯೋಜಕರಾದ ಶಶಿಧರ್ ಮಾಣಿ, ವಾಣಿ ಶಿಕ್ಷಣ ಸಂಸ್ಥೆಯ ಆಡಳಿತ ಅಧಿಕಾರಿ ಪ್ರಸಾದ್ ಕುಮಾರ್ ಉಪಸಿತರಿದ್ದರು.
ಕಾಲೇಜಿನ ಪ್ರಾಂಶುಪಾಲರಾದ ಯದುಪತಿ ಗೌಡ ಸ್ವಾಗತಿಸಿದರು. ಕ್ರೀಡಾ ಸಯೋಜಕರಾದ ವಿನೀಶ್ ವಂದಿಸಿದರು. ಉಪನ್ಯಾಸಕ ಸುದೀರ್ ಕೆ ಎನ್ ಕಾರ್ಯಕ್ರಮ ನಿರೂಪಿಸಿದರು.