ಕೃಷಿ ಪಂಡಿತ ಪ್ರಶಸ್ತಿಗೆ ರೈತರಿಂದ ಹಾಗೂ ರೈತ ಮಹಿಳೆಯರಿಂದ ಅರ್ಜಿ ಆಹ್ವಾನ

Suddi Udaya

ಬೆಳ್ತಂಗಡಿ: 2024-25ನೇ ಸಾಲಿನ ಆಯವ್ಯಯದಲ್ಲಿ ಕೃಷಿಯಲ್ಲಿ ರೈತ ಮಹಿಳೆಯರನ್ನು ಪ್ರೋತ್ಸಾಹಿಸುವ ಸಲುವಾಗಿ ಪ್ರತ್ಯೇಕವಾಗಿ ಅರ್ಜಿ ಹಾಕಲು ವಿಶೇಷ ಅವಕಾಶ. ಕೃಷಿ ವಲಯದಲ್ಲಿ ಉತ್ಪಾದಕತೆ ಹೆಚ್ಚಿಸಲು ಹಾಗೂ ರೈತರಲ್ಲಿ ಸ್ಪರ್ಧಾತ್ಮಕ ಮನೋಭಾವ ಬೆಳೆಸುವ ಉದ್ದೇಶದಿಂದ ಕೃಷಿ ಪಂಡಿತ ಪ್ರಶಸ್ತಿ ಬಹುಮಾನ ಯೋಜನೆಯನ್ನು ರೈತರಿಗೆ ಹಾಗು ರೈತ ಮಹಿಳೆಯರಿಗೆ ಕೃಷಿ ಇಲಾಖಾ ವತಿಯಿಂದ ಅನುಷ್ಠಾನಗೊಳಿಸಲಾಗುತ್ತಿದೆ.

ಕೃಷಿ ಪಂಡಿತ ಪ್ರಶಸ್ತಿಗೆ ಭಾಗವಹಿಸಲು ಇಚ್ಚಿಸುವವರು ದಕ್ಷಿಣ ಕನ್ನಡ ಜಿಲ್ಲೆಯ ಕೃಷಿ ಕ್ಷೇತ್ರದಲ್ಲಿ ವಿನೂತನ/ಹೊಸ ಅನ್ವೇಷಣೆ ಮತ್ತು ಸೃಜನಾತ್ಮಕ ಕಾರ್ಯಗಳಿಂದ ಗಮನಾರ್ಹ ಸಾಧನೆ ಮಾಡಿರುವ ಮತ್ತು ರೈತ ಸಮುದಾಯದ ಅಭಿವೃದ್ಧಿಗೆ ಅಪಾರ ಕೊಡುಗೆ ನೀಡುತ್ತಿರುವವರಾಗಿರಬೇಕು. ಭಾಗವಹಿಸುವವರ ಸಂಶೋಧನೆ/ಸಾಧನೆಗಳು ಮೂಲ ಸ್ವರೂಪದ್ದಾಗಿದ್ದು ಬೇರೆಯವರ ಸಾಧನೆಗಿಂತ ವಿಭಿನ್ನವಾಗಿರಬೇಕು ಹಾಗೂ ವ್ಯಾಪಕವಾಗಿ ಕೃಷಿ ಕ್ಷೇತ್ರದ ಏಳಿಗೆಗೆ ಕಾರಣವಾಗಿರಬೇಕು. ಸದರಿ ಪ್ರಶಸ್ತಿಗೆ ನಾಮನಿರ್ದೇಶನ ಸಲ್ಲಿಸಬಯಸುವ ರೈತರು ಹಾಗೂ ರೈತ ಮಹಿಳೆಯರು ಸ್ಥಳೀಯ ರೈತ ಸಂಪರ್ಕ ಕೇಂದ್ರ ಅಥವಾ ಸಹಾಯಕ ಕೃಷಿ ನಿರ್ದೇಶಕರ ಕಛೇರಿಯಿಂದ ನಿಗದಿತ ಅರ್ಜಿ ನಮೂನೆಯನ್ನು ಪಡೆದುಕೊಂಡು ಮಾಹಿತಿಯನ್ನು ಭರ್ತಿ ಮಾಡಿ ಆ.31ರ ಒಳಗೆ ಹತ್ತಿರದ ರೈತ ಸಂಪರ್ಕ ಕೇಂದ್ರ ಅಥವಾ ಸಹಾಯಕ ಕೃಷಿ ನಿರ್ದೇಶಕರ ಕಛೇರಿಗೆ ಸಲ್ಲಿಸಬಹುದಾಗಿರುತ್ತದೆ. ನಂತರ ಬಂದ ಅರ್ಜಿಗಳನ್ನು ಸ್ವೀಕರಿಸಲಾಗುವುದಿಲ್ಲ.

ಕೃಷಿ ಪಂಡಿತ ಪ್ರಶಸ್ತಿಯ ಬಹುಮಾನದ ಮೊತ್ತ ಈ ಕೆಳಕಂಡಂತೆ ನಿಗಧಿಪಡಿಸಲಾಗಿರುತ್ತದೆ.

ಬಹುಮಾನ ಮೊತ್ತ(ರೂಪಾಯಿಗಳಲ್ಲಿ) ಪ್ರಥಮ 125000, ದ್ವಿತೀಯ 100000, ತೃತೀಯ 75000, ಕೃಷಿ ಪಂಡಿತ – ಉದಯೋನ್ಮುಖ 50000,

ಈ ಹಿಂದೆ ಕೃಷಿ ಪಂಡಿತ ಪ್ರಶಸ್ತಿ ಪಡೆದವರು ಪುನಃ ಅರ್ಜಿ ಸಲ್ಲಿಸಲು ಅವಕಾಶವಿರುವುದಿಲ್ಲ. ಹೆಚ್ಚಿನ ಮಾಹಿತಿಗಾಗಿ ಹತ್ತಿರದ ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿಗಳು ಅಥವಾ ತಾಲ್ಲೂಕು ಸಹಾಯಕ ಕೃಷಿ ನಿರ್ದೇಶಕರನ್ನು ಸಂಪರ್ಕಿಸಬಹುದಾಗಿದೆ.

Leave a Comment

error: Content is protected !!