ಬೆಂಗಳೂರಿನಲ್ಲಿ ವೇಶ್ಯಾವಾಟಿಕೆ ದಂಧೆ ಮೇಲೆ ದಾಳಿ: ಬೆಳ್ತಂಗಡಿಯ ಸುಬ್ರಹ್ಮಣ್ಯ ಶಾಸ್ತ್ರಿ ಸಹಿತ ಮೂವರನ್ನು ಬಂಧಿಸಿದ ಬೆಂಗಳೂರು ಸಿಸಿಬಿ ಪೊಲೀಸರು

Suddi Udaya

ಬೆಳ್ತಂಗಡಿ: ಬೆಂಗಳೂರಿನಲ್ಲಿ ವೇಶ್ಯಾವಾಟಿಕೆ ದಂಧೆ ಮೇಲೆ ದಾಳಿ ನಡೆಸಿ ಬಾಂಗ್ಲಾದೇಶ ಮೂಲದ ಇಬ್ಬರು ಅಪ್ರಾಪ್ತ ವಯಸ್ಸಿನ ಬಾಲಕಿಯರನ್ನು ರಕ್ಷಿಸಿರುವ ಬೆಂಗಳೂರು ಸಿಸಿಬಿ ಪೊಲೀಸರು, ಬೆಳ್ತಂಗಡಿ ಮೂಲದ ಸಾಫ್ಟ್‌ವೇ‌ರ್ ಇಂಜಿನಿಯರ್ ಯುವಕನ ಸಹಿತ ಮೂವರನ್ನು ಬಂಧಿಸಿದ ಘಟನೆ ನಡೆದಿದೆ.

ಆರೋಪಿಗಳಾದ ಬೆಳ್ತಂಗಡಿ ತಾಲೂಕಿನ ನಿವಾಸಿ, ಎಲೆಕ್ಟ್ರಾನಿಕ್ ಸಿಟಿಯಲ್ಲಿ ವಾಸವಾಗಿದ್ದ ಟೆಕ್ಕಿ ಸುಬ್ರಹ್ಮಣ್ಯ ಶಾಸ್ತ್ರಿ, ಬೆಂಗಳೂರಿನ ಹೊಂಗಸಂದ್ರದ ಕರಿಷ್ಮಾ ಶೇಖ್ ಅಲಿಯಾಸ್ ಮುಸ್ಕಾನ್ (23) ಹಾಗೂ ಬೆಂಗಳೂರಿನ ಶಾಂತಿಪುರದ ಸೂರಜ್ ಸಾಹಜೀ(26) ಬಂಧಿತರು.

ಕರಿಷ್ಮಾ ಹಾಗೂ ಸೂರಜ್ ಪಶ್ಚಿಮ ಬಂಗಾಳದವರಾಗಿದ್ದು, ಹಲವು ವರ್ಷಗಳ ಹಿಂದೆ ಬೆಂಗಳೂರಿಗೆ ಉದ್ಯೋಗದ ನೆಪದಲ್ಲಿ ಬಂದು ವೇಶ್ಯಾವಾಟಿಕೆ ನಡೆಸುತ್ತಿದ್ದರು. ಅದಕ್ಕಾಗಿ ಗೋವಿಂದಪುರದಲ್ಲಿ ಮನೆ ಬಾಡಿಗೆಗೆ ಪಡೆದು ದಂಧೆ ನಡೆಸುತ್ತಿದ್ದರು. ದಂಧೆಗೆ ಬಾಂಗ್ಲಾದೇಶದ 15 ಮತ್ತು 16 ವರ್ಷದ ಇಬ್ಬರು ಬಾಲಕಿಯರನ್ನು ಆರೋಪಿಗಳು ಕರೆತಂದಿದ್ದು, ಈ ಕುರಿತು ಖಚಿತ ಮಾಹಿತಿ ಪಡೆದ ಪೊಲೀಸರು ಆ.30ರಂದು ದಾಳಿ ನಡೆಸಿದ್ದರು. ಬಂಧಿತರ ಪೈಕಿ ಕರಿಷ್ಮಾ ಬಾಂಗ್ಲಾದೇಶದ ಮೂಲದವಳಾಗಿರುವ ಶಂಕೆಯಿದ್ದು, ಈ ಕುರಿತು ತನಿಖೆ ನಡೆಯುತ್ತಿದೆ.

ಬೆಳ್ತಂಗಡಿಯ ಸುಬ್ರಹ್ಮಣ್ಯ ಶಾಸ್ತ್ರಿ ವೇಶ್ಯಾವಾಟಿಕೆ ಅಡ್ಡೆಗೆ ಗ್ರಾಹಕನಾಗಿ ಹೋಗಿದ್ದ. ಇದೇ ವೇಳೆ ಪೊಲೀಸ್ ದಾಳಿ ನಡೆದಿದ್ದು, ಸಿಕ್ಕಿಬಿದ್ದಿದ್ದಾನೆ. ವಿಚಾರಣೆ ವೇಳೆ ತಾನು ಈ ಮನೆಗೆ ಬರುತ್ತಿರುವುದು ಇದು ಎರಡನೇ ಬಾರಿ ಎಂದು ಹೇಳಿಕೊಂಡಿದ್ದಾನೆ. ಸಾಫ್ಟ್‌ವೇರ್ ಉದ್ಯೋಗಿಯಾಗಿರುವ ಸುಬ್ರಹ್ಮಣ್ಯ ಶಾಸ್ತ್ರಿ ದಂಧೆಕೋರರಲ್ಲಿ ಬಾಲಕಿಯರು ಬೇಕು ಎಂದು ಬೇಡಿಕೆ ಇಟ್ಟಿದ್ದ. ಅದರಂತೆ ಇಬ್ಬರು ಆರೋಪಿಗಳು ಬಾಲಕಿಯರನ್ನು ಕರೆತಂದಿದ್ದರು. ಬಳಿಕ ಹೊಂಗಸಂದ್ರದ ಬಾಡಿಗೆ ಮನೆಯಲ್ಲಿ ಇರಿಸಿ ವೇಶ್ಯಾವಾಟಿಕೆ ನಡೆಸುತ್ತಿದ್ದರು. ಆರೋಪಿಗಳ ವಿರುದ್ಧ ಬೊಮ್ಮನಹಳ್ಳಿ ಠಾಣೆಯಲ್ಲಿ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಸಿಸಿಬಿ ಹೆಚ್ಚುವರಿ ಪೊಲೀಸ್ ಆಯುಕ್ತ ಡಾ|ಚಂದ್ರಗುಪ್ತ ತಿಳಿಸಿದ್ದಾರೆ.

Leave a Comment

error: Content is protected !!