
ಬೆಳ್ತಂಗಡಿ: ಬಳಂಜ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಇದರ ಅಭಿವೃದ್ಧಿಗೆ ರೂ. 2.00 ಕೋಟಿ ಅನುದಾನ ಮಂಜೂರುಗೊಳಿಸುವಂತೆ ಬೆಳ್ತಂಗಡಿ ಶಾಸಕ ಹರೀಶ್ ಪೂಂಜರವರು ಶಿಕ್ಷಣ ಸಚಿವ ಮಧು ಬಂಗಾರಪ್ಪರವರನ್ನು ಭೇಟಿ ನೀಡಿ ಮನವಿ ಸಲ್ಲಿಸಿದರು.

ಬೆಳ್ತಂಗಡಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಹಿರಿಯ ಪ್ರಾಥಮಿಕ ಬಳಂಜ ಶಾಲೆಯು ಪ್ರಾರಂಭವಾಗಿ 75 ವರ್ಷಗಳನ್ನು ಪೂರೈಸುತ್ತಿದ್ದು, ಬಳಂಜ, ನಾಲ್ಕೂರು, ತೆಂಕಕಾರಂದೂರು ಹಾಗೂ ಸುತ್ತಮುತ್ತಲಿನ ಪ್ರದೇಶದ ಅತೀ ಹೆಚ್ಚು ವಿದ್ಯಾರ್ಥಿಗಳು ಈ ಶಾಲೆಯಲ್ಲಿ ವಿದ್ಯಾಭ್ಯಾಸ ನಡೆಸುತ್ತಿದ್ದು, 75 ವರ್ಷ ಪೂರೈಸುತ್ತಿರುವ ಈ ಪರ್ವಕಾಲದಲ್ಲಿ ಈ ಶಾಲೆಗೆ ಮೂಲಭೂತ ಸೌಲಭ್ಯ ಒದಗಿಸುವುದು ಹಾಗೂ ಕೊಠಡಿಗಳ ನಿರ್ಮಾಣ ಅವಶ್ಯವಾಗಿರುತ್ತದೆ.
ಶಾಲೆಯ ಹಿತೈಷಿಗಳು,ಹಳೆ ವಿಧ್ಯಾರ್ಥಿಗಳು ಸೇರಿಕೊಂಡು ಶಾಲೆಯ ಅಮೃತ ಮಹೋತ್ಸವವನ್ನು ಪ್ರೇರಣಾದಾಯಕವಾಗಿ ನೆರವೇರಿಸಲು ಬಳೆಂಜ ಶಿಕ್ಷಣ ಟ್ರಸ್ಟ್ ರಚಿಸಿ ದಾನಿಗಳ ಸಹಕಾರವನ್ನು ಬಳಸಿಕೊಂಡು ಶಾಲೆಯ ಅಭಿವೃದ್ಧಿಗೆ ಶ್ರಮಿಸುತ್ತಿರುವ ಈ ಸಂದರ್ಭದಲ್ಲಿ ಸರ್ಕಾರದ ಶಿಕ್ಷಣ ಇಲಾಖೆಯ ಮೂಲಕ ತಾವುಗಳು ಶಾಲೆ ಅಭಿವೃದ್ಧಿ ಪಡಿಸಲು ರೂ. 2.00 ಕೋಟಿಗಳ ವಿಶೇಷ ಅನುದಾನ ಮಂಜೂರು ಮಾಡುವಂತೆ ಪತ್ರದ ಮೂಲಕ ತಿಳಿಸಲಾಗಿದೆ.