ಉಜಿರೆ ಎಸ್.ಡಿ.ಎಂ ಮಲ್ಟಿ-ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಅತ್ಯಾಧುನಿಕ ತಂತ್ರಜ್ಞಾನದ ಐಸಿಯು ವೆಂಟಿಲೇಟರ್‌ಗಳ ಉದ್ಘಾಟನೆ

Suddi Udaya

ಉಜಿರೆ : ಡಾ. ಡಿ ವೀರೇಂದ್ರ ಹೆಗ್ಗಡೆಯವರ ನಿರ್ದೇಶನದಂತೆ ಮಾತೃಶ್ರೀ ಹೇಮಾವತಿ ವಿ. ಹೆಗ್ಗಡೆ ಹಾಗೂ ಹರ್ಷೇಂದ್ರ ಕುಮಾರ್ ಮಾರ್ಗದರ್ಶನದಲ್ಲಿ ಉಜಿರೆ ಎಸ್.ಡಿ.ಎಂ ಮಲ್ಟಿ-ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಅತ್ಯಾಧುನಿಕ ತಂತ್ರಜ್ಞಾನ ಹೊಂದಿರುವ ರೂ. 30 ಲಕ್ಷ ಮೌಲ್ಯದ 2 ಬಿಪಿಎಲ್ ಲೋವೆನ್‌ಸ್ಪೈನ್ ಎಲಿಸಾ-600 ವೆಂಟಿಲೇಟರ್‌ಗಳನ್ನು ಶ್ರೀ ಕ್ಷೇತ್ರ ಧರ್ಮಸ್ಥಳದ ಡಿ. ಹರ್ಷೇಂದ್ರ ಕುಮಾರ್ ಉದ್ಘಾಟಿಸಿದರು.


ಡಿ. ಹರ್ಷೇಂದ್ರ ಕುಮಾರ್ ಅವರು ಹೊಸ ತಂತ್ರಜ್ಞಾನದ 2 ಐಸಿಯು ವೆಂಟಿಲೇಟರ್‌ಗಳಿಗೆ ಚಾಲನೆ ನೀಡಿ ಮಾತನಾಡುತ್ತಾ, ಶ್ರೀ ಕ್ಷೇತ್ರ ಧರ್ಮಸ್ಥಳದ ಪ್ರತಿಯೊಂದು ಸಂಸ್ಥೆಗಳು ಕೂಡ ಸೇವೆಯ ಉದ್ದೇಶದಿಂದ ನಡೆಸಲ್ಪಡುತ್ತದೆ. ಖರ್ಚು ಬಗ್ಗೆ ಚಿಂತಿಸದೆ ಜನತೆಗೆ ಉತ್ತಮ ಸೇವೆ ನೀಡುವ ಗುರಿಯೊಂದಿಗೆ ಕೆಲಸ ನಿರ್ವಹಿಸುತ್ತದೆ. ಇದೇ ಉದ್ದೇಶದಿಂದ ಉಜಿರೆ ಎಸ್.ಡಿ.ಎಂ ಮಲ್ಟಿ-ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಕೋಟ್ಯಾಂತರ ರೂಪಾಯಿ ಖರ್ಚು ಮಾಡಿ ಅತ್ಯಾಧುನಿಕ ತಂತ್ರಜ್ಞಾನ ಹೊಂದಿರುವ ವೈದ್ಯಕೀಯ ಸಲಕರಣೆಗಳನ್ನು ಒದಗಿಸಲಾಗಿದೆ. ಇದರಿಂದಾಗಿ ಸುಧಾರಿತ ವೈದ್ಯಕೀಯ ಸೇವೆ ನೀಡಲು ಸಹಕಾರಿಯಾಗಿದೆ. ಹಾಗಾಗಿ ದಿನೇ-ದಿನ ಈ ಆಸ್ಪತ್ರೆಗೆ ಬರುವ ರೋಗಿಗಳ ಸಂಖ್ಯೆ ಹೆಚ್ಚುತ್ತಿದೆ. ಇತ್ತೀಚೆಗೆ ಈ ಆಸ್ಪತ್ರೆಯಲ್ಲಿ ನಡೆಯುತ್ತಿರುವ ಯಶಸ್ವಿ ಶಸ್ತ್ರಚಿಕಿತ್ಸೆಗಳು ಕೂಡ ಈ ಆಸ್ಪತ್ರೆಯ ಮೇಲೆ ಗ್ರಾಮೀಣ ಜನತೆಯಲ್ಲಿ ಭರವಸೆ ಹೆಚ್ಚಿಸಿದೆ. ಈ ಆಸ್ಪತ್ರೆ ಅನೇಕ ಮಂದಿಗೆ ಉದ್ಯೋಗದ ಅವಕಾಶ ನೀಡಿ ಅನೇಕ ಕುಟುಂಬಗಳು ನೆಮ್ಮದಿಗೆ ಕಾರಣವಾಗಿದೆ. ಇತರ ಅನೇಕರಿಗೆ ಪರೋಕ್ಷ ರೀತಿಯಲ್ಲಿ ವಿವಿಧ ಅವಕಾಶ ಒದಗಿಸುವ ಮೂಲಕ ಪ್ರಯೋಜನಕಾರಿಯಾಗಿದೆ ಎಂದರು.


9 ಹಾಸಿಗೆಗಳ ಸುಸಜ್ಜಿತ ಐಸಿಯು ಹೊಂದಿರುವ ಈ ಆಸ್ಪತ್ರೆಯು ಈಗಾಗಲೇ 6 ವೆಂಟಿಲೇಟರ್‌ಗಳನ್ನು ಹೊಂದಿದ್ದು, ಈಗ ಒಟ್ಟು 8 ವೆಂಟಿಲೇಟರ್‌ಗಳಿವೆ. ಹೃದಯಾಘಾತ, ಸ್ಟ್ರೋಕ್, ಉಸಿರಾಟದ ಸಮಸ್ಯೆ ಮುಂತಾದ ತುರ್ತು ಸಂದರ್ಭದಲ್ಲಿ ಈ ಅತ್ಯಾಧುನಿಕ ವೆಂಟಿಲೇಟರ್‌ಗಳು ಬಹಳ ಉಪಯುಕ್ತವಾಗಲಿದೆ. ಇದು ಉತ್ತಮ ಗುಣಮಟ್ಟದ ಉಸಿರಾಟವನ್ನು ಒದಗಿಸುತ್ತದೆ. ಇದರಲ್ಲಿ ಅಳವಡಿಸಿರುವ ಪ್ಯಾರಾಮೀಟರ್ ಹಾಗೂ ರೋಗಿಯಿಂದ ಸಂಪರ್ಕ ಕಳೆದುಕೊಂಡಾಗ ಎಚ್ಚರಿಸುವ ಸೈರನ್ ಹೊಂದಿದ್ದು, ರೋಗಿಗೆ ಉಸಿರಾಟದಲ್ಲಿ ವ್ಯತ್ಯವಾಗದಂತೆ ನಿಗಾವಹಿಸುತ್ತದೆ. ಹೊಸ ತಂತ್ರಜ್ಞಾನ ಹೊಂದಿರುವ ಈ ವೆಂಟಿಲೇಟರ್ ವಯಸ್ಕರು, ಮಕ್ಕಳು ಮತ್ತು ನವಜಾತ ಶಿಶುಗಳಿಗೆ ಹೊಂದಾಣಿಕೆಯಾಗಬಲ್ಲದು. ಈ ವೆಂಟಿಲೇಟರ್ ಪೋರ್‍ಟೇಬಲ್ ಆಗಿದೆ. ಅಗತ್ಯ ಬಿದ್ದಾಗ ಆಂಬ್ಯುಲೆನ್ಸ್‌ಗಳಲ್ಲಿಯೂ ಅಳವಡಿಸಲು ಸಾಧ್ಯವಿದೆ. ಮಂಗಳೂರು ಬಳಿಕ ಈ ಅತ್ಯಾಧುನಿಕ ವೆಂಟಿಲೇಟರ್ ಹೊಂದಿರುವ ಏಕೈಕ ಆಸ್ಪತ್ರೆ ಇದಾಗಿದೆ.

ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕ ಎಂ. ಜನಾರ್ದನ್ ಸ್ವಾಗತಿಸಿದರು. ಶಾಂತಿವನ ಟ್ರಸ್ಟ್ ಕಾರ್ಯದರ್ಶಿ ಸೀತಾರಾಮ ತೋಳ್ಪಡಿತ್ತಾಯ, ಉಜಿರೆ ಎಸ್.ಡಿ.ಎಂ ಮಲ್ಟಿ-ಸ್ಪೆಷಾಲಿಟಿ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ| ದೇವೇಂದ್ರ ಕುಮಾರ್ ಪಿ, ಮುಖ್ಯ ವೈದ್ಯಾಧಿಕಾರಿ ಡಾ| ಸಾತ್ವಿಕ್ ಜೈನ್, ಇಲ್ಲಿನ ವೈದ್ಯರು, ದಾದಿಯರು ಸಿಬ್ಬಂದಿಗಳು ಹಾಗೂ ಮತ್ತಿತರರು ಉಪಸ್ಥಿತರಿದ್ದರು.

Leave a Comment

error: Content is protected !!