ಕರ್ನಾಟಕ ದಲಿತ ಚಳುವಳಿ ಸಂಭ್ರಮಾಚರಣಾ ಸಮಿತಿ ಬೆಳ್ತಂಗಡಿ; ಡಿ. 16 : ಬೆಳ್ತಂಗಡಿಯಲ್ಲಿ ಕರ್ನಾಟಕ ದಲಿತ ಚಳುವಳಿ 50ರ ಸಂಭ್ರಮಾಚರಣೆ: ವಿಚಾರ ಸಂಕಿರಣ, ಬೃಹತ್ ಮೆರವಣಿಗೆ, ಸಮಾವೇಶ, ಸಾಂಸ್ಕೃತಿಕ ಕಾರ್ಯಕ್ರಮ

Suddi Udaya

ಬೆಳ್ತಂಗಡಿ: ಕರ್ನಾಟಕ ದಲಿತ ಚಳುವಳಿಗೆ ಐವತ್ತು ವರ್ಷ ತುಂಬಿದೆ. 70ರ ದಶಕದ ಆರಂಭದಲ್ಲಿ ಪ್ರೊ.ಬಿ.ಕೃಷ್ಣಪ್ಪ ಅವರ ನಾಯಕತ್ವ ಮತ್ತು ನೇತೃತ್ವದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಎಂಬ ಹೆಸರಿನಲ್ಲಿ ರಾಜ್ಯದಲ್ಲಿ ಜನ್ಮ ತಾಳಿದ ದಲಿತ ಚಳುವಳಿಗೆ ಇದೀಗ ಭರ್ತಿ ಅರ್ಧ ಶತಮಾನತುಂಬುತ್ತಿದೆ. ಈ ನಿಟ್ಟಿನಲ್ಲಿ ಡಿಸೆಂಬರ್ 16ರಂದು ‘ಕರ್ನಾಟಕ ದಲಿತ ಚಳುವಳಿ 50ರ ಸಂಭ್ರಮ’ಎಂಬ ಕಾರ್ಯಕ್ರಮವನ್ನು ಬೆಳ್ತಂಗಡಿಯಲ್ಲಿ ಆಯೋಜಿಸಲಾಗಿದೆ ಎಂದು ಆಚರಣಾ ಸಮಿತಿ ಅಧ್ಯಕ್ಷ ಬಿ.ಕೆ ವಸಂತ್, ಮಾಧ್ಯಮ ಸಲಹೆಗಾರ ರಘುಧಮ೯ಸೇನ, ಕಾರ್ಯಾಧ್ಯಕ್ಷ ಎಸ್.ಬೇಬಿ ಸುವರ್ಣ ಹೇಳಿದರು.


ಅವರು ಸೆ.25 ರಂದು ಬೆಳ್ತಂಗಡಿ ಅಂಬೇಡ್ಕರ್ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಕಾಯ೯ಕ್ರಮದ ಯಶಸ್ವಿಗೆ ಸಮುದಾಯ ಪಕ್ಷ, ಸಂಘಟನೆಗಳ ಬೇಧವಿವಲ್ಲದೆ ಗ್ರಾಮವಾರು, ಸಮುದಾಯವಾರು, ಪಕ್ಷವಾರು ಮುಖಂಡರು, ಯುವ ಕಾರ್ಯಕರ್ತರನ್ನೊಳಗೊಂಡ ಪೂರ್ಣ ಪ್ರಮಾಣದ ಸಮಿತಿಯನ್ನು ರಚಿಸಲಾಗಿದೆ.
ಈ ಕಾರ್ಯಕ್ರಮದಲ್ಲಿ ಬೆಳ್ತಂಗಡಿ ತಾಲೂಕಿನ ದಲಿತ ಚಳುವಳಿ ನಡೆದು ಬಂದ ಹಾದಿಯ ಅವಲೋಕನ ನಡೆಯಲಿದೆ.
ಬೃಹತ್ ಮೆರವಣಿಗೆ, ಸಮಾವೇಶದ ಮೂಲಕ ಸಂಭ್ರಮಾಚರಣೆ ಜೊತೆಗೆ ತಾಲೂಕಿನಾದ್ಯಂತ ದಲಿತ ಚಳುವಳಿಯನ್ನು ಕಟ್ಟಲು ಶ್ರಮಿಸಿ ಅಗಲಿ ಹೋದ ಅನೇಕ ಹಿರಿಯ ಚೇತನಗಳ, ಸ್ಮರಣೆ, ಹಿರಿಯ ನಾಯಕರಿಗೆ, ಕಾರ್ಯಕರ್ತರಿಗೆ ಗೌರವಾರ್ಪಣೆ ನಡೆಯಲಿದೆ ಎಂದು ಹೇಳಿದರು.


ಅ.20ಕ್ಕೆ ವಿಚಾರ ಸಂಕಿರಣ:
ಮೊದಲ ಹಂತದಲ್ಲಿ ಅಕ್ಟೋಬರ್ 20ಕ್ಕೆ ವಿಚಾರ ಸಂಕಿರಣ ಆಯೋಜಿಸಲಾಗಿದೆ. ಅಂದು 50 ವರ್ಷಗಳ ಹಿಂದೆ ನಾಡಿನ ಸಮಕಾಲೀನ ಪ್ರಗತಿಪರ ಸಮಾನಮನಸ್ಕ ಚಿಂತಕರು, ಸಾಹಿತಿಗಳು, ಲೇಖಕರು, ಪತ್ರಕರ್ತರು ಹೋರಾಟಗಾರರು ನಡೆಸಿದ ಚಿಂತನೆಯ ಫಲವೆಂಬಂತೆ ಪ್ರೊ.ಬಿ.ಕೃಷ್ಣಪ್ಪನವರ ನೇತೃತ್ವದಲ್ಲಿ ರಾಜ್ಯದಲ್ಲಿ ಹುಟ್ಟಿಕೊಂಡ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಸ್ವಾಭಿಮಾನಿ ಹೋರಾಟದ ಬೀಜವನ್ನು ದಕ್ಷಿಣ ಕನ್ನಡದ ನೆಲದಲ್ಲಿ ಬೆರಳೆಣಿಕೆಯ ಸಮಾನಮನಸ್ಕ ದಲಿತ ಗೆಳೆಯರೊಂದಿಗೆ ಸೇರಿಕೊಂಡು ಬಿತ್ತಿದವರು ಒಬ್ಬ ಬಿಲ್ಲವ ವಿದ್ಯಾರ್ಥಿ ಎಂಬ ಸತ್ಯ ನಮ್ಮ ಜಿಲ್ಲೆಯ ದಲಿತರನ್ನು ಹೊರತುಪಡಿಸಿ ಬಹುತೇಕರಿಗೆ ತಿಳಿದಿರಲಿಕ್ಕಿಲ್ಲ. ಪ್ರೊ.ಬಿ.ಕೃಷ್ಣಪ್ಪನವರು ಸ್ಥಾಪಿಸಿದ ಕರ್ನಾಟಕ ದಲಿತ ಸಂಘರ್ಷ ಸಮಿತಿಯನ್ನು ಮೂಲತ: ಹಾಸನ ಜಿಲ್ಲೆಯವರಾದ ಬಿಲ್ಲವ ಸಮುದಾಯದ ಸೋಮಶೇಖರರವರು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವಿಶೇಷವಾಗಿ ಮಂಗಳೂರಿನಲ್ಲಿ ದಲಿತ ಮಿತ್ರರರನ್ನು ಸಂಘಟಿಸುವ ಮೂಲಕ ಪರಿಚಯಿಸಿದವರಲ್ಲಿ ಮೊದಲಿಗರು ಎಂಬ ಇತಿಹಾಸವನ್ನು ಜಿಲ್ಲೆಯ ದಲಿತ ಚಳುವಳಿಗಾರರು ಮರೆಯಲು ಸಾಧ್ಯವೇವಿಲ್ಲ ಎಂದರು.


ಐದು ದಶಕಗಳ ದಲಿತ ಚಳುವಳಿಯು ಮೂಡಿಸಿದ ಜಾಗೃತಿ, ಸ್ವಾಭಿಮಾನ, ಧೈರ್ಯ ಮತ್ತು ಕಲಿಸಿಕೊಟ್ಟ ಒಗ್ಗಟ್ಟಿನ ಪಾಠ, ಹಚ್ಚಿದ ಹೋರಾಟದ ಕಿಚ್ಚು ಹಾಗೂ ಸೈದ್ಧಾಂತಿಕ ಪ್ರಜ್ಞೆಯನ್ನು ಮುಂದಿನ ಯುವ ಪೀಳಿಗೆಗೂ ರೋಮಾಂಚಕ ಸ್ಫೂರ್ತಿಯೊಂದಿಗೆ ಹಸ್ತಾಂತರಿಸಬೇಕಾಗಿದೆ. ಈ ಹಿನ್ನೆಲೆಯಲ್ಲಿ ನಮ್ಮ ತಾಲೂಕಿನಲ್ಲಿ ಒಂದು ಚಾರಿತ್ರಿಕ ಕಾರ್ಯಕ್ರಮವೊಂದನ್ನು ಆಯೋಜಿಸುತ್ತಿದ್ದೇವೆ. ಕರ್ನಾಟಕದ ಮಹಾತ್ಮಾ ಪ್ರೊ.ಬಿ.ಕೃಷ್ಣಪ್ಪ ಅವರು ತಮ್ಮ ಕನಸಿನ ಕೂಸಾದ ಕರ್ನಾಟಕ ದಲಿತ ಸಂಘರ್ಷ ಸಮಿತಿ (ರಿ) ಎಂಬ ಕೆಚ್ಚೆದೆಯ ಸ್ವಾಭಿಮಾನಿ ಸಂಘಟನೆಯ ಮೂಲಕ ಈ ನಾಡಿನ ದಲಿತರ ಗುಡಿಸಲುಗಳಲ್ಲಿ ಹೋರಾಟದ ಹಣತೆಯನ್ನು ಹಚ್ಚಿ ಐದು ದಶಕಗಳೇ ಕಳೆದವು ಎಂದು ವಿವರಿಸಿದರು.


ದಲಿತ ಚಳುವಳಿಯ ಮೂಲಕ ಪ್ರೊ.ಬಿ.ಕೃಷ್ಣಪ್ಪರವರು ದಲಿತರ ಎದೆಗಳಲ್ಲಿ ಹೋರಾಟದ ಕಿಚ್ಚನ್ನೂ ಸ್ವಾಭಿಮಾನದ ಕಿಡಿಯನ್ನೂ ಹಚ್ಚಿದರು. ಕರ್ನಾಟಕ ದಲಿತ ಸಂಘರ್ಷ ಸಮಿತಿಯು ಆಳುವವರಿಗೆ ಮತ್ತು ಶೋಷಕ ವರ್ಗಕ್ಕೆ ದಲಿತ ಸಂಘರ್ಷ ಸಮಿತಿಯ ಮೂಲಕ ಸಿಂಹಸ್ವಪ್ನವಾಗಿತ್ತು. ನಾಡಿನ ದಲಿತ ದಮನಿತರಿಗೆ ಧ್ವನಿಯೇ ಇಲ್ಲದ ಕಾಲಘಟ್ಟದಲ್ಲಿ ಕರ್ನಾಟಕದಲ್ಲಿ ದಬ್ಬಾಳಿಕೆ, ದೌರ್ಜನ್ಯದ ವಿರುದ್ಧ ದಲಿತರ ಆಶಾಕಿರಣವಾಗಿ ಧೈರ್ಯ ತುಂಬಲು ಸಿಡಿದೆದ್ದ ದಲಿತ ಸಂಘರ್ಷ ಸಮಿತಿಯು ದಮನಿತರ ಎದೆಗಳಲ್ಲಿ ಸ್ವಾಭಿಮಾನದ ಚಿಲುಮೆಯಾಗಿ ಕೆಚ್ಚೆದೆಯ ನೀಲಿ ಬಾವುಟದೊಂದಿಗೆ ಹೊರಹೊಮ್ಮಿರುವುದು ದಲಿತ ಚಳುವಳಿಯ ಹೋರಾಟದ ಹಾದಿಯ ರೋಚಕ ಇತಿಹಾಸ.ಇಂಥ ದಲಿತ ಚಳುವಳಿ ನಡೆದು ಬಂದ ಅರ್ಧ ಶತಮಾನದ ಚಾರಿತ್ರಿಕ ಹೋರಾಟದ ಹಾದಿಯ ಏಳು-ಬೀಳುಗಳ ಅವಲೋಕನಕ್ಕೆ ಕಾಲ ಸನ್ನಿಹಿತವಾಗಿದೆ. ಐದು ದಶಕಗಳ ದಲಿತ ಚಳುವಳಿಯು ಮೂಡಿಸಿದ ಜಾಗೃತಿ, ಸ್ವಾಭಿಮಾನ, ಧೈರ್ಯ ಮತ್ತು ಕಲಿಸಿಕೊಟ್ಟ ಒಗ್ಗಟ್ಟಿನ ಪಾಠ, ಹಚ್ಚಿದ ಹೋರಾಟದ ಕಿಚ್ಚು ಹಾಗೂ ಸೈದ್ಧಾಂತಿಕ ಪ್ರಜ್ಞೆಯನ್ನು ಮುಂದಿನ ಯುವ ಪೀಳಿಗೆಗೂ ರೋಮಾಂಚಕ ಸ್ಫೂರ್ತಿಯೊಂದಿಗೆ ಹಸ್ತಾಂತರಿಸಬೇಕಾಗಿದೆ ಎಂದು ತಿಳಿಸಿದರು.


ವಿಚಾರ ಸಂಕಿರಣ, ಬೃಹತ್ ಮೆರವಣಿಗೆ, ಸಮಾವೇಶ:
ಈ ಹಿನ್ನೆಲೆಯಲ್ಲಿ ತಾಲೂಕಿನಲ್ಲಿ ಚಾರಿತ್ರಿಕ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಸುಮಾರು ಹತ್ತು ಸಾವಿರಕ್ಕೂ ಹೆಚ್ಚು ಜನರು ಭಾಗವಹಿಸುವ ನಿರೀಕ್ಷೆ ಇಟ್ಟುಕೊಳ್ಳಲಾಗಿದೆ. ಈ ನಿಟ್ಟಿನಲ್ಲಿ ನಡೆಯಲಿರುವ ದಲಿತ ಚಳುವಳಿಯ ೫೦ರ ಸಂಭ್ರಮದ ವಿಚಾರ ಸಂಕಿರಣ ಹಾಗೂ ಬೃಹತ್ ಮೆರವಣಿಗೆ, ಸಮಾವೇಶ, ಸಾಂಸ್ಕೃತಿಕ ವೈವಿಧ್ಯ ಇತ್ಯಾದಿ ಕಾರ್ಯಕ್ರಮಗಳು ನಡೆಯಲಿವೆ ಎಂದು ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಸಮಿತಿ ಗೌರವಾಧ್ಯಕ್ಷ ಚೆನ್ನಕೇಶವ, ಕಾರ್ಯಾಧ್ಯಕ್ಷರುಗಳಾದ ಶೇಖರ ಕುಕ್ಕೇಡಿ, ನೇಮಿರಾಜ್ ಕಿಲ್ಲೂರು, ಸಂಜೀವ ಆರ್. ಬೆಳ್ತಂಗಡಿ, ರಮೇಶ್ ಆರ್. ಬೆಳ್ತಂಗಡಿ, ಪ್ರಧಾನ ಕಾರ್ಯದರ್ಶಿ ಅಚುಶ್ರೀ ಬಾಂಗೇರು, ಉಪಾಧ್ಯಕ್ಷರುಗಳಾದ ಜಯಾನಂದ ಪಿಲಿಕಳ, ವೆಂಕಣ್ಣ ಕೊಯ್ಯೂರು, ಪಿ.ಕೆ ರಾಜು ಪಡಂಗಡಿ, ಚಂದ್ರಾವತಿ ಉಜಿರೆ, ಗೌರವ ಸಲಹೆಗಾರರಾದ ಈಶ್ವರ ಬೈರ ಲಾಯಿಲ, ಪದ್ಮನಾಭ ಗರ್ಡಾಡಿ, ಸವಿತಾ ಎನ್ ಅಟ್ರಿಂಜೆ, ಕೂಸ ಅಳದಂಗಡಿ, ಶಿವಪ್ಪ ಗರ್ಡಾಡಿ, ಮಾಧ್ಯಮ ಸಲಹೆಗಾರ ಶೇಖರ ಎಲ್. ಲಾಯಿಲ ಉಪಸ್ಥಿತರಿದ್ದರು.

Leave a Comment

error: Content is protected !!