ಉಜಿರೆ: ರಾಜ್ಯಕ್ಕೆ ಕರ್ನಾಟಕವೆಂದು ನಾಮಕರಣಗೊಂಡ 50ನೇ ವರ್ಷ ಸುವರ್ಣ ಕರ್ನಾಟಕವೆಂಬ ಪ್ರಯುಕ್ತ ರಾಜ್ಯ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಿದ್ಧಪಡಿಸಿ ರಾಜ್ಯಾದ್ಯಂತ ಸಂಚರಿಸಲಿರುವ ಸುವರ್ಣ ಸಂಭ್ರಮ ರಥಯಾತ್ರೆ ದಕ್ಷಿಣ ಜಿಲ್ಲೆಯನ್ನು ಪ್ರವೇಶಿಸುವ ಸಂದರ್ಭದಲ್ಲಿ ಉಜಿರೆಯ ಮುಖ್ಯ ವೃತ್ತದಲ್ಲಿ ಭವ್ಯ ಸ್ವಾಗತ ಕೋರಲಾಯಿತು.
ಬೆಳ್ತಂಗಡಿ ತಹಸೀಲ್ದಾರ್ ಪ್ರಥ್ವಿ ಸಾನಿಕಮ್ ರಥದಲ್ಲಿ ಅಳವಡಿಸಲಾದ ಭವ್ಯ ಭುವನೇಶ್ವರಿ ಪ್ರತಿಮೆಗೆ ಮಾಲಾರ್ಪಣೆ ಮಾಡುವ ಮೂಲಕ ಜಿಲ್ಲೆಗೆ ಬರಮಾಡಿಕೊಳ್ಳಲಾಯಿತು. ಚಿಕ್ಕಮಗಳೂರು ಜಿಲ್ಲೆಯಿಂದ ದಕ್ಷಿಣ ಕನ್ನಡ ಜಿಲ್ಲೆಗೆ ಆಗಮಿಸಿದ ರಥಯಾತ್ರೆಯನ್ನು ತಹಸೀಲ್ದಾರ್ ಅವರಿಗೆ ಹಸ್ತಾಂತರಿಸಲಾಯಿತು.
ಈ ಸಂದರ್ಭದಲ್ಲಿ ಬೆಳ್ತಂಗಡಿ ತಾಲೂಕು ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಭವಾನಿಶಂಕರ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ರಾಜೇಶ್ ಜಿ ,ದ ಕ. ಜಿಲ್ಲಾ ಕ ಸಾ ಪ ಅಧ್ಯಕ್ಷ ಡಾ| ಶ್ರೀನಾಥ್ ಎಂ ಪಿ. , ಬೆಳ್ತಂಗಡಿ ತಾಲೂಕು ಕ.ಸಾ.ಪ.ಅಧ್ಯಕ್ಷ ಯದುಪತಿ ಗೌಡ ಭುವನೇಶ್ವರಿ ಪ್ರತಿಮೆಗೆ ಮಾಲಾರ್ಪಣೆಗೈದು ಗೌರವ ಸಲ್ಲಿಸಿದರು.
ಬೆಳ್ತಂಗಡಿ ತಾಲೂಕು ಕಂದಾಯ ನಿರೀಕ್ಷಕ ಪ್ರತೀಶ್ ಎಚ್ . ಆರ್ .,ವೇಣೂರು ಕಂದಾಯ ನಿರೀಕ್ಷಕ ಕುಮಾರಸ್ವಾಮಿ, ಮಿತ್ತಬಾಗಿಲು ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಮೋಹನ ಬಂಗೇರ,ಉಜಿರೆಯ ಕೈಗಾರಿಕೋದ್ಯಮ ಮತ್ತು ವರ್ತಕರ ಸಂಘದ ಅಧ್ಯಕ್ಷ ಅರವಿಂದ ಕಾರಂತ್ ,ಉಜಿರೆ ಗ್ರಾಮ ಪಂಚಾಯತ್ ಸಿಬ್ಬಂದಿ ವರ್ಗ ಮತ್ತು ಉಜಿರೆಯ ನಾಗರಿಕರು ,ಸಾರ್ವಜನಿಕರು ಉಪಸ್ಥಿತರಿದ್ದರು. ರಥಯಾತ್ರೆಯಲ್ಲಿ ರಾಜ್ಯದ ಕಲೆ,ಜಾನಪದ ಸಂಸ್ಕೃತಿ ಯನ್ನು ಬಿಂಬಿಸುವ ಪ್ರತಿಕೃತಿಗಳನ್ನು ಅಳವಡಿಸಲಾಗಿತ್ತು. ಕಲಾವಿದರು ತಮಟೆ ಬಾರಿಸುವ ಮೂಲಕ ರಥಯಾತ್ರೆಯನ್ನು ಸ್ವಾಗತಿಸಿ ಬೀಳ್ಕೊಡಲಾಯಿತು. ರಥಯಾತ್ರೆ ಶನಿವಾರ ಬೆಳ್ತಂಗಡಿಯಲ್ಲಿ ವಾಸ್ತವ್ಯವಿದ್ದು ಭಾನುವಾರ ಮಂಗಳೂರಿಗೆ ನಿರ್ಗಮಿಸಲಿದೆ.