ಸೂಳಬೆಟ್ಟು: ಯಾವುದೇ ಭಾಷೆಯಲ್ಲಿ ಅದರದೇ ಆದ ಸಂಸ್ಕೃತಿ, ಸೌಂದರ್ಯ ಅಡಕವಾಗಿರುತ್ತದೆ. ನಾವು ಕುಟುಂಬದ ಸದಸ್ಯರೊಂದಿಗೆ ನಮ್ಮದೇ ಮಾತೃ ಭಾಷೆಯಲ್ಲಿ ಯಾವುದೇ ಕಲಬೆರಕೆ ಇಲ್ಲದೆ ಮಾತನಾಡುವುದನ್ನು ರೂಢಿಸಿಕೊಳ್ಳಬೇಕು ಎಂದು ಸಾಹಿತಿ ಮೈಸೂರು ಅನಂತ ತಾಮ್ಹನ್ಕಾರ್ ಹೇಳಿದರು.
ಅವರು ಸೆ.30 ರಂದು ಅಳದಂಗಡಿ ಸನಿಹದ ಸೂಳಬೆಟ್ಟು ಬರಾಯ ಶ್ರೀಗೋಪಾಲಕೃಷ್ಣ ದೇವಸ್ಥಾನದ ವಠಾರದಲ್ಲಿ ಬೆಳ್ತಂಗಡಿ ತಾಲೂಕು ಚಿತ್ಪಾವನ ಸಂಘದ ವತಿಯಿಂದ ನಡೆದ ಅಂತರ್ಜಿಲ್ಲಾ ಚಿತ್ಪಾವನಿ ಭಾಷಾ ಕವಿಗೋಷ್ಠಿಯ ಸಮಾರೋಪ ಮಾಡಿದರು.
ದಿನವೂ ಹೊಸ ಶಬ್ದಾರ್ಥಗಳನ್ನು ಅರಿಯುವುದರ ಜೊತೆಗೆ ಆಗಾಗ ಗದ್ಯ ಪದ್ಯಗಳನ್ನು ಬರೆಯುವ ಅಭ್ಯಾಸವನ್ನಿಟ್ಟುಕೊಂಡರೆ ಸಾಹಿತ್ಯ ಕೃಷಿಯಲ್ಲಿ ನಾವು ಏನನ್ನಾದರೂ ಸಾಧಿಸಬಹುದು ಎಂದು ಅವರು ಬೆಳ್ತಂಗಡಿ ತಾಲೂಕು ಚಿತ್ಪಾವನ ಸಂಘದ ಕವಿಗೋಷ್ಠಿ ನಡೆಸಿ ಸಮುದಾಯದ ಪ್ರತಿಭೆಗಳ ಅನಾವರಣಕ್ಕೆ ಅವಕಾಶ ಕೊಟ್ಟಿರುವುದನ್ನು ಶ್ಲಾಘಿಸಿದರು.
ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ತ್ರಿವಿಕ್ರಮ ಹೆಬ್ಬಾರ್ ವಹಿಸಿದ್ದರು. ಇದಕ್ಕೂ ಮೊದಲು ಕವಿಯತ್ರಿ ಸಂಧ್ಯಾ ಪಾಳಂದ್ಯೆ ಬೆಳ್ತಂಗಡಿ ಅವರು ಉದ್ಘಾಟಿಸಿದರು. ಗೋಷ್ಠಿಯಲ್ಲಿ 47 ಕವಿಗಳು ಸ್ವರಚಿತ ಕವನಗಳನ್ನು ವಾಚಿಸಿದರು. ಚಂದ್ರಕಾಂತ ಗೋರೆ, ದೀಪಕ ಆಠವಳೆ, ವಿವೇಕ ಕೇಳ್ಕರ್ ಕಾರ್ಯಕ್ರಮ ನಿರ್ವಹಿಸಿದರು.