ಅಳದಂಗಡಿ: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪ್ರಕೃತಿ ಚಿಕಿತ್ಸೆ ಹಾಗೂ ಯೋಗ ವಿಜ್ಞಾನಗಳ ಮಹಾವಿದ್ಯಾಲಯ ಮತ್ತು ಆಸ್ಪತ್ರೆ ಉಜಿರೆ ಇದರ ಆಶ್ರಯದಲ್ಲಿ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ ಬೆಂಗಳೂರು-ರಾಷ್ಟ್ರೀಯ ಸೇವಾ ಯೋಜನೆ-ಗ್ರಾಮ ಪಂಚಾಯತ್ ಅಳದಂಗಡಿ -ಪ್ರಾಥಮಿಕ ಆರೋಗ್ಯ ಕೇಂದ್ರ ಅಳದಂಗಡಿ-ಸ.ಉ.ಪ್ರಾ ಶಾಲೆ ಬಡಗಕಾರಂದೂರು-ಅಳದಂಗಡಿ ಶ್ರೀ ಸತ್ಯದೇವತಾ ದೈವಸ್ಥಾನದ ಸಹಯೋಗದೊಂದಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರವು ಸೆ. 29 ರಂದು ಜರುಗಿತು.
ಉಚಿತ ಆರೋಗ್ಯ ತಪಾಸಣಾ ಶಿಬಿರದ ಉದ್ಘಾಟನೆಯನ್ನು ಅಳದಂಗಡಿ ಅರಮನೆಯ ತಿಮ್ಮಣ್ಣರಸರಾದ ಡಾ.ಪದ್ಮಪ್ರಸಾದ ಅಜಿಲರು ನೆರವೇರಿಸಿ ಪ್ರಕೃತಿ ಚಿಕಿತ್ಸೆಯ ಮಹತ್ವದ ಕುರಿತು ಮಾತನಾಡಿ ಮೆಚ್ಚುಗೆ ವ್ಯಕ್ತಪಡಿಸಿ ಶುಭ ಹಾರೈಸಿದರು.
ವೇದಿಕೆಯಲ್ಲಿ ಅಳದಂಗಡಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಅರ್ಜುನ್ ಭಟ್, ಬಡಗಕಾರಂದೂರು ಶಾಲೆಯ ಎಸ್ ಡಿ ಎಂ ಸಿ ಅಧ್ಯಕ್ಷರಾದ ಶಶಿಕಾಂತ್ ನಾಯಕ್ ಉಪಸ್ಥಿತರಿದ್ದರು. ನೂರಾರು ಮಂದಿ ಉಚಿತ ಆರೋಗ್ಯ ತಪಾಸಣಾ ಶಿಬಿರದ ಪ್ರಯೋಜನ ಪಡೆದುಕೊಂಡರು, ಶಿಬಿರದಲ್ಲಿ ವೈದ್ಯರ ಸಮಾಲೋಚನೆ, ರಕ್ತಪರೀಕ್ಷೆ, ಬಿಪಿ ತಪಾಸಣೆ, ರಕ್ತ ಗುಂಪು ತಪಾಸಣೆ, ಪೋಷಣಾ ಸಲಹೆ, ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಸಲಹೆ, ನಿದ್ರಾಹೀನತೆ, ಮಧುಮೇಹ ಇತರೆ ಕಾಯಿಲೆಗಳನ್ನು ಉಪಚರಿಸುವ ಕ್ರಮಗಳನ್ನು ವೈದ್ಯರುಗಳು ತಿಳಿಸಿದರು.
ಕಾರ್ಯಕ್ರಮದಲ್ಲಿ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪ್ರಕೃತಿ ಚಿಕಿತ್ಸೆ ಹಾಗೂ ಯೋಗ ವಿಜ್ಞಾನಗಳ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ.ಪ್ರಶಾಂತ್ ಶೆಟ್ಟಿರವರನ್ನು ಸನ್ಮಾನಿಸಿ ಗೌರವಿಸಲಾಯಿತು, ಅಳದಂಗಡಿಯಲ್ಲಿ ಜರುಗಿದ್ದ ಉಚಿತ ಯೋಗ ಶಿಬಿರದ ಯಶಸ್ಸಿಗೆ ಸಹಕಾರ ನೀಡಿದ್ದ ಪದ್ಮಾಂಬ ಅರೇಂಜರ್ಸ್ ನ ಮಾಲಕರಾದ ಸುಕೇಶ್ ಜೈನ್ ಅವರನ್ನು ಹಾಗೂ ಬಡಗಕಾರಂದೂರು ಶಾಲೆಯ ಮುಖ್ಯೋಪಾಧ್ಯಾಯರಾದ ಸುರೇಶ್ ಎನ್ ರನ್ನು ಗೌರವಿಸಲಾಯಿತು.
ಸಮಾರೋಪ ಸಮಾರಂಭದಲ್ಲಿ ಅಳದಂಗಡಿ ಶ್ರೀ ಸತ್ಯದೇವತಾ ದೈವಸ್ಥಾನದ ಆಡಳಿತ ಮೊಕ್ತೇಸರರಾದ ಶಿವಪ್ರಸಾದ ಅಜಿಲ, ಪ್ರಗತಿಪರ ಕೃಷಿಕರು, ಉಚಿತ ಆರೋಗ್ಯ ತಪಾಸಣಾ ಶಿಬಿರದ ಸಂಘಟನಾ ರೂವಾರಿ ಸುಭಾಶ್ಚಂದ್ರ ರೈ ಪಡ್ಯೋಡಿಗುತ್ತು, ರಾಷ್ಟ್ರೀಯ ಸೇವಾ ಯೋಜನೆಯ ಸಂಯೋಜಕರಾದ ಡಾ.ಮೇಘನಾ ಗೌಡ ಭಾಗವಹಿಸಿದ್ದರು,
ಮಹಾವಿದ್ಯಾಲಯದ ಉಪಪ್ರಾಂಶುಪಾಲೆ ಸುಜಾತಾ ದಿನೇಶ್ ಸರಳಾಯ ಸಭೆಯ ಅಧ್ಯಕ್ಷತೆ ವಹಿಸಿ ಆರೋಗ್ಯದ ಸುಸ್ಥಿರತೆ ಕಾಯುವಲ್ಲಿ ಪ್ರಕೃತಿ ಚಿಕಿತ್ಸೆ ಹಾಗೂ ಆಹಾರ ಕ್ರಮದ ಬಗೆಗೆ ಸಂಪನ್ಮೂಲ ಮಾಹಿತಿಯನ್ನು ಹಂಚಿಕೊಂಡರು. ಕಾರ್ಯಕ್ರಮದಲ್ಲಿ ವೈದ್ಯರು, ಎನ್ ಎಸ್ ಎಸ್ ವಿಭಾಗದ ಪ್ರಧಾನರುಗಳು, ಊರ ಪ್ರಮುಖರು, ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು.
ರಾಷ್ಟ್ರೀಯ ಸೇವಾ ಯೋಜನೆಯ ಸಂಯೋಜಕ ಧರ್ಮೇಂದ್ರ ಕುಮಾರ್ ಕಾರ್ಯಕ್ರಮ ನಿರೂಪಿಸಿದರು. ಸಂದೀಪ್ ಎಸ್ ನೀರಲ್ಕೆ ಸನ್ಮಾನ ಪತ್ರ ವಾಚಿಸಿದರು. ವಿದ್ಯಾರ್ಥಿನಿ ಶಮಾ ಮಡ್ತಿಲ ಸ್ವಾಗತಿಸಿದರು, ಸುಖಿತಾ ರೈ ಪಡ್ಯೋಡಿಗುತ್ತು ಧನ್ಯವಾದವಿತ್ತರು.