
ಉಜಿರೆ: ಎಸ್.ಡಿ.ಎಂ. ಪಾಲಿಟೆಕ್ನಿಕ್ ಕಾಲೇಜು ಇದರ ವಾರ್ಷಿಕೋತ್ಸವ ಸಮಾರಂಭವು ಅ.8 ರಂದು ಕಾಲೇಜಿನ ಸೆಮಿನಾರ್ ಹಾಲ್ ನಲ್ಲಿ ನಡೆಯಿತು.
ಎಸ್.ಡಿ.ಎಂ. ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಡಿ. ಹರ್ಷೆಂದ್ರ ಕುಮಾರ್ ಅಧ್ಯಕ್ಷತೆ ವಹಿಸಿ ಮಾತನಾಡಿ, ವಿದ್ಯಾರ್ಥಿಗಳು ಮಾಡಿದ ಸಾಧನೆಯನ್ನು ಗುರುತಿಸುವುದಕ್ಕೆ ಇರುವ ವೇದಿಕೆಯೇ ವಾರ್ಷಿಕ ಉತ್ಸವ. ಈ ಸಾಲಿನ ವಿದ್ಯಾರ್ಥಿಗಳು ಅದ್ಭುತವಾದ ಸಾಧನೆಯನ್ನು ಮಾಡಿ ಕಾಲೇಜಿಗೆ ಹೆಸರನ್ನು ತಂದುಕೊಟ್ಟಿದ್ದೀರಿ. ವಿದ್ಯಾರ್ಥಿಗಳ ಅನುಕೂಲ ದೃಷ್ಟಿಯಿಂದ ಕಾಲೇಜಿಗೆ ಬೇಕಾಗುವ ವ್ಯವಸ್ಥೆಯನ್ನು ಮ್ಯಾನೇಜ್ ಮೆಂಟ್ ನಿಂದ ಮಾಡಿದ್ದೇವೆ. ಜ್ಞಾನವನ್ನು ಯಾರಿಂದಲೂ ಕದಿಯುವುದಕ್ಕೆ ಸಾಧ್ಯವಿಲ್ಲ. ಮೊಬೈಲ್ ಫೋನ್ ನಲ್ಲಿರುವಂತಹ ಇಂಟೆಲಿಜೆಂಟ್ಸ್ ನಮ್ಮಲ್ಲಿ ಕೂಡ ಅಳವಡಿಸಿಕೊಳ್ಳಬೇಕು ಎಂದು ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.

ಮುಖ್ಯ ಅತಿಥಿ, ಬೆಂಗಳೂರು ಟ್ಯಾಲೆಂಟ್ರಿ ಇದರ ಸಿಇಒ ಜಗದೀಶ್ ಶೇಖರ್ ನಾಯ್ಕ್ ಮಾತನಾಡಿ, ಒಬ್ಬ ಉದ್ಯೋಗಿ ಉದ್ಯಮವನ್ನು ಪ್ರಾರಂಭ ಮಾಡಬೇಕಾದರೆ ಛಲ, ಬಲ ಹಾಗೂ ದೂರದೃಷ್ಟಿಗಳು ಇದ್ದಲ್ಲಿ ಖಂಡಿತವಾಗಿ ಸಾಧಿಸಲು ಸಾಧ್ಯ. ಸತ್ಯತೆ, ಧನ್ಯತಾ ಮನೋಭಾವ, ಕ್ಷಮಾಪನೆ ಹಾಗೂ ಸಮಾಜಕ್ಕೆ ಕೊಡುಗೆ, ಈ ನಾಲ್ಕು ವಿಷಯವನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ವಿದ್ಯಾರ್ಥಿಗಳಿಗೆ ಶುಭಹಾರೈಸಿದರು.
ಕಾರ್ಯಕ್ರಮದಲ್ಲಿ ಸಾಧಕರಿಗೆ ಬಹುಮಾನ ವಿತರಣೆ ಮಾಡಲಾಯಿತು. ಹಾಗೂ ಇತ್ತೀಚಿಗೆ ನಡೆದ ಜಿಲ್ಲಾ ಇಂಟರ್ -ಪಾಲಿಟೆಕ್ನಿಕ್ ಪುರುಷರ ಮ್ಯಾಟ್ ಕಬಡ್ಡಿ ಪಂದ್ಯಾಟದಲ್ಲಿ ಪ್ರಥಮ ಸ್ಥಾನ ಪಡೆದ ಎಸ್.ಡಿ.ಎಂ. ಪಾಲಿಟೆಕ್ನಿಕ್ ತಂಡಕ್ಕೆ ಗಣ್ಯರ ಉಪಸ್ಥಿತಿಯಲ್ಲಿ ಪ್ರಶಸ್ತಿಯನ್ನು ನೀಡಲಾಯಿತು.
ವೇದಿಕೆಯಲ್ಲಿ ಎಸ್.ಡಿ.ಎಂ. ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಡಾ. ಸತೀಶ್ಚಂದ್ರ ಎಸ್. ಉಪಸ್ಥಿತರಿದ್ದರು.
ಕಾಲೇಜು ಪ್ರಾಂಶುಪಾಲರಾದ ಸಂತೋಷ್ ವರದಿ ವಾಚಿಸಿದರು. ಪ್ರಾಧ್ಯಾಪಕರಾದ ಶಂಕರ್ ಭಟ್ ಹಾಗೂ ರೆನಿಟಾ ಫೆರ್ನಾಂಡಿಸ್ ಅತಿಥಿ ಪರಿಚಯವನ್ನು ಮಾಡಿದರು. ಸಂಪತ್ ಕುಮಾರ್ ಜೈನ್ ನಿರೂಪಿಸಿದರು. ಪ್ರವೀಣ್ ಬಿ.ಜಿ ಸ್ವಾಗತಿಸಿ, ದೈಹಿಕ ಶಿಕ್ಷಣ ಶಿಕ್ಷಕ ನಿತಿನ್ ಧನ್ಯವಾದವಿತ್ತರು.