ಬೆಳ್ತಂಗಡಿ: ತಾಲೂಕು ವಿಕಲಚೇತನರ ಪುನರ್ವಸತಿ ಕಾರ್ಯಕರ್ತರ ಪ್ರಗತಿ ಪರಿಶೀಲನಾ ಸಭೆಯು ಇತ್ತೀಚೆಗೆ ಕಾರ್ಯನಿರ್ವಾಹಕ ಅಧಿಕಾರಿಯವರಾದ ಭವಾನಿ ಶಂಕರ್ ಇವರ ಅಧ್ಯಕ್ಷತೆಯಲ್ಲಿ ತಾಲೂಕು ಪಂಚಾಯತ್ ನ ಸಮರ್ಥ ಸೌಧ, ಬೆಳ್ತಂಗಡಿಯಲ್ಲಿ ನಡೆಸಲಾಯಿತು.
ಈ ಸಂದರ್ಭದಲ್ಲಿ ಕಾರ್ಯನಿರ್ವಾಹಕ ಅಧಿಕಾರಿಯವರು ತಾಲ್ಲೂಕಿನ ಎಲ್ಲ ವಿಕಲಚೇತನರ ಸಂಜೀವಿನಿ ವಿಕಲಚೇತನರ ಸ್ವಸಹಾಯ ಸಂಘಗಳ ಪರಿಶೀಲನೆ ಮಾಡಿ ಇದರ ಸದುಪಯೋಗ ಪಡೆದುಕೊಳ್ಳಲು ಎಲ್ಲ ವಿಕಲಚೇತನ ಕಾರ್ಯಕರ್ತರು ಸಂಬಂಧಿಸಿದ ಎಲ್ಲ ಫಲಾನುಭವಿಯರಿಗೆ ಸಹಕಾರ ನೀಡಲು ಸೂಚಿಸಿದರು. ಸಂಘಗಳ ಬಗ್ಗೆ ಮತ್ತು ಇದರ ಅವಕಾಶಗಳ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಎನ್.ಆರ್.ಎಲ್.ಎಮ್ ಸಂಯೋಜಕ ಜಯಾನಂದ ಹಾಗೂ ನಿತೇಶ್ ಇವರಿಂದ ಮಾಹಿತಿಯನ್ನು ನೀಡಲಾಯಿತು.
ನಂತರ ಕಾರ್ಯನಿರ್ವಾಹಕ ಅಧಿಕಾರಿಯವರು ಹೊಸ ವಿಕಲಚೇತನರ ಗುರುತಿಸುವಿಕೆಗಳನ್ನು ಮಾಡಿ ಅವರಿಗೆ ಬೇಕಾದ ಸರ್ಕಾರದ ಸೂಕ್ತ ಯೋಜನೆಗಳನ್ನು ಇನ್ನೂ ಪರಿಣಾಮಕಾರಿಯಾಗಿ ನೀಡಲು ಪುನರ್ವಸತಿ ಕಾರ್ಯಕರ್ತರು ಜವಾಬ್ದಾರಿಯುತ ಕರ್ತವ್ಯ ನಿರ್ವಹಿಸುವ ಬಗ್ಗೆ ತಿಳುವಳಿಕೆ ಮೂಡಿಸಿದರು ಮತ್ತು ಎಲ್ಲಾ ರೀತಿಯಲ್ಲಿ ತಾಲ್ಲೂಕಿನ ವಿಕಲಚೇತನರಿಗೆ ಅನುಕೂಲ ಆಗಲು ಪರಿಣಾಮಕಾರಿಯಾಗಿ ತಾಲೂಕಿನ ಎಲ್ಲ ವಿಕಲಚೇತನ ಗ್ರಾಮೀಣ/ನಗರ ಪುನರ್ವಸತಿ ಕಾರ್ಯಕರ್ತರು ಬಹಳ ಅಚ್ಚುಕಟ್ಟಾಗಿ ಕರ್ತವ್ಯ ನಡೆಸಲು ಬೇಕಾದ ಸಲಹೆ ಸೂಚನೆಗಳನ್ನು ನೀಡಿದರು. ತಾಲ್ಲೂಕಿನ ಎಲ್ಲಾ ಕಾರ್ಯಕರ್ತರ ಮಾಸಿಕ ವರದಿಯನ್ನು ತಾಲೂಕಿನ ಮೇಲ್ವಿಚಾರಕರಾದ ಜೋನ್ ಬ್ಯಾಪ್ಟಿಸ್ಟ್ ಡಿಸೋಜ ರವರ ಮೂಲಕ ಪಡೆದು ಪರಿಶೀಲಿಸಿದರು ಹಾಗೂ ರಾಜ್ಯ ವಿಕಲಚೇತನರ ಇಲಾಖೆಯಿಂದ ಬಂದಿರುವ ಮಾಹಿತಿ ಹಾಗೂ ಇತರ ವರದಿಯಯನ್ನು ನೀಡಲು ಸೂಚನೆಯನ್ನು ತಾಲೂಕಿನ ಮೇಲ್ವಿಚಾರಕರಾದ ಜೋನ್ ಬ್ಯಾಪ್ಟಿಸ್ಟ್ ಡಿಸೋಜ ರವರು ತಿಳಿಸಿದರು.
ತಾಲೂಕಿನ ಮೇಲ್ವಿಚಾರಕರಾದ ಜೋನ್ ಬ್ಯಾಪ್ಟಿಸ್ಟ್ ಡಿಸೋಜ ಧನ್ಯವಾದವಿತ್ತರು. ಸಭೆಯಲ್ಲಿ 34 ಗ್ರಾಮೀಣ ಹಾಗೂ ನಗರ ಪುನರ್ವಸತಿ ಕಾರ್ಯಕರ್ತರು ಭಾಗವಹಿಸಿದ್ದರು.