ಉಪ್ಪಿನಂಗಡಿ :
ಉಪ್ಪಿನಂಗಡಿ ವಲಯ ಅರಣ್ಯ ವ್ಯಾಪ್ತಿಯ ಮೀಸಲು ಅರಣ್ಯ ಪ್ರದೇಶದಲ್ಲಿ ನಿರಂತರವಾಗಿ ಕಾಡು ಪ್ರಾಣಿಗಳ ಬೇಟೆ ನಡೆಯುತ್ತಿದ್ದು ಶುಕ್ರವಾರ ಹಗಲಿನಲ್ಲಿ ನಾಲ್ಕು ಮಂದಿ ಬೇಟೆಗಾರರು ಬಾರಿ ಗಾತ್ರದ ಕಾಡುಕೋಣವನ್ನು ಬೇಟೆಯಾಡಿರುವ ಬಗ್ಗೆ ಖಚಿತ ಮಾಹಿತಿಯ ಮೇರೆಗೆ ದಾಳಿ ನಡೆಸಿದ ಅರಣ್ಯಾಧಿಕಾರಿಗಳು.
ನಿಡ್ಲೆ ಗ್ರಾಮದ ಬೂಡುಜಾಲು ಎಂಬಲ್ಲಿ ಶುಕ್ರವಾರ ಬೆಳಿಗ್ಗೆ ಮೀಸಲು ಅರಣ್ಯದ ಅಂಚಿನಲ್ಲಿ ಕಾಡುಕೋಣವೊಂದನ್ನು ಗುಂಡಿಕ್ಕಿ ಕೊಂದು ಕಾಡಿನಲ್ಲೇ ಅದನ್ನು ಮಾಂಸ ಮಾಡಿ ಸಾಗಾಟ ಮಾಡಿರುವ ಬಗ್ಗೆ ದೂರು ವ್ಯಕ್ತವಾಗಿದೆ.
ಸತ್ತ ಕಾಡುಕೋಣವನ್ನು ಕತ್ತರಿಸಿ ಶಿಬಾಜೆ ಗ್ರಾಮದ ಕಡುಂಬುಚಲು ಎಂಬಲ್ಲಿಯ ಅರಂಪಾದೆ ನಿವಾಸಿ ಕೃತ್ಯದ ಪ್ರಮುಖ ಆರೋಪಿ ರಾಜು ಎಂಬವರ ಮನೆಗೆ ಸಾಗಿಸಿ ಅಲ್ಲಿ ಮಾಂಸ ಮಾಡಿ ಶೇಖರಿಸಿ ಇಡಲಾಗಿತು. ಉಪ್ಪಿನಂಗಡಿ ವಲಯ ಅರಣ್ಯಾಧಿಕಾರಿ ರಾಘವೇಂದ್ರ ಅವರ ಮಾರ್ಗದರ್ಶನದಲ್ಲಿ ಉಪವಲಯ ಅರಣ್ಯಾಧಿಕಾರಿಗಳಾದ ರಾಜೇಶ್, ಶಿವಾನಂದ ಆಚಾರ್ಯ, ಯತೀಂದ್ರ, ಭವಾನಿ ಶಂಕರ್ ಹಾಗೂ ಅರಣ್ಯ ರಕ್ಷಕ ಶಿವಾನಂದ್ ಕುದುರಿ ದಾಳಿ ನಡೆಸಿ ಮಾಂಸವನ್ನು ವಶಪಡಿಸಿಕೊಂಡಿದ್ದಾರೆ. ಆರೋಪಿ ಸ್ಥಳದಿಂದ ಪರಾರಿಯಾಗಿದ್ದು. ಪ್ರಕರಣ ದಾಖಲಿಸಲಾಗಿದೆ.
ಮೀಸಲು ಅರಣ್ಯ ಪ್ರದೇಶವಾಗಿರುವುದರಿಂದ ನಿಡ್ಲೆ, ಶಿಬಾಜೆ, ಶಿರಾಡಿ ಪರಿಸರದಲ್ಲಿ ನಿರಂತರವಾಗಿ ಕಾಡು ಪ್ರಾಣಿಗಳ ಬೇಟೆಯಾಡುವ ತಂಡ ಕಾರ್ಯಾಚರಿಸುತ್ತಿದೆ. ಅವರು ಪ್ರಾಣಿಗಳನ್ನು ಮಾಂಸ ಮಾಡಿ ಒಣಗಿಸಿ ಕೆಜಿಗಳ ಪ್ಯಾಕ್ ಗಳನ್ನಾಗಿ ಮಾಡಿ ಕೇರಳ ಮೊದಲಾದ ಪ್ರದೇಶಗಳಿಗೆ ಸಾಗಿಸುತ್ತಿದ್ದಾರೆ. ಈ ರೀತಿಯಾಗಿ ಒಣಗಿಸಿದ ಮಾಂಸ ಕೆಜಿ ಒಂದಕ್ಕೆ ರೂ.1300 ರಿಂದ ರೂ.1500ರವರೆಗೆ ಮಾರಾಟ ಮಾಡಲಾಗುತ್ತಿದೆ. ಸ್ಥಳೀಯವಾಗಿ ಕೆಲವು ವ್ಯಕ್ತಿಗಳಿಗೆ ಇದೇ ದರದಲ್ಲಿ ಮಾರಾಟ ಮಾಡಲಾಗುತ್ತಿದೆ ಎಂದು ದೂರಲಾಗಿದೆ.
3 ಮನೆಗೆ ದಾಳಿ – ಮಾಂಸ ಪತ್ತೆ
ಗುಪ್ತ ಮಾಹಿತಿ ಆಧರಿಸಿ ಅರಣ್ಯಾಧಿಕಾರಿಗಳ ತಂಡ ಶಿಬಾಜೆ ನಿವಾಸಿ ರಾಜು ಎಂಬವರ ಮನೆಗೆ ದಾಳಿ ನಡೆಸಿದ್ದು, ಮಾಂಸಪತ್ತೆಯಾಗಿದೆ. ಇನ್ನೂ ಕೆಲವರು ಈ ಕೃತ್ಯದಲ್ಲಿ ಭಾಗಿಗಳಾಗಿದ್ದು ಪ್ರಕರಣವನ್ನು ದಾಖಲಿಸಿಕೊಂಡು ಈ ಬಗ್ಗೆ ಶೋಧ ನಡೆಯುತ್ತಿದೆ ಎಂಬುದಾಗಿ ಉಪ್ಪಿನಂಗಡಿ ವಲಯ ಅರಣ್ಯಾಧಿಕಾರಿ ರಾಘವೇಂದ್ರ ` ತಿಳಿಸಿದ್ದಾರೆ