ಉಜಿರೆ: ನವೆಂಬರ್ 15 ರಂದು ನಡೆಯಲಿರುವ ಕಸ್ತೂರಿ ರಂಗನ್ ವರದಿಯ ವಿರುದ್ಧ ಬೃಹತ್ ಪ್ರತಿಭಟನಾ ಸಭೆಯ ಪೂರ್ವಭಾವಿ ಸಭೆಯು ಅ.23ರಂದು ಉಜಿರೆಯ ಶಾರದಾ ಮಂಟಪದಲ್ಲಿ ನಡೆಯಿತು.
ಮಲೆನಾಡು ಜನ ಹಿತ ರಕ್ಷಣಾ ವೇದಿಕೆ ಸಂಚಾಲಕ ಕಿಶೋರ್ ಕುಮಾರ್ ಶಿರಾಡಿ ಮಾತನಾಡಿ 2011ರಿಂದ ಮಲೆನಾಡು ಜನ ಹಿತರಕ್ಷಣಾ ವೇದಿಕೆಯು ಪರಿಸರ ಸಂರಕ್ಷಣೆಯ ನೆಪದಲ್ಲಿ ರೈತರಿಗೆ ಸಮಸ್ಯೆ ಆಗುವ ಯೋಜನೆಗಳ ವಿರುದ್ಧ ನಿರಂತರ ಹೋರಾಟ ಮಾಡಿಕೊಂಡು ಬಂದಿದೆ. ಕಸ್ತೂರಿ ರಂಗನ್ ವರದಿ ವಿರುದ್ಧದ ಹೋರಾಟವನ್ನು ಮಲೆನಾಡು ಜನಹಿತ ರಕ್ಷಣಾ ವೇದಿಕೆ ಕೈಗೆತ್ತಿಕೊಂಡಿದೆ. ವೇದಿಕೆ ಜನಹಿತದ ಸದುದ್ದೇಶದಿಂದ ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತವಾಗಿದ್ದು, ಜಾತ್ಯಾತೀತ, ಪಕ್ಷಾತೀತ ಮತ್ತು ವಿಷಯಾಧಾರಿತ ಹಾಗೂ ಕಾನೂನಾತ್ಮಕ ನಿಲುವು ಹೊಂದಿದೆ. ವೇದಿಕೆಯಲ್ಲಿ ಎಲ್ಲಾ ಧರ್ಮ ಮತ್ತು ವಿವಿಧ ಪಕ್ಷಗಳ ಪ್ರಮುಖರು, ಸದಸ್ಯರಿದ್ದು ಪರಸ್ಪರ ನಿಂಧನೆ, ಟೀಕೆ, ಅವಹೇಳನಕ್ಕೆ ಅವಕಾಶ ನೀಡುವುದಿಲ್ಲ. ವೇದಿಕೆ ಸದಸ್ಯರು ಮತ್ತು ನಾಗರಿಕರು ಕೂಡಾ ಪ್ರತಿಯೊಬ್ಬ ಸದಸ್ಯರ ವ್ಯಕ್ತಿ ಗೌರವಕ್ಕೆ ಚ್ಯುತಿಬಾರದಂತೆ ಮತ್ತು ಹೋರಾಟದ ಸ್ವರೂಪಕ್ಕೂ ಧಕ್ಕೆ ಬಾರದಂತೆ ಕಾಪಾಡಿಕೊಳ್ಳುವುದು ವೇದಿಕೆಗೂ ಮತ್ತು ಸಮಾಜಕ್ಕೂ ನೀಡುವ ಗೌರವ ಮತ್ತು ಅದನ್ನು ಪ್ರತಿಯೋರ್ವರೂ ಪಾಲಿಸಬೇಕು. ಈ ನಿಟ್ಟಿನಲ್ಲಿ ವಿಷಯಾಧಾರಿತ ಹೋರಾಟದಲ್ಲಿ ಗೆಲುವು ಸಾಧಿಸೋಣ. ಕಸ್ತೂರಿ ರಂಗನ್ ನ ಬಗ್ಗೆ ಜನರಿಗೆ ವಿಸ್ತರವಾಗಿ ತಿಳಿಸುವ ಉದ್ದೇಶದಿಂದ ಹಾಗೂ ಅದರ ಸಾಧಕ ಬಾಧಕಗಳ ಬಗ್ಗೆ ಮುಂದಿನ ದಿನಗಳಲ್ಲಿ ಪತ್ರಿಕಾ ಗೋಷ್ಠಿಯನ್ನು ನಡೆಸಲಿದೆ ಎಂದರು.
ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷ ಕೊರಗಪ್ಪ ನಾಯ್ಕ್, ತಾಲೂಕು ಪಂಚಾಯತ್ ಸದಸ್ಯ ಕೊರಗಪ್ಪ ಗೌಡ, ಜಿಲ್ಲಾ ಪಂಚಾಯತ್ ಸದಸ್ಯ ಬಾಬು ಗೌಡ,ನಾವೂರ ಗ್ರಾ.ಪಂ. ಮಾಜಿ ಅಧ್ಯಕ್ಷ ಗಣೇಶ್ ನಾವೂರ, ಪ್ರಮೋದ್ ದಿಡುಪೆ, ಸುಂದರ್ ಹೆಗ್ಡೆ ಹಾಗೂ ಎಲ್ಲಾ ಗ್ರಾಮದ ಎರಡು ಪ್ರಮುಖರು ಉಪಸ್ಥಿತರಿದ್ದರು.
ಕರುಣಾಕರ ಶಿಶಿಲ ಸ್ವಾಗತಿಸಿ, ನವೀನ್ ರೆಖ್ಯ ವಂದಿಸಿದರು.