ಗುರುವಾಯನಕೆರೆ: ಬೆಳ್ತಂಗಡಿ ತಾಲೂಕು ಮೂಲ್ಯರ ಯಾನೆ ಕುಂಬಾರರ ಸೇವಾ ಸಂಘ ಇದರ ವಾರ್ಷಿಕ ಮಹಾಸಭೆಯು ಸಂಘದ ಅಧ್ಯಕ್ಷ ಹರೀಶ್ ಕಾರಿಂಜ ಇವರ ಅದ್ಯಕ್ಷತೆಯಲ್ಲಿ ಇತ್ತೀಚೆಗೆ ಕುಲಾಲ ಮಂದಿರದಲ್ಲಿ ನಡೆಯಿತು.
ಸಂಘದ ಕಾರ್ಯದರ್ಶಿ ಯತೀಶ್ ಸಿರಿಮಜಲ್ 2023-24 ರ ವರದಿ ಮತ್ತು ಜಮಾ ಖರ್ಚುಗಳನ್ನು ಸಭೆಗೆ ಓದಿ ಮಂಜೂರು ಮಾಡಲಾಯಿತು. ಕುಲಾಲ ಸಮಾಜದ ಸಮುದಾಯ ಭವನಕ್ಕಾಗಿ ಸಮಾಜ ಬಾಂಧವರಿಂದ ದೇಣಿಗೆಯಾಗಿ ಮತ್ತು ಬ್ಯಾಂಕ್ ಸಾಲ ಪಡೆದು ನೂತನ 37 ಸೆಂಟ್ಸ್ ನಿವೇಶನ ಖರೀದಿ ಮಾಡಿದ ಸಾಲವನ್ನು ಕಟ್ಟಲು ತುಂಬಾ ತೊಂದರೆಯಾಗುತ್ತಿದೆ ಎಂಬ ವಿಷಯವನ್ನು ಸಭೆಯಲ್ಲಿ ಚರ್ಚಿಸಲಾಯಿತು. ಸಮುದಾಯ ಭವನವನ್ನು ಶಾಸಕರು ಈಗಾಗಲೇ ಮಂಜೂರು ಮಾಡುವುದಾಗಿ ಹಲವಾರು ಬಾರಿ ಹೇಳಿದರೂ, ಇನ್ನೂ ನಿರ್ಮಾಣ ಕೆಲಸ ಪ್ರಾರಂಭ ಆಗದೆ ಇರುವುದು ಎಲ್ಲರ ಚಿಂತೆಗೆ ಕಾರಣವಾಯಿತು. ಆದ್ದರಿಂದ ಮತ್ತೊಮ್ಮೆ ಶಾಸಕರನ್ನು ಭೇಟಿ ಮಾಡಿ ಚರ್ಚೆ ಮಾಡುವ ಬಗ್ಗೆ ನಿರ್ಣಯ ತೆಗೆದುಕೊಳ್ಳಲಾಯಿತು. ಈಗ ಇರುವ ಕುಲಾಲ ಮಂದಿರದ ಶೌಚಾಲಯ ಮತ್ತು ಸಭಾಂಗಣಕ್ಕೆ ಟೈಲ್ಸ್ ಅಳವಡಿಸಿ ನವೀಕರಣ ಮಾಡುತ್ತಿರುವುದಕ್ಕೆ ಎಲ್ಲರು ಮೆಚ್ಚುಗೆ ವ್ಯಕ್ತಪಡಿಸಿದರು. ನೂತನ ನಿವೇಶನದ ಸಾಲ ಮರುಪಾವತಿ ಮಾಡಲು ಮನೆ ಮನೆ ಭೇಟಿ ಮಾಡಿ ಹಣ ಸಂಗ್ರಹಣೆ ಮಾಡಬೇಕು ಎಂಬ ಅಭಿಪ್ರಾಯವನ್ನು ಸಭೆಯಲ್ಲಿ ತೀರ್ಮಾನಿಸಲಾಯಿತು.
ಮಹಾಸಭೆಯಲ್ಲಿ ಎಂಡೋ ಸಂತ್ರಸ್ತರಿಗಾಗಿ ಉಜಿರೆಯಲ್ಲಿರುವ ಸಾನಿಧ್ಯ ಕೌಶಲ್ಯ ತರಬೇತಿ ಕೇಂದ್ರದ ಮುಖ್ಯಸ್ಥೆ ಮತ್ತು ಮನಃಶಾಸ್ತ್ರಜ್ಞೆಯಾಗಿ ಅನನ್ಯ ಸೇವೆ ಸಲ್ಲಿಸುತ್ತಿರುವ ಕುವೆಟ್ಟು ಗ್ರಾಮದ ಕೊಂಟುಪಲ್ಕೆಯ ಶ್ರೀಮತಿ ಮಲ್ಲಿಕಾ ಎಸ್ ಮತ್ತು ಕುವೆಟ್ಟು ಗ್ರಾಮದ ಕೆರೆಮೂಲೆ ಎಂಬಲ್ಲಿಯ ಕುಮಾರಿ ಭೂಮಿಕ ಇವರು ಇಂಡೋ – ನೇಪಾಳ ಅಂತರರಾಷ್ಟ್ರೀಯ ಆಹ್ವಾನಿತ ಮಹಿಳೆಯರ ತ್ರೋಬಾಲ್ ಚಾಂಪಿಯನ್ಶಿಪ್ – 2024ರಲ್ಲಿ ಭಾರತವನ್ನು ಪ್ರತಿನಿಧಿಸಿದ ಕ್ರೀಡಾ ಪ್ರತಿಭೆಯನ್ನು ಸನ್ಮಾನಿಸಿ ಗೌರವಿಸಲಾಯಿತು.
ಮಾಸ್ಟರ್ ಅನಘಾ ಜೆ ಎಸ್ ಪ್ರಾರ್ಥಿಸಿ, ಸಂಘದ ಕಾರ್ಯದರ್ಶಿ ಯತೀಶ್ ಸಿರಿಮಜಲ್ ಸ್ವಾಗತಿಸಿದರು. ನಿರ್ದೇಶಕರಾದ ಜಗನ್ನಾಥ್ ಕುಲಾಲ್ ಮತ್ತು ಮೋಹನ್ ಬಂಗೇರ ಕಾರಿಂಜ ಕಾರ್ಯಕ್ರಮ ನಿರೂಪಿಸಿದರು. ಸಂಘದ ಉಪಾಧ್ಯಕ್ಷರಾದ ಹೆಚ್ ಪದ್ಮಕುಮಾರ್ ವಂದಿಸಿದರು.