ಬೆಳ್ತಂಗಡಿ: ಸರಕಾರಿ ಶಾಲೆಗಳಲ್ಲಿ ವಿದ್ಯಾಭ್ಯಾಸ ಪಡೆಯುತ್ತಿರುವ ಬಡ ಮಕ್ಕಳ ಆರೋಗ್ಯ , ನೈರ್ಮಲ್ಯ , ಮತ್ತು ಹಕ್ಕು ಸಂರಕ್ಷಣೆಯ ಹಿತದೃಷ್ಟಿಯಿಂದ ದಕ್ಷಿಣಕನ್ನಡ ಜಿಲ್ಲಾ ವ್ಯಾಪ್ತಿಯ ಎಲ್ಲಾ ಸರಕಾರಿ ಕಿರಿಯ ಮತ್ತು ಹಿರಿಯ ಪ್ರಾಥಮಿಕ ಶಾಲೆಗಳ ಶೌಚಾಲಯಗಳನ್ನು ಸ್ವಯಂ ಪ್ರೇರಿತ ಶ್ರಮದಾನದ ಮೂಲಕ ಶುಚಿತ್ವ ಮತ್ತು ದುರಸ್ತಿಗೊಳಿಸಿ ನವೀಕರಿಸಿ ಸ್ವಚ್ಛಾಲಯಗಳನ್ನಾಗಿ ಪರಿವರ್ತಿಸುವ ವಿನೂತನ ಪರಿಕಲ್ಪನೆಯೊಂದಿಗೆ ರಾಜಕೇಸರಿ ಟ್ರಸ್ಟ್ ವತಿಯಿಂದ ಸ್ವಚ್ಚಾಲಯ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ. ದಕ್ಷಿಣ ಕನ್ನಡ ಜಿಲ್ಲಾ ವ್ಯಾಪ್ತಿಯ ಸರಿಸುಮಾರು 1000ಕ್ಕೂ ಹೆಚ್ಚಿನ ಎಲ್ಲಾ ಸರಕಾರಿ ಪ್ರಾಥಮಿಕ ಶಾಲೆಗಳ ಶೌಚಾಲಯಗಳನ್ನು “ಸ್ವಚ್ಛಾಲಯ”ಗಳನ್ನಾಗಿ ಪರಿವರ್ತಿಸುವ ಮೂಲಕ ಬಡಮಕ್ಕಳಿಗೆ ಉತ್ತಮ ವ್ಯವಸ್ಥೆ ಕಲ್ಪಿಸಲು ನೆರವಾಗುವುದು ಈ ಅಭಿಯಾನದ ಸದುದ್ದೇಶ.
ಇದೀಗ ಬಂಟ್ವಾಳ ತಾಲೂಕಿನಲ್ಲೂ ಈ ಅಭಿಯಾನಕ್ಕೆ ಚಾಲನೆ ನೀಡಲಾಗಿದ್ದು ಅಮ್ಟಾಡಿ ಗ್ರಾಮದ ನಾಲ್ಕೆಮಾರ್ ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯ ಪರಿವರ್ತಿತ ಸ್ವಚ್ಚಾಲಯಗಳ ಉದ್ಘಾಟನಾ ಸಮಾರಂಭವನ್ನು ನ 4 ರಂದು ಶಾಲೆಯಲ್ಲಿ ಗಣ್ಯರ ಉಪಸ್ಥಿತಿಯಲ್ಲಿ ನೆರವೇರಿಸಲಾಯಿತು.
ಕಾರ್ಯಕ್ರಮವು ರಾಜಕೇಸರಿ ಸಂಸ್ಥೆಯ ಸಂಸ್ಥಾಪಕಧ್ಯಕ್ಷ ದೀಪಕ್ ಜಿ ಬೆಳ್ತಂಗಡಿ ರವರ ಅಧ್ಯಕ್ಷತೆಯಲ್ಲಿ ನಡೆಯಿತು.
ಪುಟಾಣಿ ಮಕ್ಕಳಿಂದಲೇ ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟನಾ ಸಮಾರಂಭಕ್ಕೆ ಚಾಲನೆ ನೀಡಲಾಯಿತು.
ರಾಜಕೇಸರಿ ಟ್ರಸ್ಟ್ ನ ಜಿಲ್ಲಾಧ್ಯಕ್ಷ ಸಂತೋಷ್ ಕೊಲ್ಯ ರವರು ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಚ್ಛಾಲಯ ಅಭಿಯಾನದ ಸದುದ್ದೇಶ ಮತ್ತು ಕಾರ್ಯಯೋಜನೆಯ ಬಗ್ಗೆ ಮಾಹಿತಿ ನೀಡಿದರು.
ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ್ ನಾಯಕ್ ಇಂದಾಜೆಯವರು ಕಾರ್ಯಕ್ರಮವನ್ನು ಉದ್ಘಾಟಿಸಿ ಇಲ್ಲಿಯವರೆಗೆ ಯಾರೂ ಗಮನಹರಿಸದ ಉತ್ತಮ ಕಾರ್ಯಕ್ಕೆ ರಾಜ ಕೇಸರಿ ಟ್ರಸ್ಟ್ ಮುಂದಾಗಿರುವುದು ಶ್ಲಾಘನೀಯ ಮತ್ತು ಅಭಿಯಾನದ ಯಶಸ್ಸಿಗೆ ಸಂಪೂರ್ಣ ಸಹಕಾರ ನೀಡುವುದಾಗಿ ಸಂತಸ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ಮಂತ್ರದೇವತೆ ಸಾನಿಧ್ಯ ಕ್ಷೇತ್ರ ಕಟ್ಟೆಮಾರ್ ಇದರ ಧರ್ಮದರ್ಶಿ ಮನೋಜ್ ಕಟ್ಟೆಮಾರ್ ರವರು ಅಭಿಯಾನದ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿ ಇಂತಹ ಸಮಾಜಮುಖಿ ಅಭಿಯಾನಗಳು ಇತರರಿಗೂ ಪ್ರೇರಣೆಯಾಗಲಿ ಎಂದು ಹಾರೈಸಿ ಈ ಸತ್ಕಾರ್ಯದಲ್ಲಿ ನಾವೂ ರಾಜ ಕೇಸರಿಯೊಂದಿಗೆ ಕೈ ಜೋಡಿಸುವುದಾಗಿ ತಿಳಿಸಿದರು. ಬಂಟ್ವಾಳ ಪತ್ರಕರ್ತರ ಸಂಘದ ಕಾರ್ಯದರ್ಶಿ ಮೌನೇಶ್ ವಿಶ್ವಕರ್ಮರವರು ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದು ಸರಕಾರಿ ಶಾಲೆಗಳ ಉಳಿವಿಗಾಗಿ ನಾವೆಲ್ಲರೂ ಶ್ರಮಿಸಬೇಕು ಮತ್ತು ಶಾಲೆಗಳಲ್ಲಿ ಉತ್ತಮ ವ್ಯವಸ್ಥೆಗಳನ್ನು ಕಲ್ಪಿಸುವಲ್ಲಿ ಇಂತಹ ಸಮಾಜಮುಖಿ ಚಿಂತನೆಯ ಅಭಿಯಾನಗಳು ದೊಡ್ಡ ಮಟ್ಟದಲ್ಲಿ ಸಹಕಾರಿಯಾಗಲಿದೆ ಎಂದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದ ರೋಟರಿ ಕ್ಲಬ್ ಬಿ.ಸಿ ರೋಡ್ ಸಿಟಿ ಇದರ ಸ್ಥಾಪಕಧ್ಯಕ್ಷ ಸತೀಶ್ ಕುಮಾರ್ ರವರು ಬಡ ಮಕ್ಕಳ ಆರೋಗ್ಯದ ಹಿತದಷ್ಟಿಯಿಂದ ಶೌಚಾಲಯಗಳ ಶುಚಿತ್ವ ಮತ್ತು ದುರಸ್ತಿ ಕಡೆಗೆ ಗಮನಹರಿಸಿ ಯೋಜನೆ ರೂಪಿಸಿದ್ದು ಸಂಸ್ಥೆಯ ನಿಸ್ವಾರ್ಥ ಸೇವಾ ಮನೋಭಾವನೆಗೆ ಹಿಡಿದ ಕೈಗನ್ನಡಿಯಾಗಿದೆ ಎಂದು ಬಣ್ಣಿಸಿದರು. ಬಂಟ್ವಾಳ ತಾಲೂಕಿನ ಪತ್ರಕರ್ತರಾದ ಹರೀಶ್ ಮಾಂಬಾಡಿ ಮತ್ತು ವಿಜಯಕರ್ನಾಟಕ ಪತ್ರಿಕೆಯ ವರದಿಗಾರರಾದ ಯಾದವ ಅಗ್ರಬೈಲು ಮಾತನಾಡಿ ಶಾಲಾ ಮಕ್ಕಳಲ್ಲಿ ಸ್ವಚ್ಛತೆಯ ಬಗ್ಗೆ ಅರಿವು ಮೂಡಿಸಿದರು.
ಜಿಲ್ಲಾ ಸಂಚಾಲಕರಾದ ಪ್ರಸಾದ್ ಕುಲಾಲ್, ಬಂಟ್ವಾಳ ಘಟಕದ ಅಧ್ಯಕ್ಷರಾದ ಗೌತಮ್ ಪೂಜಾರಿ ನೆಲ್ಲಿಗುಡ್ಡೆ ಮತ್ತು ಬಸಬೈಲು ಘಟಕದ ಅಧ್ಯಕ್ಷರವಿರಾಜ್ ನೆಲ್ಲಿಗುಡ್ಡೆಯವರ ಕಾರ್ಯವೈಖರಿಯನ್ನು ಶಾಲೆಯ ಎಸ್.ಡಿ.ಎಂ.ಸಿ ಅಧ್ಯಕ್ಷ ವಿಜಯ ಕುಮಾರ್ ರವರು ಶ್ಲಾಘಿಸಿದರು.
ಸ್ವಚ್ಚತಾ ಶ್ರಮದಾನದಲ್ಲಿ ಪಾಲ್ಗೊಂಡ ರಾಜ ಕೇಸರಿ ಬಂಟ್ವಾಳ ಘಟಕದ ಸರ್ವ ಸದಸ್ಯರನ್ನು ಶಾಲೆಯ ವತಿಯಿಂದ ಗೌರವಪೂರ್ವಕವಾಗಿ ಸನ್ಮಾನಿಸಲಾಯಿತು.
ಶಾಲೆಯ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಜ್ಯೋತಿ ಕುಮಾರಿ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿ ಶಾಲೆಗೆ ಉತ್ತಮ ವ್ಯವಸ್ಥಿತ ಶೌಚಾಲಯವನ್ನು ಕಲ್ಪಿಸಿಕೊಟ್ಟ ರಾಜ ಕೇಸರಿ ಸಂಸ್ಥೆಯ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿ ಸಂತಸ ವ್ಯಕ್ತಪಡಿಸಿದರು. ಶ್ರಮದಾನದಲ್ಲಿ ಪಾಲ್ಗೊಂಡ ಶ್ರಮಜೀವಿ ಸ್ವಯಂ ಸೇವಕರಿಗೆ ಅಭಿನಂದನೆಗಳನ್ನು ಸಲ್ಲಿಸಿದರು.
ರಾಜ ಕೇಸರಿ ಟ್ರಸ್ಟ್ ನ ಜಿಲ್ಲಾ ಮತ್ತು ತಾಲೂಕು ಮಟ್ಟದ ಪದಾಧಿಕಾರಿಗಳು ಹಾಗೂ ಸರ್ವ ಸದಸ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಶಾಲೆಯ ಹಳೇ ವಿದ್ಯಾರ್ಥಿ ಸಂಘ ಮತ್ತು ಶಿಕ್ಷಕ ಪೋಷಕರ ಸಂಘದ ಪದಾಧಿಕಾರಿಗಳು, ಸದಸ್ಯರು,ಶಿಕ್ಷಕ ವೃಂದದವರು ಮತ್ತು ಶಾಲೆಯ ಮಕ್ಕಳು ಉಪಸ್ಥಿತರಿದ್ದರು. ಶೇಖರ್ ಕುಲಾಲ್ ನೆಲ್ಲಿಗುಡ್ಡೆ ಸ್ವಾಗತಿಸಿದರು. ಜಗನ್ನಾಥ.ಎ ಕಾರ್ಯಕ್ರಮವನ್ನು ನಿರೂಪಿಸಿದರು.