ಕನ್ನಡ ರಥ ಯಾತ್ರೆಗೆ ಬೆಳ್ತಂಗಡಿ ತಾಲೂಕಿಗೆ ಆದ್ದೂರಿಯ ಸ್ವಾಗತ: ಮುಖ್ಯ ರಸ್ತೆಯ ಮೂಲಕ ಮೆರವಣಿಗೆ- ಬಸ್‌ನಿಲ್ದಾಣದಲ್ಲಿ ಕನ್ನಡ ಮಾತೆಗೆ ಪುಷ್ಪಾರ್ಜನೆ

Suddi Udaya

ಬೆಳ್ತಂಗಡಿ : 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಮಂಡ್ಯದಲ್ಲಿ ಡಿ. 20ರಿಂದ ನಡೆಯಲಿದ್ದು, ಸಾಹಿತ್ಯ ಸಮ್ಮೇಳನದಲ್ಲಿ ಭಾಗವಹಿಸಲು ಅರಿವು ಮೂಡಿಸುವ ದೃಷ್ಟಿಯಿಂದ ರಾಜ್ಯಾದ್ಯಂತ ಸಂಚರಿಸುತ್ತಿರುವ ಕನ್ನಡ ಜ್ಯೋತಿ ಹೊತ್ತ ಕನ್ನಡ ರಥಯಾತ್ರೆ ನ.೮ರಂದು ಬೆಳ್ತಂಗಡಿ ತಾಲೂಕಿಗೆ ಆಗಮಿಸಿದಾಗ ಕನ್ನಡ ಸಾಹಿತ್ಯ ಪರಿಷತ್ ಬೆಳ್ತಂಗಡಿ ಘಟಕದ ನೇತೃತ್ವದಲ್ಲಿ ಭವ್ಯವಾಗಿ ಸ್ವಾಗತಿಸಲಾಯಿತು.

ಬೆಳ್ತಂಗಡಿ ಶ್ರೀ ಅಯ್ಯಪ್ಪ ಮಂದಿರದ ಬಳಿಯಿಂದ ಬಸ್‌ನಿಲ್ದಾಣದವರಗೆ ರಥವನ್ನು ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಡಾ. ಎಂ.ಪಿ ಶ್ರೀನಾಥ್ ಹಾಗೂ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಹಾಗೂ ವಾಣಿ ಕಾಲೇಜಿನ ಪ್ರಾಚಾರ್ಯ ಡಿ. ಯದುಪತಿ ಗೌಡ ಅವರ ನೇತೃತ್ವದಲ್ಲಿ ಘಟಕದ ಪದಾಧಿಕಾರಿಗಳು, ಕನ್ನಡ ಅಭಿಮಾನಿಗಳು, ಶಾಲಾ ಶಿಕ್ಷಕರು, ವಿದ್ಯಾರ್ಥಿಗಳು, ವಿವಿಧ ಇಲಾಖೆಗಳ ಅಧಿಕಾರಿ ಸಿಬಂದಿಗಳು ಮೆರವಣಿಗೆ ಮೂಲಕ ಬಸ್‌ನಿಲ್ದಾಣದವರೆಗೆ ಕರೆತರಲಾಯಿತು.

ಬಸ್‌ನಿಲ್ದಾಣದ ಬಳಿ ತೆಂಗಿನ ಕಾಯಿ ಒಡೆದು, ಕನ್ನಡ ಮಾತೆಗೆ ಹೂ ಹಾರವನ್ನು ಹಾಗೂ ಪುಷ್ಪಾರ್ಜನೆಯನ್ನು ತಾಲೂಕು ತಹಶೀಲ್ದಾರ್ ಪೃಥ್ವಿಸಾನಿಕಂ ನೆರವೇರಿಸಿದರು. ಜಿಲ್ಲಾ ಅಧ್ಯಕ್ಷ ಡಾ. ಎಂ.ಪಿ ಶ್ರೀನಾಥ್ ಮಾತನಾಡಿ, ಕನ್ನಡ ರಥಯಾತ್ರೆಯ ಉದ್ದೇಶಗಳ ಬಗ್ಗೆ ತಿಳಿಸಿದರು. ನಿವೃತ್ತ ಪ್ರಾಂಶುಪಾಲ ಹಾಗೂ ಇತ್ತಿಚೇಗೆ ನಡೆದ ಬೆಳ್ತಂಗಡಿ ತಾಲೂಕು ಮಟ್ಟದ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷತೆ ವಹಿಸಿದ್ದ ಎ. ಕೃಷ್ಣಪ್ಪ ಪೂಜಾರಿ ಅವರು ಕನ್ನಡ, ಭಾಷೆ, ನಾಡು ನುಡಿಯ ಸಂರಕ್ಷಣೆಗೆ ಮಾತನಾಡಿದರು.
ತಾಲೂಕು ಘಟಕದ ಅಧ್ಯಕ್ಷ ಡಿ.ಯದುಪತಿ ಗೌಡ ಸ್ವಾಗತಿಸಿ, ಪ್ರಸ್ತಾವಿಕವಾಗಿ ಮಾತನಾಡಿದರು.

ಕಾರ್ಯಕ್ರಮದಲ್ಲಿ ಗೃಹರಕ್ಷಕ ದಳ ತಾಲೂಕು ಘಟಕಾಧಿಕಾರಿ ಜಿಲ್ಲಾ ರಾಜೋತ್ಸವ ಪುರಸ್ಕೃತ ಜಯಾನಂದ ಲಾಯಿಲ, ತಾ.ಪಂ ವ್ಯವಸ್ಥಾಪಕ ಪ್ರಶಾಂತ್ ಡಿ.ಬಳಂಜ, ನ.ಪಂ ಮುಖ್ಯಾಧಿಕಾರಿ ರಾಜೇಶ್, ಕಂದಾಯ ನಿರೀಕ್ಷ ಪ್ರತೀಶ್, ಪಾವಡಪ್ಪ, ಸಮಾಜ ಕಲ್ಯಾಣ ಇಲಾಖೆಯ ವ್ಯವಸ್ಥಾಪಕ ಧನಂಜಯ, ನ.ಪಂ ಹಿರಿಯ ಸದಸ್ಯ ಜಗದೀಶ್ ಡಿ., ಶಿಕ್ಷಕ ವೃಂದ, ವಿದ್ಯಾರ್ಥಿಗಳು, ಸಾರ್ವಜನಿಕರು ಉಪಸ್ಥಿತರಿದ್ದರು.
ಇಂದು ರಥ ಬೆಳ್ತಂಗಡಿ ಪ್ರವಾಸಿ ಮಂದಿರದಲ್ಲಿ ತಂಗಲಿದ್ದು, ನಾಳೆ ನ.9ರಂದು ಬೆಳಿಗ್ಗೆ 8.30 ಗಂಟೆಗೆ ಬೆಳ್ತಂಗಡಿ, ಬೆಳಿಗ್ಗೆ 9ಗಂಟೆಗೆ ಉಜಿರೆ, ಬೆಳಿಗ್ಗೆ 10 ಧರ್ಮಸ್ಥಳ ಮೂಲಕ ಕಡಬಕ್ಕೆ ತೆರಳಿದೆ.

Leave a Comment

error: Content is protected !!