ಉಜಿರೆ: ರೋಟರಿ ಇಂಟರಾಕ್ಟ್ ಜಿಲ್ಲೆ 3181 ನ ಇಂಟರಾಕ್ಟ್ ಜಿಲ್ಲಾ ಸಮ್ಮೇಳನ – ಯೂತ್ ಕಾರ್ನಿವಾಲ್ 2024 ಉಜಿರೆಯ ಎಸ್.ಡಿ.ಎಂ ಕಾಲೇಜಿನ ಇಂದ್ರಪ್ರಸ್ಥ ಸಭಾಂಗಣದಲ್ಲಿ ನ. 16 ಮತ್ತು 17 ರಂದು ನಡೆಯಲಿದೆ ಎಂದು ಬೆಳ್ತಂಗಡಿ ರೋಟರಿ ಕ್ಲಬ್ ಅಧ್ಯಕ್ಷ ಪೂರನ್ ವರ್ಮ ತಿಳಿಸಿದ್ದಾರೆ.
ಬೆಳ್ತಂಗಡಿಯ ರೋಟರಿ ಕ್ಲಬ್ ಆಯೋಜಿಸಿರುವ ಈ ಯೂತ್ ಕಾರ್ನಿವಾಲ್-ನಲ್ಲಿ ಮೈಸೂರು, ಚಾಮರಾಜನಗರ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ 8,9 ಹಾಗೂ 10ನೇ ತರಗತಿಯ ಸುಮಾರು 600 ಕ್ಕೂ ಅಧಿಕ ವಿದ್ಯಾರ್ಥಿಗಳು ಭಾಗವಹಿಸಲಿದ್ದಾರೆ. ನವೆಂಬರ್ 17 ರಂದು ಬೆಳಗ್ಗೆ 9 ಗಂಟೆಗೆ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ಯೂತ್ ಕಾರ್ನಿವಾಲ್ ಉದ್ಘಾಟಿಸಲಿದ್ದಾರೆ.
ರೋಟರಿ ಇಂಟರಾಕ್ಟ್ ಜಿಲ್ಲೆ 3181 ರ ಜಿಲ್ಲಾ ಗವರ್ನರ್ ಆದ ರೊ. ವಿಕ್ರಂದತ್ತ ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳಲಿದ್ದಾರೆ. ರೋಟರಿಯ ಜಿಲ್ಲೆಯ ವಿವಿಧ ಪದಾಧಿಕಾರಿಗಳೂ ಭಾಗವಹಿಸಲಿದ್ದಾರೆ.
ಯೂತ್ ಕಾರ್ನಿವಾಲ್ ಆಕರ್ಷಣೆಗಳು: ಯೂತ್ ಕಾರ್ನಿವಾಲ್ ಪ್ರಯುಕ್ತ ನವೆಂಬರ್ 16 ರ ಸಂಜೆ 5 ಗಂಟೆಯಿಂದ ವಿಷಯಾಧಾರಿತ ಸಾಂಸ್ಕೃತಿಕ ವೈವಿಧ್ಯ ಸ್ಪರ್ಧೆ ನಡೆಯಲಿದೆ. ಜೊತೆಗೆ ಹಾಡು, ರಸಪ್ರಶ್ನೆ, ಭಾಷಣ ಸ್ಪರ್ಧೆ, ಛದ್ಮವೇಷ ಹಾಗೂ ಪ್ರಬಂಧ ಬರಹ ಸ್ಪರ್ಧೆಗಳು ನಡೆಯಲಿವೆ. ಇದರ ಜೊತೆಗೆ ವ್ಯಕ್ತಿತ್ವ ವಿಕಸನ ಶಿಬಿರಗಳು, ಇಂಟರಾಕ್ಟರ್-ಗಳ ಕೌಶಲ್ಯ ಪ್ರದರ್ಶಿಸುವ ವಸ್ತುಪ್ರದರ್ಶನ ಹಾಗೂ ವೈವಿಧ್ಯಮಯ ಆಹಾರದ ವ್ಯವಸ್ಥೆಯೂ ಇರಲಿದೆ. ಅಂತೆಯೇ ಯೂತ್ ಕಾರ್ನಿವಾಲ್ ಪ್ರಯುಕ್ತ ಲಕ್ಕಿ ಗೇಮ್ಸ್, ಕರಾವಳಿಯ ಸಾಂಪ್ರದಾಯಿಕ ಆಟಗಳ ಸ್ಪರ್ಧೆ ಮೊದಲಾದ ಚಟುವಟಿಕೆಗಳನ್ನು ಕೂಡಾ ಹಮ್ಮಿಕೊಳ್ಳಲಾಗಿದೆ.
ಹೆಚ್ಚಿನ ಮಾಹಿತಿಗಾಗಿ ರೋ. ಸಂದೇಶ್ ರಾವ್ (ಮೊ: 9632133669) ಇವರನ್ನು ಸಂಪರ್ಕಿಸಲು ಕೋರಲಾಗಿದೆ.