ಉಜಿರೆ: ಎಸ್‌ಡಿಎಂ ತಾಂತ್ರಿಕ ಶಿಕ್ಷಣ ಸಂಸ್ಥೆಯ ಪ್ರಥಮ ವರ್ಷದ ಬಿಇ ವಿದ್ಯಾರ್ಥಿಗಳಿಗೆ ಸ್ವಾಗತ ಕಾರ್ಯಕ್ರಮವು ನ.20 ರಂದು ಇಂದ್ರಪ್ರಸ್ಥ ಆಡಿಟೋರಿಯಂ ನಲ್ಲಿ ನಡೆಯಿತು.
ಎಸ್ ಡಿ ಎಂ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ದೀಪ ಪ್ರಜ್ವಲನೆಯನ್ನು ನೆರವೇರಿಸಿ ಮಾತನಾಡಿ, ನೂತನವಾಗಿ ಸೇರ್ಪಡೆಗೊಂಡ ವಿದ್ಯಾರ್ಥಿಗಳು ನಿಮ್ಮ ಹಿನ್ನೆಲೆಯನ್ನು ಬಿಟ್ಟು, ಏಕ ಮನಸ್ಕರಾಗಿ, ಏಕ ಸಂಸ್ಕಾರವನ್ನು ಹೊಂದಿ, ಈ ಸಂಸ್ಥೆಗೆ ಹೊಂದಿಕೊಂಡು ಹೋಗುವಂತಹ ಅನಿವಾರ್ಯತೆ ಇದೆ. ಇಂಜಿನಿಯರಿಂಗ್ ಬಹಳ ಬೆಲೆ ಬಾಳುವಂತಹ ಕೋರ್ಸ್ ಆಗಿದ್ದು, ಕಷ್ಟ ಪಟ್ಟು ಓದುವಂತಹ ಜವಾಬ್ದಾರಿ ವಿದ್ಯಾರ್ಥಿಗಳಲ್ಲಿದೆ. ಸಂಸ್ಥೆಯಲ್ಲಿರುವಂತಹ ಪ್ರಯೋಗಾಲಯ ಹಾಗೂ ಗ್ರಂಥಾಲಯವನ್ನು ಸದುಪಯೋಗ ಪಡಿಸಿಕೊಳ್ಳುವುದರ ಮೂಲಕ ಪ್ರಾಯೋಗಿಕ ಕೌಶಲ್ಯವನ್ನು ಹಾಗೂ ಸಾಮಾನ್ಯ ಜ್ಞಾನವನ್ನು ಹೆಚ್ಚಿಸಿಕೊಳ್ಳಿ ಎಂದು ನೂತನ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.
ಪ್ರಾಂಶುಪಾಲರಾದ ಡಾ. ಅಶೋಕ್ ಕುಮಾರ್ ಟಿ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು.
ಡಾ. ವಿದ್ಯಾ ಕೆ. ಹಾಗೂ ನಿಶ್ಮಿತಾ ಎಂ. ನಿರೂಪಿಸಿದರು. ಗೌತಮಿ, ಕೀರ್ತನಾ ಪ್ರಾರ್ಥಿಸಿದರು. ಪ್ರಥಮ ವರ್ಷದ ಸಂಯೋಜಕ ಡಾ. ರವೀಶ್ ಪಡುಮಲೆ ವಂದಿಸಿದರು.