ಬೆಳ್ತಂಗಡಿ: 1999ರಲ್ಲಿ ಆರಂಭಗೊಂಡ ವಿಮುಕ್ತಿ ಸ್ವ-ಸಹಾಯ ಸಂಘಗಳ ಟ್ರಸ್ಟ್ ಲಾಯಿಲ ಇದರ ಬೆಳ್ಳಿ ಹಬ್ಬ ಕಾರ್ಯಕ್ರಮ ನ.23 ರಂದು ಶ್ರೀ ಕೃಷ್ಣಾನುಗ್ರಹ ಸಭಾಭವನ, ಉಜಿರೆಯಲ್ಲಿ ನಡೆಯಲಿದೆ ಎಂದು ಕಪುಚಿನ್ ಕೃಷಿಕಾ ಸೇವಾ ಕೇಂದ್ರದ ನಿರ್ದೇಶಕ ಫಾ. ವಿನೋದ್ ಮಸ್ಕರೇನ್ಹಸ್ ಹೇಳಿದರು.
ಅವರು ನ .21ರಂದು ಬೆಳ್ತಂಗಡಿ ಪ್ರೆಸ್ ಕ್ಲಬ್ ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಕಾರ್ಯಕ್ರಮವನ್ನು ಯು.ಟಿ. ಖಾದರ್ ಫರೀದ್ ಸಭಾಧ್ಯಕ್ಷರು, ಕರ್ನಾಟಕ ವಿಧಾನಸಭೆ ಉದ್ಘಾಟಿಸಲಿದ್ದು, ದಿನೇಶ್ ಗುಂಡೂರಾವ್ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವರು, ಕರ್ನಾಟಕ ಸರಕಾರ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವರು ಭಾಗವಹಿಸಲಿದ್ದಾರೆ.
ಅಧ್ಯಕ್ಷತೆಯನ್ನು ಶ್ರೀಮತಿ ಶಾಲಿ ಅಧ್ಯಕ್ಷರು, ವಿಮುಕ್ತಿ ಸ್ವ-ಸಹಾಯ ಸಂಘಗಳ ಟ್ರಸ್ಟ್ ವಹಿಸಲಿದ್ದಾರೆ. ವಂ. ಫಾ. ಆಲ್ವಿನ್ ಡಾಯಸ್ ಅಧ್ಯಕ್ಷರು, ಕಪುಚಿನ್ ಕೃಷಿಕ ಸೇವಾ ಕೇಂದ್ರ ಗೌರವಾಧ್ಯಕ್ಷರಾಗಿದ್ದು, ಮುಖ್ಯ ಅತಿಥಿಗಳಾಗಿ ಹರೀಶ್ ಪೂಂಜ ಶಾಸಕರು, ಬೆಳ್ತಂಗಡಿ ವಿಧಾನಸಭಾ ಕ್ಷೇತ್ರ, ಕೆ.ಹರೀಶ್ ಕುಮಾರ್ ಮಾಜಿ ಶಾಸಕರು, ಕರ್ನಾಟಕ ವಿಧಾನ ಪರಿಷತ್, ಪ್ರತಾಪ್ ಸಿಂಹ ನಾಯಕ್ ಕೆ. ಶಾಸಕರು, ಕರ್ನಾಟಕ ವಿಧಾನ ಪರಿಷತ್ , ರಕ್ಷಿತ್ ಶಿವರಾಂ, ಮುಖ್ಯಸ್ಥರು, ಬೆಸ್ಟ್ ಫೌಂಡೇಶನ್, ಶ್ರೀಮತಿ ಅಶ್ವಿನಿ ಡಿ.ಸೋಜಾ, ವಕೀಲರು, ಮೂಡಬಿದಿರೆ, ವಂ. ಫಾ. ವಿನೋದ್ ಮಸ್ಕರೇನ್ಹಸ್, ನಿರ್ದೇಶಕರು, ಸಿಕೆಎಸ್‌ಕೆ, ಶರತ್ ಕೃಷ್ಣ ಪಡುವಟ್ನಾಯ, ಅನುವಂಶಿಕ ಆಡ ಮೊಕೇಸರರು, ಶ್ರೀ ಜನಾರ್ಧನ ಸ್ವಾಮಿ ದೇವಸ್ಥಾನ, ಉಜಿರೆ ಪಾಲ್ಗೊಳ್ಳಲಿದ್ದಾರೆ.
ಕಪುಚಿನ್ ಸೇವಾ ಕೇಂದ್ರ:
ಕಪುಚಿನ್ ಗುರುಳಾದ ವಂ.ಫಾ. ಥಿಯೋಫಿಲಸ್ ಪಿರೇರಾರವರ ಕನಸಿನ ಕೂಸಾಗಿ ಕಲ್ಮಂಜ ಗ್ರಾಮದ ದಯಾಳ್‌ಬಾಗ್‌ನಲ್ಲಿ 1969ರಲ್ಲಿ ಜನ್ಮ ತಾಳಿತ್ತು. ಭೂಮಿಯನ್ನು ಕೃಷಿ ಭೂಮಿಯನ್ನಾಗಿ ಪರಿವರ್ತಿಸಿದ ಹಸಿರು ಕ್ರಾಂತಿಯ ಸರದಾರ ಫಾ. ಥಿಯೋಫಿಲಸ್ ರವರು ಬೆಳ್ತಂಗಡಿ ತಾಲೂಕಿನ ಗ್ರಾಮೀಣ ಜನತೆಯ ಅಭಿವೃದ್ಧಿಯಲ್ಲಿ ನೀಡಿದ ಸೇವೆ ಅತ್ಯಮೂಲ್ಯವಾದುದು.
ದಯಾಳ್‌ಬಾಗ್ ಗ್ರಾಮಾಭಿವೃದ್ಧಿ ಯೋಜನೆಯಡಿ ಗ್ರಾಮೀಣ ಮಹಿಳೆಯರ ಸಮಸ್ಯೆಗಳಿಗೆ ಆಶೋತ್ತರವಾಗಿ ೧೯೯೯ರಲ್ಲಿ ವಿಮುಕ್ತಿ ಸ್ವ- ಸಹಾಯ ಸಂಘಗಳ ರಚನೆಯ ಮೂಲಕ ದಿ.ವಂ.ಫಾ.ಜೋಯೆಲ್ ಪಿಂಟೊರವರು ಸಮಾಜ ಸೇವೆಯ ಹೊಸ ಅಧ್ಯಾಯಕ್ಕೆ ತಳಹದಿ ಹಾಕಿದರು. ಸಮಾಜದಲ್ಲಿ ಹಿಂದುಳಿದ ಮತ್ತು ಅವಕಾಶಗಳಿಂದ ವಂಚಿತರಾದ ಬಡ ಜನರಿಗೋಸ್ಕರ ಸಮಗ್ರ ಅಭಿವೃದ್ಧಿ, ಸಾಮಾಜಿಕ ಸಶಕ್ತತೆ, ಆರ್ಥಿಕ ಸ್ವಾವಲಂಬನೆ, ಜನಪರ ಸಂಘಟನೆ ಮತ್ತು ಇತರ ಯೋಜನೆಗಳನ್ನು ಹಮ್ಮಿಕೊಂಡು, ಮಹಿಳೆಯರಲ್ಲಿ ಆರ್ಥಿಕ ಸಬಲೀಕರಣ, ಉಳಿತಾಯದ ಬಗ್ಗೆ ಜಾಗೃತಿ, ವ್ಯಕ್ತಿತ್ವ ವಿಕಸನ, ಸ್ವ-ಉದ್ಯೋಗ ಕುಟುಂಬದ ಸರ್ವತೋಮುಖ ಅಭಿವೃದ್ಧಿಗೆ ಪೂರಕವಾಗಿ ಬೆಳ್ತಂಗಡಿ, ಬಣಕಲ್, ಚಿಕ್ಕೋಡಿಯಲ್ಲಿ ವಿಮುಕ್ತಿ ಸ್ವ-ಸಹಾಯ ಸಂಘಗಳು ಅಸ್ಥಿತ್ವಕ್ಕೆ ಬಂದವು ಎಂದು ವಿನೋದ್ ಮಸ್ಕರೇನ್ಹಸ್ ತಿಳಿಸಿದರು.
ವಿಮುಕ್ತಿ ಮಹಿಳಾ ಒಕ್ಕೂಟ:
999ರಲ್ಲಿ ವಿಮುಕ್ತಿ ಸ್ವ-ಸಹಾಯ ಸಂಘಗಳು ಆರಂಭಗೊಂಡಿದ್ದು, ಪ್ರಸ್ತುತ ಬೆಳ್ತಂಗಡಿ ತಾಲೂಕಿನಲ್ಲಿ 200 ಸ್ವ-ಸಹಾಯ ಸಂಘಗಳಿದ್ದು 32 ಘಟಕಗಳಿವೆ. ಒಕ್ಕೂಟದ ವತಿಯಿಂದ ಸ್ವ- ದ್ಯೋಗಗಳ ಕ್ಷೇತ್ರಗಳಲ್ಲಿ ಮಹಿಳೆಯರಿಗೆ ಮಾಹಿತಿ, ತರಬೇತಿ, ಧನ ಸಹಾಯ ಹಾಗೂ ಸಾಲ ಸೌ ಲಭ್ಯಗಳನ್ನು ಒದಗಿಸಿ ಅವರು ಸ್ವ-ಉದ್ಯೋಗವನ್ನು ಕೈಗೊಳ್ಳುವಂತೆ ಪ್ರೇರೇಪಿಸುತ್ತಿದೆ. ಇಂದು ಅನೇಕ ಮಹಿಳೆಯರು ಕುಟುಂಬದ ಸಹಕಾರದೊಂದಿಗೆ ಸಮಾಜದಲ್ಲಿ ಸ್ವಾವಲಂಭಿಗಳಾಗಿ ಬದುಕಿ ಇತರರಿಗೂ ಮಾದರಿಯಾಗಿದ್ದಾರೆ. ಅನೇಕ ಮಹಿಳೆಯರು ತಮ್ಮ ಮಕ್ಕಳ ವಿಧ್ಯಾಭ್ಯಾಸಕ್ಕಾಗಿ, ಮನೆ-ನಿರ್ಮಾಣ, ಕೃಷಿ ಯಂತ್ರೋಪಕರಣಗಳ ಖರೀದಿ ಮುಂತಾದ ಹಲವಾದ ಬಳಕೆಗಳಿಗಾಗಿಯೂ ಸಾಲ ಸೌಲಭ್ಯವನ್ನು ಪಡೆದುಕೊಂಡಿರುತ್ತಾರೆ. ಮಹಿಳೆಯರು, ತಮ್ಮ ಕುಟುಂಬ ಆರೋಗ್ಯವನ್ನು ಕಾಪಾಡುವ ನಿಟ್ಟಿನಲ್ಲಿ ಕಳೆದ ಹದಿನೇಳು ವರ್ಷಗಳಿಂದ ಆರೋಗ್ಯ ವಿಮಾ ಸೌಲಭ್ಯವನ ಒದಗಿಸಲಾಗುತ್ತಿದ್ದು, ಪ್ರತೀ ವರ್ಷವೂ ಅವರು ವಿಮೆಯ ಸೌಲಭ್ಯವನ್ನು ಪಡೆದುಕೊಳ್ಳುತ್ತಿದ್ದಾರೆ.
ಮಹಿಳೆಯರ ಮಕ್ಕಳ ಉನ್ನತ ವಿದ್ಯಾಭ್ಯಾಸಕ್ಕೆ ಪ್ರೋತ್ಸಾಹ ಧನವನ್ನೂ ನೀಡಲಾಗಿದೆ. ಹಲವಾರು ಮಹಿಳೆಯರಿಗೆ ವೃತ್ತಿ ಹಾಗೂ ಸ್ವ-ಉದ್ಯೋಗ ತರಬೇತಿಗಳನ್ನು ನೀಡಲಾಗಿದೆ. ಸ್ವ-ಸಹಾಯ ಗುಂಪುಗಳನ್ನು ರಚಿಸಿ, ಮಹಿಳೆ ಸ್ವಾವಲಂಬಿಗಳಾಗಲು ಅನೇಕ ತರಬೇತಿಗಳೊಂದಿಗೆ ಸ್ವ-ಉದ್ಯೋಗಕ್ಕೆ ಸಹಾಯಹಸ್ತವನ್ನು ನೀಡಲಾಗಿದೆ ಎಂದು ಹೇಳಿದರು.
ಇದೇ ಅಲ್ಲದೇ ಸಂಸ್ಥೆಯು ಸ್ವ-ಸಹಾಯ ಸಂಘದ ಮಹಿಳೆಯರ ಮಕ್ಕಳ ಉನ್ನತ ವಿದ್ಯಾಭ್ಯಾಸಕ್ಕಾಗಿ, “ವಿದ್ಯಾಸ್ನೇಹಿ” ಎಂಬ ಯೋಜನೆಯಿಂದ 2020ರಿಂದ 2024ರ ವರೆಗೆ 176 ಯುವಕ ಯುವತಿಯರಿಗೆ ಬಡ್ಡಿರಹಿತ ಶಿಕ್ಷಣ ಸಾಲವನ್ನು ಒದಗಿಸಿ ಕುಟುಂಬದ ಆರ್ಥಿಕ ಹೊರೆಯನ್ನು ಕಡಿಮೆಗೊಳಿಸಿದೆ. ವಿಮುಕ್ತಿ ಸಂಸ್ಥೆಯು ನಡೆಸುವ ಗುಣಮಟ್ಟದ ಕಾರ್ಯಕ್ರಮಗಳಾದ, ಗ್ರಾಮೀಣ ಪ್ರದೇಶದ ಜನತೆಗೆ ಆದ್ಯತೆ ಮತ್ತು ಗಮನ, ಮಹಿಳೆಯರ ಸಾಮರ್ಥ್ಯವನ್ನು ಗುರುತಿಸಿ ಪ್ರೋತ್ಸಾಹಿಸುವುದು, ಮಕ್ಕಳ ಯುವಕರ ಬಗ್ಗೆ ವಿಶೇಷ ಕಾಳಜಿ ಇವುಗಳಿಂದ ಬೆಳ್ತಂಗಡಿ ತಾಲೂಕಿನಲ್ಲಿ ತನ್ನನ್ನು ಗುರುತಿಸಿಕೊಂಡಿದ್ದು, ಸಾವಿರಾರು ಬಡ ಜನರು ತಮ್ಮ ಕಷ್ಟ-ಸಂಕಷ್ಟಗಳಿಂದ ಹೊರಬಂದು ನೆಮ್ಮದಿಯ ಬದುಕನ್ನು ಸಾಗಿಸುತ್ತಿದ್ದಾರೆ ಎಂದು ವಿವರಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಟ್ರಸ್ಟ್‌ನ ಅಧ್ಯಕ್ಷೆ ಶ್ರೀಮತಿ ಶಾಲಿ, ಕಾರ್ಯದರ್ಶಿ ರೈನಾ ಲೋಬೋ, ಉಪಾಧ್ಯಕ್ಷೆ ಶಶಿಕಲಾ, ಜೊತೆ ಕಾರ್ಯದರ್ಶಿ ಪ್ರಮೀಳಾ ಉಪಸ್ಥಿತರಿದ್ದರು.