ಕೊಕ್ಕಡ: ಬೆಳ್ತಂಗಡಿ ತಾಲೂಕು ಕೊಕ್ಕಡ ಗ್ರಾಮದ ಸೌತಡ್ಕ ಶ್ರೀ ಮಹಾಗಣಪತಿ ದೇವಸ್ಥಾನದ ಉಪಯೋಗಕ್ಕಾಗಿ ಖರೀದಿಸಿದ್ದ ಸ್ಥಿರಾಸ್ತಿಗಳನ್ನು ಖಾಸಗಿ ಟ್ರಸ್ಟ್ ಗೆ ಅಕ್ರಮ ಹಸ್ತಾಂತರ ಮಾಡಿ ಅವ್ಯವಹಾರ ಮಾಡಿರುವ ಬಗ್ಗೆ ಶ್ರೀ ಕ್ಷೇತ್ರ ಸೌತಡ್ಕ ಮಹಾಗಣಪತಿ ದೇವಸ್ಥಾನ ಸಂರಕ್ಷಣಾ ವೇದಿಕೆ ಕೊಕ್ಕಡ ಅವರು ನೀಡಿದ ದೂರಿನ ಮೇರೆಗೆ ಸೂಕ್ತ ತನಿಖೆ ನಡೆಸಲು ಪುತ್ತೂರು ವಿಭಾಗ ಸಹಾಯಕ ಆಯುಕ್ತರು ಆದೇಶ ನೀಡಿದ್ದಾರೆ.
ಶ್ರೀ ಕ್ಷೇತ್ರ ಸೌತಡ್ಕ ಮಹಾಗಣಪತಿ ದೇವಳದ ಸಂರಕ್ಷಣಾ ವೇದಿಕೆಯ ನೇತೃತ್ವದಲ್ಲಿ ದೇವಸ್ಥಾನಕ್ಕಾಗಿ ಖರೀದಿಸಿದ ಆಸ್ತಿ ಮತ್ತು ದೇವರ ಆದಾಯ ಅಕ್ರಮವಾಗಿ ಟ್ರಸ್ಟ್ ಪಾಲಾಗಿರುವುದನ್ನು ಹಾಗೂ ಖಾಸಗಿ ಆಗಿ ನಿರ್ಮಿಸಿದ ಟ್ರಸ್ಟ್ ಅನ್ನು ಅನ್ನೂರ್ಜಿತ ಗೊಳಿಸುವಂತೆ ಧರಣಿ ಸತ್ಯಾಗ್ರಹ ನಡೆಸಲಾಗಿತ್ತು.
ಮಂಗಳೂರಿನ ಧಾರ್ಮಿಕ ದತ್ತಿ ಇಲಾಖೆಯ ಸಹಾಯಕ ಆಯುಕ್ತರಾದ ಗೋವಿಂದ ನಾಯ್ಕ ಹಾಗೂ ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ಕೆ.ವಿ.ಶ್ರೀನಿವಾಸ್ ಹಾಗೂ ಪುತ್ತೂರು ವಿಭಾಗ ಸಹಾಯಕ ಆಯುಕ್ತ ಜುಬಿನ್ ಮೊಹಪಾತ್ರ ಅವರು ಧರಣಿನಿರತ ಸ್ಥಳಕ್ಕೆ ಆಗಮಿಸಿ ಮನವಿಯನ್ನು ಸ್ವೀಕರಿಸಿ ತನಿಖೆ ನಡೆಸುವುದಾಗಿ ಭರವಸೆಯನ್ನು ನೀಡಿದ್ದರು.
ದೇವಾಲಯದ ಆಸ್ತಿಯನ್ನು ಉಳಿಸಿ ರಕ್ಷಿಸಲು ಸೂಕ್ತ ಕ್ರಮ ಕೈಗೊಳ್ಳುವಂತೆ ಸಲ್ಲಿಸಿರುವ ಮನವಿಗೆ ಕುರಿತು ಪುತ್ತೂರು ವಿಭಾಗ ಸಹಾಯಕ ಆಯುಕ್ತರು ನಿಯಮನುಸಾರ ಪರಿಶೀಲಿಸಿ ಕಾನೂನು ಪ್ರಕಾರ ಸೂಕ್ತ ಕ್ರಮ ಕೈಗೊಂಡು ಸ್ಪಷ್ಟ ವರದಿ ನೀಡುವಂತೆ ಬೆಳ್ತಂಗಡಿ ತಹಶೀಲ್ದಾರ್, ಸೌತಡ್ಕ ಮಹಾಗಣಪತಿ ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ಹಾಗೂ ಮಂಗಳೂರು ಹಿಂದೂ ಧಾರ್ಮಿಕ ದತ್ತಿ ಇಲಾಖೆಯ ಸಹಾಯಕ ಆಯುಕ್ತರಿಗೆ ಇದೀಗ ಆದೇಶಿಸಿದ್ದಾರೆ.