ಬೆಳ್ತಂಗಡಿ: ಹೆಣ್ಣು ಮಕ್ಕಳು ಸುಶಿಕ್ಷಿತರಾದರೆ ಸಮಾಜವು ಸುಸಂಸ್ಕೃತ ಸಮಾಜವಾಗಿ ರೂಪುಗೊಳ್ಳುವುದು ಎಂಬ ನಾಣ್ಣುಡಿ ನಿಜವಾಗುವ ಸಲುವಾಗಿ 23-06-1965 ರಂದು ಮಲೆನಾಡಿನ ಬೆಳ್ತಂಗಡಿ ಪರಿಸರದಲ್ಲಿ ಹೆಣ್ಮಕ್ಕಳ ಪ್ರೌಢಶಾಲೆಯು ಆರಂಭವಾಯಿತು. ನ.22 ರಂದು ಸಂತ ತೆರೇಸಾ ಪ್ರೌಢಶಾಲೆಯಲ್ಲಿ ವಜ್ರ ಮಹೋತ್ಸವದ ಉದ್ಘಾಟನೆಯನ್ನು ಅರ್ಸುಲೈನ್ ಪ್ರಾನ್ಸಿಸ್ಕನ್ ವಿದ್ಯಾಸಂಸ್ಥೆಯ ಉಪಕಾರ್ಯದರ್ಶಿಯವರಾದ ವಂ. ಭಗಿನಿ ಜುಲಿಯಾನ ಪಾಯ್ಸ್‌ರವರು ನೆರವೇರಿಸಿ ಮುಂದಿನ ಸರ್ವ ಕಾರ್ಯಕ್ರಮಗಳಿಗೆ ಶುಭಕೋರಿದರು.
ಶಾಲಾ ಸಭಾಂಗಣದ ನವೀಕರಣದ ಉದ್ಘಾಟನೆಯನ್ನು ಕೆ ಹರೀಶ್ ಕುಮಾರ್, ಮಾಜಿ ವಿಧಾನ ಪರಿಷತ್ ಸದಸ್ಯರು ಹಾಗೂ ಅಧ್ಯಕ್ಷರು ಜಿಲ್ಲಾ ಕಾಂಗ್ರೇಸ್ ಇವರು ನೆರವೇರಿಸಿದರು.
ಕರ್ನಾಟಕ ಶಾಸಕರ ಸ್ಥಳೀಯ ಪ್ರಾದೇಶಾಭಿವೃದ್ಧಿ ಯೋಜನೆಯ ಅಡಿಯಲ್ಲಿ ರೂ.4 ಲಕ್ಷ ಶಾಲಾ ಸಭಾಂಗಣಕ್ಕೆ ಟೈಲ್ಸ್ ಅಳವಡಿಸುವ ಸಲುವಾಗಿ ಅನುದಾನ ನೀಡಿ ಸಹಕರಿಸಿದ ಅವರನ್ನು ಆಡಳಿತ ಮಂಡಳಿ ಹಾಗೂ ಶಾಲೆಯ ಪರವಾಗಿ ಸನ್ಮಾನ ಮಾಡಿ ಗೌರವಿಸಲಾಯಿತು. ಶಿಕ್ಷಣ ಸಂಸ್ಥೆಗಳು ಸೂರ್ಯ ಚಂದ್ರರಿರುವವರೆಗೆ ಇರಬೇಕು ಹಾಗೆಯೇ, ಸಂತ ತೆರೇಸಾ ಶಾಲೆ ಶಿಸ್ತು ಬದ್ಧತೆಗೆ ಹೆಸರುವಾಸಿ ಎಂದರು.
ವೇದಿಕೆಯಲ್ಲಿ ಶ್ರೀಮತಿ ಜೆಸಿಂತಾ ಮೋನಿಸ್, ಸಾಮಾಜಿಕ ಕಾರ್ಯಕರ್ತೆ, ಬೆಳ್ತಂಗಡಿ. ಸಂತ ತೆರೇಸಾ ವಿದ್ಯಾಸಂಸ್ಥೆಯ ಸಂಚಾಲಕರು ಭಗಿನಿ ತೆರೇಸಿಯಾ ಶೇರಾ, ಸಂತ ತೆರೇಸಾ ಸಂಯುಕ್ತ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರು ಭಗಿನಿ ಆರೊಗ್ಯ, ಸಂತ ತೆರೇಸಾ ರಕ್ಷಕ ಶಿಕ್ಷಕ ಸಂಘದ ಉಪಾಧ್ಯಕ್ಷ ಜಗನ್ನಾಥ್, ಸಂತ ತೆರೇಸಾ ಹಿರಿಯ ವಿದ್ಯಾರ್ಥಿ ಸಂಘದ ಉಪಾಧ್ಯಕ್ಷ ನಾರಾಯಣ ಶೆಟ್ಟಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಶಾಲಾ ಮುಖ್ಯೋಪಾಧ್ಯಾಯಿನಿ ಭಗಿನಿ ಲೀನಾ ಡಿಸೋಜರವರು ಸರ್ವರನ್ನು ಪ್ರೀತಿಯಿಂದ ಸ್ವಾಗತಿಸಿದರು. ಭಗಿನಿ ಜೆಸಿಂತಾರವರ ನೇತೃತ್ವದಲ್ಲಿ ಶಾಲಾ ವಿದ್ಯಾರ್ಥಿ ತಂಡ ಪ್ರಾರ್ಥನಾ ಗೀತೆಯನ್ನು ಹಾಡಿ ಕಾರ್ಯಕ್ರಮದ ಮೇಲೆ ದೈವಾನುಗ್ರಹವನ್ನು ಬೇಡಿದರು. ಶಿಕ್ಷಕಿ ಅಕ್ಷತಾರವರ ಮುಂದಾಳತ್ವದಲ್ಲಿ ನೃತ್ಯ ತಂಡದವರು ಸ್ವಾಗತ ನೃತ್ಯದ ಮೂಲಕ ಸ್ವಾಗತಿಸಿದರು. ಶಿಕ್ಷಕಿ ಥಿಯೋಫಿಲಾ ಶಾಲಾ ವರದಿಯನ್ನು ಮಂಡಿಸಿದರು. ಶಿಕ್ಷಕಿ ನಿಶಾ ಉದ್ಘಾಟಕರನ್ನು ಪರಿಚಯಿಸಿದರು. 2023-24ನೇ ಸಾಲಿನ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳಲ್ಲಿ ಶಾಲೆಗೆ ಪ್ರಥಮ ಹಾಗೂ ವಿಷಯವಾರು ಪ್ರಥಮ ಪಡೆದ ವಿದ್ಯಾರ್ಥಿಗಳನ್ನು ಭಗಿನಿ ಫಿಲೋಮಿನಾ ಪರಿಚಯಿಸಿ ಅವರನ್ನು ಗೌರವಿಸಿದರು. ನ.13 ಮತ್ತು 14 ರಂದು ನಡೆದ ಕ್ರೀಡೋತ್ಸವದ ಪ್ರಯುಕ್ತ ಕ್ರೀಡೆಗಳಲ್ಲಿ ಹಾಗೂ ಸಾಂಸ್ಕೃತಿಕ ಸ್ಪರ್ದೆಗಳಲ್ಲಿ ವಿಜೇತರಾದವರಿಗೆ ಪದಕಗಳನ್ನು ನೀಡಿ ಗೌರವಿಸಿದರು. ಶಿಕ್ಷಕಿ ಸುನಿತಾ ವಂದಿಸಿದರು.
10ನೇ ತರಗತಿಯ ವಿದ್ಯಾರ್ಥಿಗಳಿಂದ ಮನೋರಂಜನಾ ಕಾರ್ಯಕ್ರಮ ಜರುಗಿತು. ರಕ್ಷಕ-ಶಿಕ್ಷಕ ಸಂಘದ ಕಾರ್ಯಕಾರಿ ಸಮಿತಿಯ ಸದಸ್ಯರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಕನ್ನಡ ಶಿಕ್ಷಕಿ ಉಮ್ಮಕ್ಕರವರ ನೇತೃತ್ವದಲ್ಲಿ ಕು. ಗೀತಾ ಮತ್ತು ಕು. ಸಂಶೀರಾ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನೆರವೇರಿಸಿದರು.