ಉಜಿರೆ: ವಿದ್ಯಾರ್ಥಿಗಳು ವಿದ್ಯೆಯ ಜತೆಗೆ ಪ್ರಾಪಂಚಿಕ ಅರಿವು ಗಳಿಸಬೇಕು ಎಂದು ಶ್ರೀ ಧ.ಮಂ. ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ| ಎಸ್. ಸತೀಶ್ಚಂದ್ರ ಹೇಳಿದರು.
ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪದವಿಪೂರ್ವ ಕಾಲೇಜಿನಲ್ಲಿ ನ.25 ರಂದು ಇಂದ್ರಪ್ರಸ್ಥ ಸಭಾಂಗಣದಲ್ಲಿ ಧರ್ಮಾಧಿಕಾರಿ ಡಾ|| ಡಿ. ವೀರೇಂದ್ರ ಹೆಗ್ಗಡೆಯವರ ಜನ್ಮದಿನದ ಸಂಭ್ರಮಾಚರಣೆ ಪ್ರಯುಕ್ತ ವಿದ್ಯಾರ್ಥಿ ವೇತನ ವಿತರಣಾ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ದೇಶ ಮತ್ತು ಸಮಾಜಕ್ಕೆ ಹೆಗ್ಗಡೆಯವರ ಕೊಡುಗೆ ಅಪಾರ. ವಿದ್ಯಾರ್ಥಿಗಳು ಅವರ ಆದರ್ಶಗಳನ್ನು ಅಧ್ಯಯನ ಮಾಡಿ ಅನುಸರಿಸಬೇಕು. 10 ಸಾವಿರಕ್ಕೂ ಅಧಿಕ ಶಿಕ್ಷಕರು, ಒಟ್ಟು 57 ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ವ್ಯಾಸಂಗ ಮಾಡುವ ಮೂಲಕ ಎಸ್ .ಡಿ.ಎಂ. ಶಿಕ್ಷಣ ಸಂಸ್ಥೆಯಲ್ಲಿ ಶೈಕ್ಷಣಿಕ ಯಜ್ಞ ನಡೆಯುತ್ತಿದೆ. ಪ್ರತೀ ವರ್ಷ ಕ್ಷೇತ್ರದಿಂದ 30 ಕೋ.ರೂ. ಗೂ ಅಧಿಕ ವಿದ್ಯಾರ್ಥಿ ವೇತನ ಹಾಗೂ ಸರಕಾರಿ ಶಾಲೆಗೆ ಬೆಂಚ್ ಡೆಸ್ಕ್ ವಿತರಣೆಗಾಗಿ ಮೀಸಲಿಡಲಾಗುತ್ತಿದೆ ಎಂದರು.
ವಾಗ್ನಿ ಎನ್.ಆರ್. ದಾಮೋದರ ಶರ್ಮ ಬಾರ್ಕೂರು ವಿಶೇಷ ಉಪನ್ಯಾಸ ನೀಡಿ, ಡಾ| ಹೆಗ್ಗಡೆಯವರ ಜನ್ಮಕ್ಷೇತ್ರ ಧರ್ಮಸ್ಥಳವಾದರೆ ಅವರ ಸೇವಾ ಸ್ಥಳ ಭಾರತ ಎಂದರಲ್ಲದೆ ವಿದ್ಯಾರ್ಥಿಗಳು ವಯೋ ಸಹಜ ಆಕರ್ಷಣೆಗೆ ಒಳಗಾಗದೆ ಜೀವನದ ಹಾದಿಯಲ್ಲಿ ಎಚ್ಚರ ತಪ್ಪದೆ ನಡೆಯಿರಿ ಎಂದರು.
ಸಂಸ್ಥೆಯ ಹಳೆ ವಿದ್ಯಾರ್ಥಿ ಡಾ| ರೋಹನ್ ಎಂ.ದೀಕ್ಷಿತ್ ಅವರನ್ನು ಗೌರವಿಸಲಾಯಿತು.
2023-24 ನೇ ಸಾಲಿನ ಸಂಸ್ಥೆಯ ಎಸೆಸೆಲ್ಸಿಯಲ್ಲಿ ಶೇ.95 ಅಂಕ ಪಡೆದವರಿಗೆ ಪಿಯುಸಿಯಲ್ಲಿ ಉಚಿತ ಪ್ರವೇಶ, ಶೇ.90 ಅಂಕ ಪಡೆದ ಬೆಳ್ತಂಗಡಿ ತಾಲೂಕಿನ ವಿದ್ಯಾರ್ಥಿಗಳಿಗೆ ಶೇ.50 ರಂತೆ ರಿಯಾಯಿತಿ ಸೇರಿ ಸಾಧಕ ಒಟ್ಟು 93 ವಿದ್ಯಾರ್ಥಿಗಳಿಗೆ 18,62,950 ರೂ. ಮೊತ್ತದ ವಿದ್ಯಾರ್ಥಿ ವೇತನ ವಿತರಿಸಲಾಯಿತು.
ಪ್ರಾಂಶುಪಾಲ ಪ್ರಮೋದ್ ಕುಮಾರ್ ಬಿ. ಪ್ರಾಸ್ತಾವಿಸಿ, ಸ್ವಾಗತಿಸಿದರು. ಉಪಪ್ರಾಚಾರ್ಯ ಡಾ। ರಾಜೇಶ್ ಬಿ. ವಂದಿಸಿದರು. ಉಪನ್ಯಾಸಕರಾದ ಮಹಾವೀರ ಜೈನ್, ನಿಹಾರಿಕಾ ಜೈನ್ ನಿರೂಪಿಸಿದರು.