ಧರ್ಮಸ್ಥಳ: ಧರ್ಮಸ್ಥಳಕ್ಕೆ ಯಾತ್ರಾರ್ಥಿಯಾಗಿ ಬಂದ ಕುಟುಂಬವೊಂದರ ಮಹಿಳೆಯ ಬ್ಯಾಗ್‌ನಲ್ಲಿದ್ದ ನಗದು ಸಹಿತ ಸುಮಾರು ರೂ. 12.90 ಲಕ್ಷ ಮೌಲ್ಯದ 40 ಪವನ್ ಚಿನ್ನಾಭರಣಗಳನ್ನು ಕಳ್ಳರು ಕಳವು ಗೈದ ಪ್ರಕರಣ ನ.24ರಂದು ವರದಿಯಾಗಿದೆ.
ಉಡುಪಿ ಜಿಲ್ಲೆಯ ಕಾಪು ಕೋಟಿ ಗ್ರಾಮದ ಜೋಗಿ ಕಾಂಪೌಂಡ್ನಿ ನಿವಾಸಿ ಗಾಯತ್ರಿ ಆರ್.ಜೋಗಿ ಎಂಬವರಿಗೆ ಸೇರಿದ ಬ್ಯಾಗ್‌ನಲ್ಲಿದ್ದ ರೂ.10 ಸಾವಿರ ನಗದು ಹಾಗೂ ರೂ.12.80 ಲಕ್ಷ ಮೌಲ್ಯದ 40 ಪವನ್ ಚಿನ್ನಾಭರಣಗಳನ್ನು ಕಳ್ಳರು ಕಳವುಗೈದಿದ್ದಾರೆ.
ಗಾಯತ್ರಿ ಅವರು ತಮ್ಮ ಮಗಳು ರಜಿತ, ಆಕೆಯ 7 ತಿಂಗಳ ಮಗು ಹಾಗೂ ತಾಯಿ ತಾರಾ ಜೋಗಿರವರ ಜೊತೆ ನ.24 ರಂದು ಬೆಳಿಗ್ಗೆ 10 ಗಂಟೆಗೆ ತನ್ನ ಮನೆಯಿಂದ ಕಾರಿನಲ್ಲಿ ಧರ್ಮಸ್ಥಳಕ್ಕೆ ಬಂದಿದ್ದರು. ಬರುವಾಗ ತಮ್ಮ ಬ್ಯಾಗ್ನಲ್ಲಿ ತನ್ನ ಮಗಳ ಹಾಗೂ ಮಗುವಿನ ಹಾಗೂ ತನಗೆ ಸೇರಿದ 40 ಪವನ್ ಚಿನ್ನಾಭರಣಗಳನ್ನು ಎರಡು ಪರ್ಸಲ್‌ನಲ್ಲಿ ಇಟ್ಟು ರೂ.10 ಸಾವಿರ ನಗದನ್ನು ವೆನೇಟಿ ಬ್ಯಾಗ್ನಲ್ಲಿ ಇಟ್ಟುಕೊಂಡು ಬಂದಿದ್ದರು.
ಮಧ್ಯಾಹ್ನ ಸುಮಾರು 1.45 ಗಂಟೆಗೆ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಬಂದು ತಲುಪಿ ಕಾರನ್ನು ವಾಹನ ಪಾರ್ಕಿಂಗ್ ಸ್ಥಳದಲ್ಲಿ ನಿಲ್ಲಿಸಿದ್ದರು. ಬಳಿಕ ದೇವರ ದರ್ಶನಕ್ಕೆ ದೇವಸ್ಥಾನದ ಒಳಗೆಡೆ ಹೋಗಿ ದೇವರ ದರ್ಶನ ಮುಗಿಸಿ, ಮಧ್ಯಾಹ್ನ 2.30 ಗಂಟೆಯ ಸಮಯಕ್ಕೆ ಬ್ಯಾಗನ್ನು ನೋಡಿದಾಗ ಜಿಪ್ ತೆರೆದು ಕೊಂಡಿರುವುದು ಕಂಡು ಬಂದಿತ್ತು. ನೋಡಿದಾಗ ಬ್ಯಾಗ್‌ನಲ್ಲಿ ಇಟ್ಟಿದ್ದ ಸುಮಾರು 40 ಪವನ್ ಚಿನ್ನಾಭರಣಗಳನ್ನು ಇರಿಸಿದ್ದ 2 ಪರ್ಸ್ಗಳು ಹಾಗೂ ನಗದು ರೂ. 10 ಸಾವಿರ ನಾಪತ್ತೆಯಾಗಿದ್ದು, ಕೂಡಲೇ ಅವರು ಕಾರು ಪಾರ್ಕ್ ಮಾಡಿದ್ದಲ್ಲಿ ಹೋಗಿ ಕಾರಿನಲ್ಲಿ ಹುಡುಕಾಡಿದಾಗ, ಅಲ್ಲಿಯೂ ಬೆಳ್ಳಿ ಹಾಗೂ ಚಿನ್ನಾಭರಣಗಳು ಇರುವ ಪರ್ಸ್ ಪತ್ತೆಯಾಗಲಿಲ್ಲ. ಜನಸಂದಣಿಯಲ್ಲಿ ಯಾರೋ ಕಳ್ಳರು ಅವರ ಬ್ಯಾಗಿನಲ್ಲಿ ಇಟ್ಟಿದ್ದ ಒಟ್ಟು ರೂ. 12,80,000 ಮೌಲ್ಯದ ಬೆಳ್ಳಿ ಮತ್ತು ಚಿನ್ನಾಭರಣ ಹಾಗೂ ರೂ. 10,000 ನಗದನ್ನು ಕಳವು ಮಾಡಿದ್ದು, ಕಳವಾದ ಸೊತ್ತುಗಳ ಒಟ್ಟು ಮೌಲ್ಯ ರೂ. 12,90,000 ಆಗಬಹುದು ಎಂದು ಅಂದಾಜಿಸಲಾಗಿದೆ. ಈ ಬಗ್ಗೆ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಳವಾದ ಸೊತ್ತುಗಳ ವಿವರ
ರೂ.1.92 ಲಕ್ಷ ಮೌಲ್ಯದ 64 ಗ್ರಾಂನ ಚಿನ್ನದ ಒಂದು ಚೈನ್, ರೂ.1.60 ಲಕ್ಷ ಮೌಲ್ಯದ ಎರಡು ಚಿನ್ನದ ಬಲೆ, ರೂ.16 ಸಾವಿರ ರೂ. ಮೌಲ್ಯದ ಚಿನ್ನದ ಮಕ್ಕಳ ಒಂದು ಬಲೆ, ರೂ.1.80 ಲಕ್ಷ ಮೌಲ್ಯದ ಚಿನ್ನದ ಒಂದು ನೆಕ್ಲೆಸ್, ರೂ.96 ಸಾವಿರ ಮೌಲ್ಯದ ಚಿನ್ನದ ಒಂದು ಜುಮ್ಕಿ, ರೂ.16 ಸಾವಿರ ಮೌಲ್ಯದ ಚಿನ್ನದ 4 ಮಕ್ಕಳ ರಿಂಗ್, ರೂ.2.48 ಲಕ್ಷದ ಒಂದು ಚಿನ್ನದ ಒಂದು ಕರಿಮಣಿ ಸರ, ರೂ.16 ಸಾವಿರ ಮೌಲ್ಯದ ಚಿನ್ನದ ಒಂದು ಕಿವಿಯ ರಿಂಗ್, ರೂ.48 ಸಾವಿರ ಮೌಲ್ಯದ ಚಿನ್ನದ ಒಂದು ಜಂಟ್ಸ್ ಬ್ರೆಸ್‌ಲೈಟ್, ರೂ.20 ಸಾವಿರ ಮೌಲ್ಯದ 4 ಗ್ರಾಂನ ಚಿನ್ನದ ಒಂದು ಮಕ್ಕಳ ಕಿವಿಯ ರಿಂಗ್, ರೂ.30 ಸಾವಿರ ಮೌಲ್ಯದ 6 ಗ್ರಾಂನ ಚಿನ್ನದ ಮಕ್ಕಳ ಪೆಂಡೆಂಟ್ ಇರುವ ಚೈನ್, ರೂ.96 ಸಾವಿರ ಮೌಲ್ಯದ 24 ಗ್ರಾಂನ ಚಿನ್ನದ ಒಂದು ಚೈನ್, ರೂ.80 ಸಾವಿರ ಮೌಲ್ಯದ ಚಿನ್ನದ 2 ಮಕ್ಕಳ ಕೈಬಲೆ, ರೂ.48 ಸಾವಿರ ಮೌಲ್ಯದ 12 ಗ್ರಾಂನ ಮೂರು ರಿಂಗ್, ರೂ.24 ಸಾವಿರ ಮೌಲ್ಯದ 6 ಗ್ರಾಂನ ಚಿನ್ನದ ಕಿವಿಯೊಲೆ ಮತ್ತು ಜುಮ್ಕಿ, ರೂ.10 ಸಾವಿರ ಮೌಲ್ಯದ ಬೆಳ್ಳಿಯ ಕಾಲು ಚೈನ್ ಹಾಗೂ ರೂ.10 ಸಾವಿರ ನಗದು ಕಳವು ಆದ ಸೋತ್ತುಗಳಲ್ಲಿ ಸೇರಿದೆ.