34.6 C
ಪುತ್ತೂರು, ಬೆಳ್ತಂಗಡಿ
November 28, 2024
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ಧರ್ಮಸ್ಥಳ ಲಕ್ಷದೀಪೋತ್ಸವ: ಜ್ಞಾನ, ವಿಜ್ಞಾನ ಮತ್ತು ಸುಜ್ಞಾನದ ತ್ರಿವೇಣಿ ಸಂಗಮ

ಉಜಿರೆ: ನಾಡಿನ ಪವಿತ್ರ ಕ್ಷೇತ್ರ ಹಾಗೂ ಸರ್ವಧರ್ಮ ಸಮನ್ವಯ ಕೇಂದ್ರವಾದ ಧರ್ಮಸ್ಥಳದಲ್ಲಿ ಈಗ ಕಾರ್ತಿಕ ಮಾಸದ ಲಕ್ಷದೀಪೋತ್ಸವದ ಸಂಭ್ರಮ, ಸಡಗರ. ದೇವಸ್ಥಾನ, ಬೀಡು, ವಸತಿಛತ್ರಗಳು, ಬಾಹುಬಲಿಬೆಟ್ಟ, ಪ್ರವೇಶದ್ವಾರ ಮೊದಲಾದ ಎಲ್ಲಾ ಕಟ್ಟಡಗಳನ್ನು ಆಕರ್ಷಕ ವಿನ್ಯಾಸದ ವಿದ್ಯುದ್ದೀಪಗಳಿಂದ ಅಲಂಕರಿಸಲಾಗಿದೆ.


ನಾಡಿನೆಲ್ಲೆಡೆಯಿಂದ ಪ್ರತಿದಿನ ಸಹಸ್ರಾರು ಭಕ್ತಾದಿಗಳು ಹಾಗೂ ಪ್ರವಾಸಿಗರು ಬರುತ್ತಿದ್ದು, ದೇವರ ದರ್ಶನದ ಬಳಿಕ ಮಂಜೂಷಾ ವಸ್ತುಸಂಗ್ರಹಾಲಯ, ಕಾರ್‌ಮ್ಯೂಸಿಯಂ, ಲಲಿತೋದ್ಯಾನ, ರತ್ನಗಿರಿ (ಬಾಹುಬಲಿಬೆಟ್ಟ) ವೀಕ್ಷಿಸಿ ಸುಂದರ ಪ್ರಾಕೃತಿಕ ಪರಿಸರದ ಸೊಗಡನ್ನು ಸವಿಯುವುದರೊಂದಿಗೆ ತಮ್ಮ ಜ್ಞಾನಕ್ಷಿತಿಜವನ್ನು ವಿಸ್ತರಿಸಿಕೊಳ್ಳುತ್ತಿದ್ದಾರೆ.
ಪ್ರೇಕ್ಷಕರನ್ನು ಸೆಳೆಯುವ ವಸ್ತುಪ್ರದರ್ಶನ: ಪ್ರೌಢಶಾಲಾ ವಠಾರದಲ್ಲಿ ಆಯೋಜಿಸಿರುವ ರಾಜ್ಯಮಟ್ಟದ ವಸ್ತುಪ್ರದರ್ಶನದಲ್ಲಿ ಮುನ್ನೂರಕ್ಕೂ ಮಿಕ್ಕಿ ಮಳಿಗೆಗಳಿದ್ದು, ಪ್ರೇಕ್ಷಕರ ಕಣ್ಮನ ಸೆಳೆಯುತ್ತಿವೆ.


ಪುಸ್ತಕ ಮಳಿಗೆಗಳು, ಕೃಷಿ, ವಿಜ್ಞಾನ, ಕಲೆ, ಸಂಸ್ಕೃತಿ ಹಾಗೂ ಗ್ರಾಮೀಣ ಕರಕುಶಲ ಕಲೆಗಳಿಗೆ ಸಂಬಂಧಪಟ್ಟ ಮಳಿಗೆಗಳು ಪ್ರೇಕ್ಷಕರ ಗಮನ ಸೆಳೆಯುತ್ತಿವೆ. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮಳಿಗೆ, ಪುಸ್ತಕದ ಮಳಿಗೆಗಳು, ಮಡಿಕೆ ತಯಾರಿ, ಹಾಳೆತಟ್ಟೆಗಳ ಮಳಿಗೆ, ಸ್ವ-ಉದ್ಯೋಗ ತರಬೇತಿ ಸಂಸ್ಥೆಯ ಮಳಿಗೆ, ಸಿರಿ ಗ್ರಾಮೋದ್ಯೋಗ ಸಂಸ್ಥೆಯ ಮಳಿಗೆ ಪ್ರೇಕ್ಷಕರ ಕಣ್ಮನ ಸೆಳೆಯುತ್ತವೆ.


ಕರ್ನಾಟಕ ಬ್ಯಾಂಕ್, ಕೆನರಾ ಬ್ಯಾಂಕ್, ಜೀವವಿಮೆ, ಸರ್ಕಾರದ ವಿವಿಧ ಇಲಾಖೆಗಳ ಮಳಿಗೆಗಳು ಸಾರ್ವಜನಿಕರಿಗೆ ಉಪಯುಕ್ತ ಮಾಹಿತಿ, ಮಾರ್ಗದರ್ಶನ ನೀಡುತ್ತಿವೆ.
ಕೆ.ಎಸ್.ಆರ್.ಟಿ.ಸಿ. ರಾಜ್ಯದ ವಿವಿಧ ಊರುಗಳಿಂದ ಧರ್ಮಸ್ಥಳಕ್ಕೆ ವಿಶೇಷ ಬಸ್ ಸೌಲಭ್ಯ ಕಲ್ಪಿಸಿದೆ. ಹಲವಾರು ಮಂದಿ ಭಕ್ತರು ಪಾದಯಾತ್ರೆಯಲ್ಲಿ, ಸೈಕಲ್ ಮೂಲಕ ಧರ್ಮಸ್ಥಳಕ್ಕೆ ಬರುತ್ತಿದ್ದಾರೆ. ಭಕ್ತರು ತಾವು ಬೆಳೆದ ತರಕಾರಿ, ಹಣ್ಣುಹಂಪಲು, ಅಕ್ಕಿ, ದವಸಧಾನ್ಯಗಳನ್ನು ಕೂಡಾ ಕಾಣಿಕೆಯಾಗಿ ಅರ್ಪಿಸುತ್ತಿದ್ದಾರೆ. ಎಲ್ಲೆಲ್ಲೂ ಸೊಬಗಿದೆ, ಸೊಗಸಿದೆ. ಶಿಸ್ತು, ಸ್ವಚ್ಛತೆ, ದಕ್ಷತೆ ಹಾಗೂ ದೇವಳ ಸಿಬ್ಬಂದಿ ಮತ್ತು ಸ್ವಯಂ ಸೇವಕರ ನಗುಮೊಗದ ಸೇವೆ ಭಕ್ತರ ಮುಕ್ತ ಪ್ರಶಂಸೆಗೆ ಪಾತ್ರವಾಗಿದೆ.


ವಸ್ತುಪ್ರದರ್ಶನ ಮಂಟಪದಲ್ಲಿ ಪ್ರತಿದಿನ ಸಂಜೆ ಗಂಟೆ 6.30 ರಿಂದ ರಾತ್ರಿ 10.30ರ ವರೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ನ.28ರಂದು ಅಮೃತವರ್ಷಿಣಿ ಸಭಾಭವನದಲ್ಲಿ ಸಂಜೆ ಗಂಟೆ5.30 ರಿಂದ ಲಲಿತಕಲಾ ಗೋಷ್ಠಿ ನಡೆಯುತ್ತದೆ. ನ.29ರಂದು ಸಂಜೆ 5 ಗಂಟೆಗೆ ಸರ್ವಧರ್ಮ ಸಮ್ಮೇಳನದ 92ನೇ ಅಧೀವೇಶನವನ್ನು ಗೃಹ ಸಚಿವ ಡಾ. ಜಿ. ಪರಮೇಶ್ವರ ಉದ್ಘಾಟಿಸುವರು.


ಬೆಂಗಳೂರಿನ ಕೈಲಾಸ ಆಶ್ರಮದ ಜಯೇಂದ್ರಪುರಿ ಸ್ವಾಮೀಜಿ ಅಧ್ಯಕ್ಷತೆ ವಹಿಸುವರು. ಬೆಂಗಳೂರಿನ ಡಾ. ಜಿ.ಬಿ. ಹರೀಶ್, ಡಾ. ಜೋಸೇಫ್ ಎನ್. ಎಂ. ಮತ್ತು ಬಿಜಾಪುರದ ಮೆಹತಾಬ ಇಬ್ರಾಹಿಂ ಸಾಬ ಕಾಗವಾಡ ಧಾರ್ಮಿಕ ಉಪನ್ಯಾಸ ನೀಡುವರು.

Related posts

ಶಿರ್ಲಾಲು ಯುವವಾಹಿನಿ ಸಂಚಲನ ಸಮಿತಿ ವತಿಯಿಂದ ಆರೋಗ್ಯ ನಿಧಿ ವಿತರಣೆ

Suddi Udaya

ಉಜಿರೆಯಲ್ಲಿ ಸುಬ್ರಹ್ಮಣ್ಯ ಶ್ರೀಗಳಿಂದ ತಪ್ತಮುದ್ರಾಧಾರಣೆ

Suddi Udaya

ಡಾ|| ಹೆಗ್ಗಡೆಯವರ ಹುಟ್ಟುಹಬ್ಬದ ಪ್ರಯುಕ್ತ ಸುದ್ದಿ ಉದಯ ವಾರಪತ್ರಿಕೆಯಿಂದ ವಿಶೇಷ ಪುರವಾಣಿ

Suddi Udaya

ಮೊಗ್ರು ಊoತನಾಜೆ ಲಕ್ಷ್ಮೀ ನಾರಾಯಣ ಭಜನಾ ಮಂದಿರದಲ್ಲಿ ಕಣಿಯೂರು ವಲಯ ಮೊಗ್ರು ಒಕ್ಕೂಟದ ವತಿಯಿಂದ ಸ್ವಚ್ಛತಾ ಶ್ರಮದಾನ

Suddi Udaya

ಕುವೆಟ್ಟು ಸ.ಉ.ಹಿ.ಪ್ರಾ. ಶಾಲಾ ಮಂತ್ರಿ ಮಂಡಲ ರಚನೆ

Suddi Udaya

ಕಲ್ಮಂಜ: ಆಕಸ್ಮಿಕವಾಗಿ ನೀರಿಗೆ ಬಿದ್ದು ಕೃಷಿಕ ಸಾವು

Suddi Udaya
error: Content is protected !!