21.2 C
ಪುತ್ತೂರು, ಬೆಳ್ತಂಗಡಿ
January 19, 2025
ಜಿಲ್ಲಾ ಸುದ್ದಿ

ಕರ್ನಾಟಕ ರಾಜ್ಯದ ಕುಡಾಳ್ ದೇಶಸ್ಥ ಆದ್ಯ ಗೌಡ್ ಬ್ರಾಹ್ಮಣ ಸಮಾಜದ ರಾಜ್ಯಮಟ್ಟದ ಸಮಗ್ರ “ಸಾಮಾಜಿಕ – ಆರ್ಥಿಕ ಸಮೀಕ್ಷಾ ಸಂಶೋಧನಾ ವರದಿ” ಪುಸ್ತಕ ಬಿಡುಗಡೆ

ಮಂಗಳೂರು:, ಶ್ರೀ ಪೂರ್ಣಾನಂದ ಸೇವಾ ಪ್ರತಿಷ್ಠಾನ (ರಿ) ಹಾಗೂ ದ.ಕ. ಜಿಲ್ಲಾ ಕುಡಾಳ್ ದೇಶಸ್ಥ ಆದ್ಯ ಗೌಡ್ ಬ್ರಾಹ್ಮಣ ಸಂಘ (ರಿ) ಇವರ ಸಂಯುಕ್ತ ಆಶ್ರಯದಲ್ಲಿ ಬಂಟ್ವಾಳದ ಧರ್ಮಸ್ಥಳ ಶ್ರೀ ಮಂಜುನಾಥ ಸ್ವಾಮಿ ಸಭಾಭವನದಲ್ಲಿ ಜರುಗಿದ ಸಮಾರಂಭದಲ್ಲಿ ಕರ್ನಾಟಕ ರಾಜ್ಯದ ಕುಡಾಳ್ ದೇಶಸ್ಥ ಆದ್ಯ ಗೌಡ್ ಬ್ರಾಹ್ಮಣ ಸಮಾಜದ ರಾಜ್ಯಮಟ್ಟದ ಸಮಗ್ರ “ಸಾಮಾಜಿಕ – ಆರ್ಥಿಕ ಸಮೀಕ್ಷಾ ಸಂಶೋಧನಾ ವರದಿ” ಪುಸ್ತಕವನ್ನು ಬಿಡುಗಡೆಗೊಳಿಸಲಾಯಿತು.

ಡಾ. ವಿಜಯಲಕ್ಷ್ಮಿ ನಾಯಕ್ ಅವರು ಎಲ್ಲರನ್ನು ಸ್ವಾಗತಿಸಿ, ಪ್ರಾಸ್ತಾವಿಕವಾಗಿ ವರದಿ ಪುಸ್ತಕದ ಬಗ್ಗೆ ಸಂಕ್ಷಿಪ್ತವಾಗಿ ವಿವರಿಸುತ್ತಾ,ವಿಶ್ವ ಕೊಂಕಣಿ ಕೇಂದ್ರದ ಸಹಭಾಗಿತ್ವದಲ್ಲಿ ಖ್ಯಾತ ಸಮಾಜಶಾಸ್ತ್ರಜ್ಞರಾದ ಡಾ. ವೈ.ರವೀಂದ್ರನಾಥ ರಾವ್, ಇವರ ಮಾರ್ಗದರ್ಶನದಲ್ಲಿ ‘ ಸಮುದಾಯದ ಭಾಗವಹಿಸುವಿಕೆಯ ಉಪಕ್ರಮ’ ವನ್ನು ಆಧರಿಸಿ, ಸಮುದಾಯದವರೊಂದಿಗೆ ಚಚಿ೯ಸಿ, ನಿರಂತರ ಕಾರ್ಯಗಾರಗಳೊಂದಿಗೆ, ಪ್ರಶ್ನಾವಳಿಯನ್ನು ತಯಾರಿಸಿ, ಸಮಾಜದ ಸ್ವಯಂಸೇವಕರ ತಂಡವನ್ನು ರಚಿಸಿ, ಅವರೆಲ್ಲರಿಗೂ ಪ್ರಶ್ನಾವಳಿಯೊಂದಿಗೆ ಮಾಹಿತಿಯನ್ನು ಸಂಗ್ರಹಿಸುವ ತರಬೇತಿಯನ್ನು ನೀಡಲಾಯಿತು. ಅದರಂತೆ ಬೆಂಗಳೂರು ಉಡುಪಿ ದಕ್ಷಿಣ ಕನ್ನಡ ಹಾಗೂ ಇನ್ನಿತರ ಜಿಲ್ಲೆಗಳ ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ನೆಲೆ ನಿಂತ ಪ್ರತೀ ಕುಟುಂಬಗಳ ಮನೆಮನೆ ಭೇಟಿ ಮೂಲಕ ಸಮಾಜದ ಸಾಮಾಜಿಕ ಶೈಕ್ಷಣಿಕ ಹಾಗೂ ಆರ್ಥಿಕ, ಆರೋಗ್ಯ ಹಾಗೂ ಔದ್ಯೋಗಿಕ ಸ್ಥಿತಿಗತಿಗಳ ಬಗೆಗಿನ
ಮಾಹಿತಿಯನ್ನು ಸಂಗ್ರಹಿಸಲಾಯಿತು. ಇದನ್ನು ಮುಂದಿನ ಅಭಿವೃದ್ಧಿಗೆ ಪೂರಕವಾದ ಯೋಜನೆಗಳನ್ನು ರೂಪಿಸುವ ಸಲುವಾಗಿ ಚರ್ಚಿಸಿ ಸಮಾಜದ ಸಾಮಾಜಿಕ ಆರ್ಥಿಕ ಸಮೀಕ್ಷಾ ವರದಿಯನ್ನು ಸಿದ್ಧಪಡಿಸಲಾಗಿತ್ತು ಎಂದು ವಿವರಿಸಿದರು.

ವಿಶ್ವ ಕೊಂಕಣಿ ಕೇಂದ್ರದ ಅಧ್ಯಕ್ಷರಾದ ಸಿಎ ನಂದಗೋಪಾಲ್ ಶೆಣೈ ಅವರು ಪುಸ್ತಕವನ್ನು ಅನಾವರಣಗೊಳಿಸುತ್ತಾ, ಪ್ರತಿ ವ್ಯಕ್ತಿಯು ತಮ್ಮ ಮಾತೃಭಾಷೆ, ಸಂಸ್ಕೃತಿ , ಕಲೆ ಹಾಗೂ ಸಂಸ್ಕಾರವನ್ನು ಎಂದಿಗೂ ಕಡೆಗಣಿಸಬಾರದು. ಅಂತೆಯೇ ನಾನೊಬ್ಬ ಕೊಂಕಣಿ ಭಾಷಿಕ ಎಂದು ಸಂಕೇತಿಸುವ ಸಲುವಾಗಿ ಪ್ರತಿಯೊಬ್ಬರೂ ತನ್ನ ಹೆಸರಿನೊಂದಿಗೆ ಉಪನಾಮವನ್ನು ಪ್ರಸ್ತುತಪಡಿಸುವ ಮೂಲಕ ಮಾತೃಭಾಷೆ ಹಾಗೂ ಸಂಸ್ಕೃತಿಯನ್ನು ತಾದಾತ್ಮ್ಯಗೊಳಿಸುವುದು ಅತೀ ಅವಶ್ಯಕ ಎಂದು ಅಭಿಪ್ರಾಯಪಟ್ಟರು. ಈ ಸಮಗ್ರ ವರದಿಯು ಸಮಾಜದ ಅಭಿವೃದ್ಧಿಗೆ ಅಡಿಪಾಯ ಹಾಗೂ ಮುಂದಿನ ಯೋಜನೆಗಳಿಗೆ ಪೂರಕ ಎಂದು ನುಡಿದರು.

ವಿಶ್ವ ಕೊಂಕಣಿ ಕೇಂದ್ರದ ಉಪಾಧ್ಯಕ್ಷರಾದ ಡಿ. ರಮೇಶ್ ನಾಯಕ್ ಮೈರಾ ಅವರು ಮಾತನಾಡುತ್ತಾ, ‘ಯಾವುದೇ ಸಮಾಜದ ಅಭಿವೃದ್ಧಿಗೆ ಯೋಜನೆಗಳನ್ನು ರೂಪಿಸುವಾಗ ವಾಸ್ತವ ಸ್ಥಿತಿಗತಿಗಳನ್ನು ನಿಖರ ಅಂಕಿ ಅಂಶಗಳೊಂದಿಗೆ ತಿಳಿಯುವುದು ಅತ್ಯಗತ್ಯ. ಈ ದೃಷ್ಟಿಯಲ್ಲಿ ಸಾಮಾಜಿಕ ಆರ್ಥಿಕ ಸಮೀಕ್ಷಾ ವರದಿಯು ಅತ್ಯಂತ ಮಹತ್ವವನ್ನು ಪಡೆದಿದೆ. ಸಂಶೋಧನಾತ್ಮಕ ಸಮೀಕ್ಷಾ ವರದಿಯು ಸಮಾಜದ
ಒಕ್ಕೊರಳ ಧ್ವನಿಗೆ ಪೂರಕವಾಗಿದೆ’ ಎಂದು ತಿಳಿಸಿದರು.

ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ಶ್ರೀ ಜೋಕಿಂ ಸ್ಟ್ಯಾನಿ ಅಲ್ವ್ಯಾರೀಸ್,ಇವರು ಮಾತನಾಡುತ್ತಾ ‘ಭಾಷೆಯನ್ನು ನಮ್ಮ ನಮ್ಮ ಮನೆಗಳಲ್ಲಿ ಪ್ರತಿನಿತ್ಯ ಬಳಸಿ ನಾವು ಕೊಂಕಣಿ ಮಾತೆಯ ಸೇವೆ ಸಲ್ಲಿಸಬೇಕು. ಉದಾಹರಣೆಗೆ ಕೇರಳದಲ್ಲಿ ಮಲಯಾಳಂ, ತಮಿಳುನಾಡಿನಲ್ಲಿ ತಮಿಳು, ಆಂಧ್ರದಲ್ಲಿ ತೆಲುಗು ಇದೇ ರೀತಿ ನಮ್ಮ ಮಾತೃಭಾಷೆಯನ್ನು ಉಳಿಸಿ ಬೆಳೆಸಬೇಕು ಹಾಗೂ ಮುಂದಿನ ಪೀಳಿಗೆಗೆ ಕೊಡುಗೆಯಾಗಿ ನೀಡಬೇಕು. ಸರಕಾರ ಮಾಡುವ ಕೆಲಸವನ್ನು ಕುಡಾಳ್ ದೇಶಸ್ಥ ಆದ್ಯ ಗೌಡ್ ಬ್ರಾಹ್ಮಣ ಸಮಾಜದ ಸಾಮಾಜಿಕ ಆರ್ಥಿಕ ಸಮೀಕ್ಷಾ ವರದಿಯನ್ನು ಶ್ರೀ ಪೂರ್ಣಾನಂದ ಸೇವಾ ಪ್ರತಿಷ್ಠಾನದವರು ಮಾಡಿರುವುದು ಅತ್ಯಂತ ಶ್ಲಾಘನೀಯ ಅವರ ಈ ಮಹತ್ಕಾರ್ಯವು ಇತರ ಸಮಾಜಗಳಿಗೆ ಮಾದರಿಯಾಗಿದೆ. ಇಂತಹ ಮಹತ್ಕಾರ್ಯವನ್ನು ಮಾಡಿದ ಶ್ರೀ ಪೂರ್ಣಾನಂದ ಸೇವಾ ಪ್ರತಿಷ್ಠಾನದ ಎಲ್ಲಾ ಪದಾಧಿಕಾರಿಗಳನ್ನು ಮುಕ್ತ ಕಂಠದಿಂದ ಅಭಿನಂದಿಸಿದರು. ಇದು ಸಂಘಟನೆಯ ಮೀಸಲಾತಿಯ ಹೋರಾಟಕ್ಕೆ ಬ್ರಹ್ಮಾಸ್ತ್ರ ಸಿಕ್ಕಿದಂತಾಗಿದೆ ಎಂದು ಅಭಿಪ್ರಾಯಪಟ್ಟರು.

ಡಾ.ವೈ ರವೀಂದ್ರನಾಥ್ ರಾವ್ ಮಾತನಾಡುತ್ತಾ, ‘ಇದು ನನ್ನ ಜೀವನದಲ್ಲಿ ಮಂಡಿಸಿದ ಸಮುದಾಯಗಳ ಆರ್ಥಿಕ- ಸಾಮಾಜಿಕ ಸಮೀಕ್ಷಾ ವರದಿಯು ಮೂರನೇಯದಾಗಿದೆ. ಇದರಿಂದ ನಾನು ತುಂಬಾ ಕಲಿಕಾ ಅನುಭವಗಳನ್ನು ಪಡೆದುಕೊಂಡಿದ್ದೇನೆ. ಈ ಅಧ್ಯಯನದ ಸಂದರ್ಭದಲ್ಲಿ ನನಗೆ ಶ್ರೀ ಪೂರ್ಣಾನಂದ ಸೇವಾ ಪ್ರತಿಷ್ಠಾನವು ಸಕಲ ರೀತಿಯಲ್ಲಿ ಕೈಜೋಡಿಸಿದೆ. ಈ ಸಮೀಕ್ಷಾ ವರದಿಯ ರಚನೆಯು ಸಾಗಿ ಬಂದ ಹಾದಿಯನ್ನು ವಿವರಿಸುತ್ತಾ, ಈ ವರದಿಯ ರಚನೆಯಲ್ಲಿ ಸಮಾಜಭಾಂದವರ ಸ್ವಯಂ ಪ್ರೇರಿತ ಸೇವೆ, ಬದ್ಧತೆ ಹಾಗೂ ಕಾರ್ಯವೈಖರಿಯನ್ನು ಬಹುವಾಗಿ ಸ್ಮರಿಸಿದರು. ಈ ಕಾರ್ಯ ಯೋಜನೆಯಲ್ಲಿ ತೊಡಗಿಸಿಕೊಂಡಿದ್ದರಿಂದ ತನಗಾದ ವಿಶೇಷ ಅನುಭವ ಹಾಗೂ ವೈಚಾರಿಕ ಲಾಭವನ್ನು ವಿವರಿಸಿದರು. ಸಮೀಕ್ಷಾ ವರದಿಯನ್ನು ಸಿದ್ಧಪಡಿಸಿದ ಡಾ.ವೈ. ರವೀಂದ್ರನಾಥ ರಾವ್ ಅವರನ್ನು ಗೌರವಾದರಗಳಿಂದ ಅಭಿನಂದಿಸಿ ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಸಮಾಜದ ಎಲ್ಲಾ ಕ್ಷೇತ್ರಗಳಲ್ಲಿ ಜೀವಮಾನ ಪರ್ಯಂತ ಅತ್ಯುತ್ತಮ ಸೇವೆ ಸಲ್ಲಿಸಿದ ಹಿರಿಯ ಮುತ್ಸದ್ದಿ ಶ್ರೀ ಗಣಪತಿ ಶೆಣೈ ಡೆಚ್ಚಾರು ಅವರನ್ನು “ಸಮಾಜ ಸೇವಾ ರತ್ನ “ಎಂಬ ಬಿರುದಿನೊಂದಿಗೆ ಗೌರವಿಸಿ ಸನ್ಮಾನಿಸಲಾಯಿತು. ಶಿಕ್ಷಕರಾದ ಶ್ರೀ ರವೀಂಧ್ರ ನಾಯಕ್ ಕಿನ್ನಾಜೆ ಪ್ರಶಸ್ತಿಯ ಮಹತ್ವವನ್ನು ವಿವರಿಸಿ, ಶ್ರೀ ಗಣಪತಿ ಶೆಣೈ ಅವರು ಸಲ್ಲಿಸಿದ ಸೇವೆಯನ್ನು ಸಂಕ್ಷಿಪ್ತವಾಗಿ ವಿವರಿಸಿ, ಅವರ ಪರಿಚಯವನ್ನು ನೀಡಿದರು.

ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ಶ್ರೀ ಸ್ಟ್ಯಾನಿ ಅಲ್ವ್ಯಾರೀಸ್ ಮತ್ತು ವಿಶ್ವ ಕೊಂಕಣಿ ಕೇಂದ್ರದ ಅಧ್ಯಕ್ಷರಾದ ಸಿಎ ನಂದಗೋಪಾಲ್ ಶೆಣೈ ಅವರನ್ನು ಅಭಿನಂದಿಸಿ ಗೌರವಿಸಲಾಯಿತು.

ಈ ಸಂದರ್ಭದಲ್ಲಿ ಶ್ರೀಮತಿ ಸುಚಿತ್ರಾ ರಮೇಶ ನಾಯಕ್ , ಶ್ರೀ ಸಂಜೀವ ಪಾಟೀಲ್, ಶ್ರೀ ವಿಜಯ ಶೆಣೈ ,ಶ್ರೀ ಶ್ರೀನಿವಾಸ ಕೂಡಿಬೈಲು, ಶ್ರೀಮತಿ ಕಸ್ತೂರಿ ಮೋಹನ ಪ್ರಭು, ಶ್ರೀಮತಿ ಸುಶೀಲಾ ಗಣಪತಿ ನಾಯಕ್ ಮುಂತಾದ ಸಮಾಜದ ಗಣ್ಯ ವ್ಯಕ್ತಿಗಳು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಪ್ರತಿಷ್ಠಾನದ ಪದಾಧಿಕಾರಿಗಳು ಸಮಾಜ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.

ಡಾ. ವಿಜಯಲಕ್ಷ್ಮಿ ನಾಯಕ್ ಇವರು ಸ್ವಾಗತಿಸಿ, ಸತೀಶ್ ಪ್ರಭು ಮಣಿಯ ಧನ್ಯವಾದಗಳನ್ನು ಅರ್ಪಿಸಿದರು.
ದಯಾನಂದ ನಾಯಕ್ ರವರು ಕಾರ್ಯಕ್ರಮವನ್ನು ನಿರೂಪಿಸಿದರು.

Related posts

ಸ್ವಾತಂತ್ರ್ಯ ಸೇನಾನಿ ಕೆದಂಬಾಡಿ ರಾಮಯ್ಯ ಗೌಡರ ಕಂಚಿನ ಪ್ರತಿಮೆ ಮುಂಭಾಗದಲ್ಲಿ ಧ್ವಜಾರೋಹಣ

Suddi Udaya

ಚಾರ್ಮಾಡಿ: ರಸ್ತೆ ಬದಿ ಅರಣ್ಯಕ್ಕೆ ಮಗುಚಿ ಬಿದ್ದ ಐಸ್ ಕ್ರೀಂ ಸಾಗಾಟದ ವಾಹನ

Suddi Udaya

ಶಾಸಕರ ಬಂಧನಕ್ಕೆ ಹೋದ ಪೊಲೀಸರು- ಸಂಜೆಯವರೆಗೆ ಬಿಗ್ ಹೈಡ್ರಾಮ;: ಶಾಸಕ ಹರೀಶ್ ಪೂಂಜರ ಬಂಧನ ಕೈ ಬಿಟ್ಟು ಹಿಂದಿರುಗಿದ ಪೊಲೀಸರು

Suddi Udaya

ಕಾಂಗ್ರೆಸ್ ಅಭ್ಯರ್ಥಿ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ ರಿಂದ ರಕ್ತದಾನ

Suddi Udaya

ಡಾ. ಮನಮೋಹನ್ ಸಿಂಗ್ ಅವರ ಸಾಧನೆ, ಕೊಡುಗೆಗಳು ದೇಶಕ್ಕೆ ಎಂದಿಗೂ ಅಜರಾಮರ: ರಕ್ಷಿತ್ ಶಿವರಾಂ

Suddi Udaya

ಉಜಿರೆಯಲ್ಲಿ ಇಂಟರಾಕ್ಟ್ ಜಿಲ್ಲಾ ಸಮ್ಮೇಳನ – ಯೂತ್ ಕಾರ್ನಿವಾಲ್ ಉದ್ಘಾಟನೆ

Suddi Udaya
error: Content is protected !!