ಬೆಳ್ತಂಗಡಿ: ನಕ್ಸಲ್ ನಾಯಕ , ಆದಿವಾಸಿ ಮಲೆಕುಡಿಯ ಸಮುದಾಯದ ವಿಕ್ರಮ್ ಗೌಡ ನಕ್ಸಲ್ ನಿಗ್ರಹ ದಳದ ಎನ್ ಕೌಂಟರ್ ನಲ್ಲಿ ಹತ್ಯೆ ಮಾಡಿದ ಘಟನೆಯ ಎರಡು ದಿನಗಳ ಮೊದಲು ಆ ಪ್ರದೇಶದ ಆದಿವಾಸಿ ಮಲೆಕುಡಿಯ ಸಮುದಾಯದ ಮನೆಗಳ ನಿವಾಸಿಗಳನ್ನು ತೆರವು ಮಾಡಿದ್ದರೂ ಇಂದಿಗೂ ಅದನ್ನು ಆದಿವಾಸಿಗಳಿಗೆ ಬಿಟ್ಟು ಕೊಡದೆ ಬಿಟ್ಟು ಕೊಡದ ರಾಜ್ಯ ಸರ್ಕಾರದ ನಡೆ ಅತ್ಯಂತ ಖಂಡನೀಯ ಎಂದು ಕರ್ನಾಟಕ ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿ ಸಂಚಾಲಕ ಶೇಖರ್ ಲಾಯಿಲ , ಪ್ರಧಾನ ಕಾರ್ಯದರ್ಶಿ ಜಯಾನಂದ ಪಿಲಿಕಲ ಟೀಕಿಸಿದ್ದಾರೆ.
ಕರ್ನಾಟಕ ರಾಜ್ಯದಲ್ಲಿ ಕಳೆದ 13 ವರ್ಷಗಳ ನಂತರ ಅಮಾನವೀಯವಾಗಿ , ಸಂಶಯಕ್ಕೆ ಎಡೆಮಾಡಿ ಕೊಟ್ಟ ಎನ್ ಕೌಂಟರ್ ಹೆಸರಿನಲ್ಲಿ ನಡೆದ ಮಾನವ ಹತ್ಯೆಯ ಬಗ್ಗೆ ಇಂದಿಗೂ ರಾಜ್ಯ ಸರ್ಕಾರ ನ್ಯಾಯಾಂಗ ತನಿಖೆಗೆ ಆದೇಶ ಮಾಡದೆ ಮಾನವ ಹಕ್ಕುಗಳ ಉಲ್ಲಂಘನೆ ಮಾಡಿದೆ. ಜೊತೆಗೆ ಆದಿವಾಸಿಗಳನ್ನು ತೆರವು ಮಾಡಿದ ಎರಡು ದಿನಗಳ ಬಿಳಿಕ ಎನ್ ಕೌಂಟರ್ ಹೆಸರಿನಲ್ಲಿ ವಿಕ್ರಮ್ ಗೌಡನನ್ನು ಹತ್ಯೆ ಮಾಡಲಾಗಿದೆ. ಈ ಸಂಶಯವನ್ನು ನಿವಾರಿಸಲು ರಾಜ್ಯ ಸರ್ಕಾರ ನ್ಯಾಯಾಂಗ ತನಿಖೆ ನಡೆಸಬೇಕು. ಎನ್ ಕೌಂಟರ್ ನಡೆದು 15 ದಿನಗಳಾದರೂ ಇಂದಿಗೂ ತಮ್ಮ ಮನೆಗಳಿಗೆ ಆದಿವಾಸಿಗಳ ಪ್ರವೇಶವನ್ನು ನಿರ್ಬಂಧಿಸಿರುವ ರಾಜ್ಯ ಸರ್ಕಾರದ ನಡೆ ಅತ್ಯಂತ ಅಮಾನವೀಯತೆಯ ಸಂಕೇತವಾಗಿದೆ. ರಾಜ್ಯ ಸರ್ಕಾರವನ್ನು ಎಎನ್ಎಫ್ ಆಳ್ವಿಕೆ ಮಾಡುತ್ತಿದೆಯೋ ಅಥವಾ ರಾಜ್ಯ ಸರ್ಕಾರದ ಅಡಿಯಲ್ಲಿ ಎಎನ್ಎಫ್ ಕೆಲಸ ಮಾಡುತ್ತಿದೆಯೋ ಎಂಬ ಸಂಶಯ ಕಾಡುತ್ತಿದೆ.
ರಾಜ್ಯದಲ್ಲಿ ಈ ಹಿಂದೆ ನಡೆದ ಯಾವುದೇ ಎನ್ ಕೌಂಟರ್ ನಡೆಸುವ ಮೊದಲು ಯಾವುದೇ ಮನೆಯನ್ನು ತೆರವು ಮಾಡಿದ ಇತಿಹಾಸವಿಲ್ಲ. ಆದರೆ ವಿಕ್ರಮ್ ಗೌಡ ಎನ್ ಕೌಂಟರ್ ನಲ್ಲಿ ಮಾತ್ರ ಎನ್ ಕೌಂಟರ್ ಮೊದಲು ಸ್ಥಳೀಯ ಮನೆಯವರನ್ನು ತೆರವು ಮಾಡಿದ ಎರಡು ದಿನಗಳ ನಂತರ ಎನ್ ಕೌಂಟರ್ ನಡೆಸಿದ ಘಟನೆ ಸಂಶಯಕ್ಕೆ ಕಾರಣವಾಗಿದೆ. ಎನ್ ಕೌಂಟರ್ ನಡೆದ ಸ್ಥಳಕ್ಕೆ ಪತ್ರಿಕೆ , ಟಿವಿ ಮಾದ್ಯಮದವರನ್ನು ಪ್ರವೇಶ ನೀಡದೆ , ಶವವನ್ನು ನೋಡಲು ಬಿಡದೆ ನಕ್ಸಲ್ ನಿಗ್ರಹ ದಳ ಅಸಂವಿಧಾನಿಕವಾಗಿ ನಡೆದುಕೊಂಡಿದೆ. ಮನೆಯೊಂದರಲ್ಲಿ ಎನ್ ಕೌಂಟರ್ ನಡೆದಿದೆ ಎನ್ನುವ ಪೋಲಿಸ್ ಇಲಾಖೆ , ಎಫ್ಐಆರ್ ನಲ್ಲಿ ಕಾಡಿನಲ್ಲಿ ನಡೆದ ಗುಂಡಿನ ಚಕಮಕಿಯಲ್ಲಿ ವಿಕ್ರಮ್ ಗೌಡ ಸಾವನ್ನಪ್ಪಿದ್ದಾನೆ ಎಂದು ದಾಖಲಿಸಿರುವುದು ಹಾಸ್ಯಾಸ್ಪದ ಸಂಗತಿಯಾಗಿದೆ. ಕಾಡಿನಲ್ಲಿ ಎನ್ ಕೌಂಟರ್ ನಡೆದಿದ್ದು ನಿಜವಾದರೆ ಮಲೆಕುಡಿಯ ಸಮುದಾಯವನ್ನು ಅವರ ಮನೆಗಳಿಂದ ತೆರವು ಮಾಡಿದ್ಯಾಕೆ ? ಎನ್ ಕೌಂಟರ್ ನಡೆದ 15 ದಿನಗಳ ಬಳಿಕವೂ ಅವರ ಮನೆಗಳಿಗೆ ತೆರಳಲು ಅವಕಾಶ ನೀಡದಿರುವುದು ಏಕೆ ಎಂಬ ಪ್ರಶ್ನೆ ಉದ್ಭವಿಸಿದೆ. ರಾಜ್ಯ ಸರ್ಕಾರ ತಕ್ಷಣ ಮಧ್ಯ ಪ್ರವೇಶ ಮಾಡಿ ಆದಿವಾಸಿ ಮಲೆಕುಡಿಯ ಸಮುದಾಯದ ಮನೆಗಳಲ್ಲಿ ಅನಧಿಕೃತವಾಗಿ , ಕಾನೂನು ಬಾಹಿರವಾಗಿ ನೆಲೆಸಿರುವ ಎಎನ್ಎಫ್ ಸಿಬ್ಬಂದಿಗಳನ್ನು ತೆರವುಗೊಳಿಸಿ ಆದಿವಾಸಿಗಳನ್ನು ಸ್ವತಂತ್ರವಾಗಿ ಬದುಕಲು ಅವಕಾಶ ಮಾಡಿಕೊಡಬೇಕು ಮತ್ತು ನಾಗರಿಕ ಸಮಾಜದಲ್ಲಿ ಸಂಶಯಕ್ಕೆ ಎಡೆಮಾಡಿಕೊಟ್ಟಿರುವ ವಿಕ್ರಮ್ ಗೌಡ ಎನ್ ಕೌಂಟರ್ ಬಗ್ಗೆ ತಕ್ಷಣ ನ್ಯಾಯಾಂಗ ತನಿಖೆ ನಡೆಸಬೇಕು ಹಾಗೂ ಎನ್ ಕೌಂಟರ್ ನಡೆಸಿದ ಎಎನ್ಎಫ್ ಸಿಬ್ಬಂದಿಗಳ ಮೇಲೆ ಕ್ರಿಮಿನಲ್ ಕೇಸ್ ದಾಖಲಿಸಿ ಬಂಧಿಸಬೇಕು ಎಂದು ಒತ್ತಾಯಿಸಿದ್ದಾರೆ.