ವೇಣೂರು: ಈ ನವಚೇತನ ಶಾಲೆಯಲ್ಲಿ ಗುಣಮಟ್ಟದ ಶಿಕ್ಷಣದ ಜೊತೆ ಶಿಸ್ತನ್ನು ಮಕ್ಕಳಿಗೆ ಧಾರೆಯೆರೆಯಲಾಗುತ್ತಿದೆ. ಮುಖ್ಯಶಿಕ್ಷಕಿ ಸೇರಿದಂತೆ ಗುಣಮಟ್ಟದ ಬೋಧಕ ತಂಡ ಇಲ್ಲಿರುವುದು ಶೈಕ್ಷಣಿಕ ಸಾಧನೆಗೆ ಸಾಕ್ಷಿಯಾಗಿದೆ. ಶಿಕ್ಷಣದ ಜೊತೆ ಕ್ರೀಡೆ, ಸಾಂಸ್ಕೃತಿಕ ಕ್ಷೇತ್ರಕ್ಕೂ ಗಣನೀಯ ಪ್ರೋತ್ಸಾಹ ನೀಡುತ್ತಿರುವುದು ಗ್ರಾಮೀಣ ಭಾಗದ ಜನತೆಗೆ ವರದಾನವಾಗಿದೆ ಎಂದು ಮಂಗಳೂರು ಅರ್ಸುಲೈನ್ ಫ್ರಾನ್ಸಿಸ್ಕನ್ ಎಜುಕೇಶನಲ್ ಸೊಸೈಟಿಯ ಕಾರ್ಯದರ್ಶಿ ಸಿ| ಪಿಲೊಮಿನಾ ನೊರೋನ್ಹಾ ಹೇಳಿದರು.
ನ. 29ರಂದು ಜರಗಿದ ವೇಣೂರು ನವಚೇತನ ಆಂಗ್ಲಮಾಧ್ಯಮ ಶಾಲೆಯ ವಾರ್ಷಿಕೋತ್ಸವ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ವೇಣೂರು ಚರ್ಚ್‌ನ ಧರ್ಮಗುರು ಫಾ| ಪೀಟರ್ ಅರನ್ಹಾ ಅವರು ಶುಭಾಶೀರ್ವಾದಗೈದು, ಶಿಕ್ಷಣ ಸಂಸ್ಥೆಗಳು ಕೇವಲ ಪಾಠಕ್ಕೆ ಸೀಮಿತವಾಗಬಾರದು. ವಿದ್ಯಾರ್ಥಿಗಳಿಗೆ ಜೀವನ ಮೌಲ್ಯವನ್ನು, ಕೌಶಲ್ಯವನ್ನು ಕಲಿಸುವ ಕೇಂದ್ರಗಳಾಗಬೇಕು. ಅಂತಹ ಶಿಕ್ಷಣವನ್ನು ನವಚೇತನ ಶಾಲೆಯಲ್ಲಿ ನೀಡಲಾಗುತ್ತಿದೆ ಎಂದರು.
ವೇಣೂರು ಗ್ರಾ.ಪಂ. ಅಧ್ಯಕ್ಷೆ ಮಲ್ಲಿಕಾ ಹೆಗ್ಡೆ ಮಾತನಾಡಿ, ಅತೀ ಕಡಿಮೆ ಅವಧಿಯಲ್ಲಿ ಈ ಶಾಲೆ ಅದ್ವಿತೀಯ ಸಾಧನೆ ಮಾಡಿದೆ. ಸದಾ ಹಸನ್ಮುಖಿಯಾಗಿರುವ ಮುಖ್ಯಶಿಕ್ಷಕಿಯವರ ಮಂದಹಾಸದ ಹಾದಿ ಶಾಲೆಯ ಸಾಧನೆಯ ಪ್ರಯಾಣಕ್ಕೆ ಕಾರಣವಾಗಿದೆ ಎಂದರು. ಶಿಸ್ತಿಗೆ ಪ್ರಾಮುಖ್ಯತೆಗೆ ನೀಡುತ್ತಿರುವ ಇಲ್ಲಿಯ ಶಿಕ್ಷಕ ವೃಂದ ಮಕ್ಕಳ ಪ್ರತಿಯೊಂದು ಕ್ಷೇತ್ರದ ಸಾಧನೆಗೂ ಪ್ರೋತ್ಸಾಹ ನೀಡುತ್ತಿರುವುದು ಶ್ಲಾಘನೀಯ ಎಂದರು. ಅರ್ಸುಲೈನ್ ಫ್ರಾನ್ಸಿಸ್ಕನ್ ಎಜುಕೇಶನಲ್ ಸೊಸೈಟಿಯ ಜೊತೆ ಕಾರ್ಯದರ್ಶಿ ಸಿ| ಜುಲಿಯಾನ ಪಾಯ್ಸ್, ನವಚೇತನ ಶಾಲೆಯ ಸಂಚಾಲಕಿ ಸಿ| ಲಿಲ್ಲಿ ಗೋಮ್ಸ್, ಪಿಟಿಎ ಉಪಾಧ್ಯಕ್ಷ ಅರವಿಂದ ಶೆಟ್ಟಿ ಉಪಸ್ಥಿತರಿದ್ದರು.
ಸಾಧಕರಿಗೆ ಸನ್ಮಾನ: ಕಳೆದ ಸಾಲಿನಲ್ಲಿ ಎಸ್‌ಎಸ್‌ಎಲ್‌ಸಿಯಲ್ಲಿ ಸಾಧನೆಗೈದ ಸೋನಲ್ ರೇಗೋ, ವಿಯೋಲ ಸ್ಲಾನಿಯ ಮೋರಸ್, ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕ ದೀಕ್ಷಿತ್ ಅವರನ್ನು ಸನ್ಮಾನಿಸಲಾಯಿತು. ತರಗತಿವಾರು ಸಾಧನೆಗೈದ ವಿದ್ಯಾರ್ಥಿಗಳನ್ನು ಗೌರವಿಸಲಾಯತು. ತಾಲೂಕು, ಜಿಲ್ಲಾಮಟ್ಟದ ಕ್ರೀಡೆಗಳಲ್ಲಿ ಸಾಧನೆಗೈದ ವಿದ್ಯಾರ್ಥಿಗಳಿಗೆ ಅಭಿನಂದನೆ ಸಲ್ಲಿಸಲಾಯಿತು. ಶಾಲಾಭಿವೃದ್ಧಿಗೆ ಸಹಕಾರ ನೀಡುತ್ತಿರುವ ಪಿಟಿಎ ಸದಸ್ಯರು ಮತ್ತು ದಾನಿಗಳನ್ನು ಗೌರವಿಸಲಾಯಿತು.
ಡಿಜಿಟಲ್ ಪರದೆಮೇಲೆ ಶಾಲೆಯ ಸಾಧನೆಯ ಹಾದಿಯ ವರದಿಯನ್ನು ಪ್ರಸ್ತುತಪಡಿಸಲಾಯಿತು. ಮುಖ್ಯ ಶಿಕ್ಷಕಿ ಶಾಲಿನಿ ಡಿಸೋಜ ಪ್ರಾಸ್ತಾವಿಸಿ, ಸ್ವಾಗತಿಸಿದರು. ಸಂಪ್ರೀತಾ ಜೈನ್, ಫಾತಿಮಾ ಸಫೀನಾ, ಸಾತ್ವಿಕ್ ನಾಯಕ್, ವಿಲ್ಟನ್ ಡಿ ಸೋಜ ಹಾಗೂ ಸ್ವೀಡಲ್ ಡಿ ಕುನ್ಹಾ ನಿರೂಪಿಸಿದರು. ವಿದ್ಯಾರ್ಥಿ ಸಂಘದ ನಾಯಕ ಮಹಮ್ಮದ್ ಅನಾಸ್ ವಂದಿಸಿದರು. ಬಳಿಕ ರಾತ್ರಿ ಶಾಲೆಯ ವಿದ್ಯಾರ್ಥಿ, ವಿದ್ಯಾರ್ಥಿನಿಯರಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಜರಗಿತು.