ಬೆಳ್ತಂಗಡಿ : ಬೆಳ್ಳಾರೆ ಬಿಜೆಪಿ ಮುಖಂಡ ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣದಲ್ಲಿ ನಾಪತ್ತೆಯಾಗಿರುವ ನೌಷದ್ (27) ಗಾಗಿ ಎರಡನೇ ಬಾರಿ ಎನ್.ಐ.ಎ ಅಧಿಕಾರಿಗಳು ದಾಳಿ ಮಾಡಿ ಪರಿಶೀಲನೆ ನಡೆಸಿದ್ದಾರೆ. ದಾಳಿ ವೇಳೆ ನೌಷದ್ ಪತ್ನಿ, ತಂಗಿ, ತಾಯಿ ಮನೆಗೆ ಬೀಗ ಹಾಕಿ ತೆರಳಿದ್ದು. ಬಳಿಕ ತಂಗಿ, ತಾಯಿ ವಶಕ್ಕೆ ಪಡೆದುಕೊಂಡು ಮನೆಗೆ ಕರೆದುಕೊಂಡು ಬಂದು ವಿಚಾರಣೆ ನಡೆಸಿದ್ದಾರೆ .
ಪಡಂಗಡಿ ಗ್ರಾಮದ ಪೊಯ್ಯಗುಡ್ಡೆ ಕಾಲೋನಿಯಲ್ಲಿರುವ ನೌಷದ್ ಮನೆಗೆ ಡಿ.5 ರಂದು ಬೆಳಗ್ಗೆ 5:30 ಗಂಟೆಗೆ ಚೆನೈನಿಂದ ಬಂದ ಎನ್.ಐ.ಎ ಡಿವೈಎಸ್ಪಿ ವಿಘ್ನೇಶ್ ಮತ್ತು ಅಧಿಕಾರಿಗಳ ತಂಡ ದಾಳಿ ಮಾಡಿತ್ತು. ಈ ದಾಳಿ ವೇಳೆ ಮನೆಗೆ ಬೀಗ ಹಾಕಿ ನೌಷದ್ ತಂಗಿ ತಫಾ ಮತ್ತು ತಾಯಿ ತುಲೈಕಾ ತೆರಳಿದ್ದರು.
ಸತತ ಐದು ಗಂಟೆಗಳ ಬಳಿಕ ಎನ್.ಐ.ಎ ಅಧಿಕಾರಿಗಳು ತಂಗಿ ಮತ್ತು ತಾಯಿಯನ್ನು 12 ಗಂಟೆ ಸುಮಾರಿಗೆ ಬೆಳ್ತಂಗಡಿ ತಾಲೂಕಿನ ಕುವೆಟ್ಟು ಗ್ರಾಮದ ಮದಡ್ಕ ಮನೆಯೊಂದರಲ್ಲಿರುವ ಬಗ್ಗೆ ಮಾಹಿತಿ ಆಧಾರಿಸಿ ಕಾರ್ಯಾಚರಣೆ ನಡೆಸಿ ವಶಕ್ಕೆ ಪಡೆದುಕೊಂಡು ಇನೋವಾ ಕಾರಿನಲ್ಲಿ ನೌಷದ್ ಪೊಯ್ಯಗುಡ್ಡೆ ಮನೆಗೆ ಕರೆತಂದು ಬೀಗ ತೆರೆಸಿ ಮನೆಯೊಳಗೆ ಪರಿಶೀಲನೆ ನಡೆಸಿ, ವಿಚಾರಣೆ ನಡೆಸಿದ್ದಾರೆ.
ಎನ್.ಐ.ಎ ದಾಳಿ ಮುಕ್ತಾಯವಾಗಿದ್ದು ,ಮಹಜರು ಮಾಡಿ ಚೈನೈನಿಂದ ಬಂದ ಡಿವೈಎಸ್ಪಿ ವಿಘ್ನೇಶ್ ಮತ್ತು ಇತರ ಇಬ್ಬರು ಸಿಬ್ಬಂದಿಗಳು ಸ್ಥಳದಿಂದ ತೆರಳಿದ್ದಾರೆ.
ಬೆಳ್ತಂಗಡಿ ಪೊಲೀಸ್ ಠಾಣೆಯ ಸಿಬ್ಬಂದಿಗಳಾದ ಪಾಲಣಿವೇಲು, ಆನಂದ್ ಗೌಡ, ಸುಕನ್ಯ ಸಹಕರಿಸಿದ್ದರು.