ಬೆಳ್ತಂಗಡಿ: ಸುದ್ದಿ ಉದಯ ವಾರಪತ್ರಿಕೆ ಬೆಳ್ತಂಗಡಿ ಇದರ ವತಿಯಿಂದ ಬೆಳಕಿನ ಉದಯ ದೀಪಾವಳಿ ವಿಶೇಷಾಂಕ -2024ಹಾಗೂ ನವರಾತ್ರಿ ಸಂದರ್ಭದಲ್ಲಿ ಶಾರದೋತ್ಸವದ ಅಂಗವಾಗಿ ಹಮ್ಮಿಕೊಂಡ ‘ಹೇ ಶಾರದೆ’ ಸ್ಪರ್ಧೆಯಲ್ಲಿ ಅಗ್ರಿಲೀಫ್ ಸಂಸ್ಥೆ ನಿಡ್ಲೆ ಇವರ ಪ್ರಾಯೋಜಕತ್ವದಲ್ಲಿ ಹಮ್ಮಿಕೊಂಡ ವಿವಿಧ ಸ್ಪರ್ಧಾವಿಜೇತರಿಗೆ ಬಹುಮಾನ ವಿತರಣಾ ಸಮಾರಂಭವು ಡಿ.7ರಂದು ಸುದ್ದಿ ಉದಯ ಕಚೇರಿಯಲ್ಲಿ ಜರುಗಿತು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ನಿಡ್ಲೆ ಅಗ್ರಿಲೀಫ್ ಎಕ್ಸ್ಪೋರ್ಟ್ ಪ್ರೈವೇಟ್ ಲಿಮಿಟೆಡ್ ಇದರ ವ್ಯವಸ್ಥಾಪಕ ನಿರ್ದೇಶಕ ಹಾಗೂ ಸಿಇಒ ಅವಿನಾಶ್ ರಾವ್ ನಿಡ್ಲೆ ಅವರು ಮಾತನಾಡಿ, ಒಂದು ವಾರದಲ್ಲಿ ಪತ್ರಿಕೆಯನ್ನು ತಯಾರಿಸಿ ಅದನ್ನು ಸಮಯಕ್ಕೆ ಸರಿಯಾಗಿ ಹೊರತರುವುದು ಬಹಳಷ್ಟು ಕಷ್ಟದ ಕೆಲಸ. ಸುದ್ದಿ ಉದಯ ಬಳಗದವರು ಇದನ್ನು ಯಶಸ್ವಿಯಾಗಿ ಮಾಡುತ್ತಿದ್ದಾರೆ. ನಾವು ಬದಲಾವಣೆಗೆ ಹೊಂದಿಕೊಂಡು ಹೋಗಬೇಕು. ಪತ್ರಿಕೆಯವರು ಹಮ್ಮಿಕೊಳ್ಳುವ ಇಂತಹ ನವೀನ ರೀತಿಯ ಸ್ಪರ್ಧೆಯಲ್ಲಿ ಭಾಗವಹಿಸಿದವರು ಮುಂದೆ ಬೇರೆ, ಬೇರೆ ಸ್ಪರ್ಧೆಗಳಲ್ಲಿ ಭಾಗವಹಿಸಿ, ಬಿಗ್‌ಬಾಸ್ ಸ್ಪರ್ಧೆಯವರಿಗೂ ಹೋಗಬಹುದು. ಸುದ್ದಿ ಉದಯ ಪತ್ರಿಕೆ ದ.ಕ ಜಿಲ್ಲಾ ಮಟ್ಟದ ಪತ್ರಿಕೆಯಾಗಿ ಬೆಳೆಯಲಿ ಎಂದು ಹಾರೈಸಿದರು.
ಬೆಳ್ತಂಗಡಿ ಟಿವಿಎಸ್ ಲೋಬೋ ಮೋಟಾರ‍್ಸ್ ಇದರ ಮಾಲಕ ರೊನಾಲ್ಡ್ ಲೋಬೋ ಅವರು ಮಾತನಾಡಿ, ಸುದ್ದಿ ಉದಯ ಪತ್ರಿಕೆ ಉತ್ತಮವಾಗಿ ಪ್ರಕಟಗೊಳ್ಳುತ್ತಿದ್ದು, ತಾಲೂಕಿನ ಜನರ ಪ್ರೀತಿಯ ಪತ್ರಿಕೆಯಾಗಿದೆ. ಪತ್ರಿಕೆಯ ಸಂಪಾದಕರು, ಸಿಬ್ಬಂದಿಗಳು ಶ್ರಮ ಪಟ್ಟು ದುಡಿಯುತ್ತಿದ್ದಾರೆ. ದೀಪಾವಳಿ ಪ್ರಯುಕ್ತ ಓದುಗರಿಗೆ ಬೇರೆ, ಬೇರೆ ಸ್ಪರ್ಧೆ ಇಟ್ಟು ತಾಲೂಕಿನ ಬರಹಗಾರರಿಗೆ ಸ್ಫೂರ್ತಿಯಾಗಿದ್ದಾರೆ. ಪ್ರತಿಭಾ ವಿಕಸನಕ್ಕೆ ಪತ್ರಿಕೆ ಅವಕಾಶ ನೀಡುತ್ತಿರುವುದು ಉತ್ತಮ ಕಾರ್ಯವಾಗಿದೆ. ಈ ಪತ್ರಿಕೆ ಇನ್ನಷ್ಟು ಬೆಳೆಯಲಿ ಎಂದು ಶುಭ ಹಾರೈಸಿದರು.
ಬೆಳ್ತಂಗಡಿ ಲಯನ್ಸ್ ಕ್ಲಬ್ ಅಧ್ಯಕ್ಷ ಲ| ದೇವಿದಾಸ್ ಶೆಟ್ಟಿ ಅವರು ಮಾತನಾಡಿ, ಸುದ್ದಿ ಉದಯ ಪತ್ರಿಕೆ ದೀಪಾವಳಿ ಸೇರಿದಂತೆ ಬೇರೆ, ಬೇರೆ ಸಂದರ್ಭಗಳಲ್ಲಿ ಸ್ಪರ್ಧೆಗಳನ್ನು ಏರ್ಪಡಿಸಿ, ಜನರ ಜೊತೆ ಉತ್ತಮ ಬಾಂಧವ್ಯವನ್ನು ಹೊಂದಿದೆ. ಈ ಪತ್ರಿಕೆ ತಾಲೂಕಿನಲ್ಲಿ ಮನೆಮಾತಾಗಿದ್ದು, ಮುಂದೆ ದಿನ ಪತ್ರಿಕೆಯಾಗಿ ಬೆಳೆಯಲಿ ಎಂದು ಹಾರೈಸಿದರು.
ಸ್ಪರ್ಧಾ ವಿಜೇತರ ಪರವಾಗಿ ವಿದ್ಯಾಶ್ರೀ ಅಡೂರು ಮುಂಡಾಜೆ, ಕೇಸರ್ ಎಸ್. ಶೆಟ್ಟಿ ಉಜಿರೆ ಅನಿಸಿಕೆ ವ್ಯಕ್ತಪಡಿಸಿ ಸುದ್ದಿ ಉದಯ ವಾರಪತ್ರಿಕೆಯ ಚಟುವಟಿಕೆಗಳಿಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಸಮಾರಂಭದಲ್ಲಿ ನವರಾತ್ರಿ ಸಂದರ್ಭದಲ್ಲಿ ಶಾರದೋತ್ಸವದ ಅಂಗವಾಗಿ ಹಮ್ಮಿಕೊಂಡ ‘ಹೇ ಶಾರದೆ’ ಸ್ಪರ್ಧೆಯಲ್ಲಿ ಅಗ್ರಿಲೀಫ್ ಸಂಸ್ಥೆ ನಿಡ್ಲೆ ಇವರ ಪ್ರಾಯೋಜಕತ್ವದ ಬಹುಮಾನ ಹಾಗೂ ದೀಪಾವಳಿ ಪ್ರಯುಕ್ತ ಹಮ್ಮಿಕೊಂಡ ವಿವಿಧ ಸ್ಪರ್ಧಾ ವಿಜೇತರಿಗೆ
ಬಹುಮಾನ ವಿತರಿಸಲಾಯಿತು.
ಸುದ್ದಿ ಉದಯ ದೀಪಾವಳಿ -2024 ಇದರ ಅಂಗವಾಗಿ ಹಮ್ಮಿಕೊಳ್ಳಲಾದ ಅದೃಷ್ಟವಂತ 50 ಓದುಗರಿಗೆ ಬಹುಮಾನದ ಕೂಪನ್ ಡ್ರಾ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಪತ್ರಿಕೆಯ ಸಂಪಾದಕರ ಬಿ.ಎಸ್.ಕುಲಾಲ್, ಕಚೇರಿ ವ್ಯವಸ್ಥಾಪಕ ಪಿ. ತಿಮ್ಮಪ್ಪ ಗೌಡ ನಿಡ್ಲೆ, ಕಂಪ್ಯೂಟರ್ ವಿಭಾಗದ ಮುಖ್ಯಸ್ಥ ಆನಂದ ಗೌಡ, ಅಕೌಂಟ್ಸ್ ಮುಖ್ಯಸ್ಥೆ ಶ್ರೀಮತಿ ಸುಧಾ, ಆನ್‌ಲೈನ್ ವರದಿಗಾರ್ತಿ ಕು| ಪ್ರತಿಭಾ, ಕಂಪ್ಯೂಟರ್ ವಿಭಾಗದ ಕು| ಧನ್ಯ ಭಂಡಾರಿ, ವರದಿಗಾರ ಸುದಿತ್ ಕುಂಜರ್ಪ, ಚಾನೆಲ್ ವರದಿಗಾರ ಕು| ಸೌಮ್ಯ, ಡಿಸೈನರ್ ಇರ್ಫಾನ್ ಉಜಿರೆ ಉಪಸ್ಥಿತರಿದ್ದರು.
ಸುದ್ದಿ ಉದಯ ವಾರಪತ್ರಿಕೆ ಉಪಸಂಪಾದಕ ಸಂತೋಷ್ ಪಿ.ಕೋಟ್ಯಾನ್ ಸ್ವಾಗತಿಸಿ, ಪ್ರಸ್ತಾವಿಕವಾಗಿ ಮಾತನಾಡಿದರು. ಸಾಹಿತಿ ಚಂದ್ರಹಾಸ ಬಳಂಜ ಕಾರ್ಯಕ್ರಮ ನಿರೂಪಿಸಿದರು. ಪತ್ರಿಕೆ ವ್ಯವಸ್ಥಾಪಕ ನಿರ್ದೇಶಕ ತುಕರಾಮ್ ವಂದಿಸಿದರು.