ಪರೀಕ: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಯೋಗ ಪ್ರಕೃತಿ ಚಿಕಿತ್ಸಾ ಆಸ್ಪತ್ರೆ ಸೌಖ್ಯವನ ಪರೀಕದಲ್ಲಿ ಡಿ. 12 ರಂದು ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ- 2024 ಪುರಸ್ಕೃತರಾದ ಯಕ್ಷಗಾನದ ಖ್ಯಾತ ಹಿಮ್ಮೇಳ ಕಲಾವಿದರು ಹಾಗೂ ಶಾಂತಿವನ ಟ್ರಸ್ಟ್(ರಿ.) ಧರ್ಮಸ್ಥಳ ಇದರ ಕಾರ್ಯದರ್ಶಿಗಳಾದ ಬಿ ಸೀತಾರಾಮ ತೋಳ್ವಾಡಿತ್ತಾಯ ಇವರ ಅಭಿನಂದನಾ ಸಮಾರಂಭವು ಉಡುಪಿ ಶ್ರೀ ಪೇಜಾವರ ಅಧೋಕ್ಷಜ ಮಠದ ಪೀಠಾಧೀಶರಾದ ಶ್ರೀಶ್ರೀಶ್ರೀ ವಿಶ್ವಪ್ರಸನ್ನತೀರ್ಥ ಪಾದಂಗಳವರ ದಿವ್ಯ ಉಪಸ್ಥಿತಿಯಲ್ಲಿ ಜರಗಿತು.
ಪೂಜ್ಯ ಶ್ರೀಗಳು ತಮ್ಮ ಆಶೀರ್ವಚನದಲ್ಲಿ, ಡಾ। ಡಿ ವೀರೇಂದ್ರ ಹೆಗ್ಗಡೆಯವರು ಪ್ರಕೃತಿ ಚಿಕಿತ್ಸಾ ವಿಧಾನವನ್ನು ಸಮಾಜಕ್ಕೆ ಪ್ರಪ್ರಥಮವಾಗಿ ಉಜಿರೆಯಲ್ಲಿ ಕಾಲೇಜನ್ನು ಸ್ಥಾಪಿಸುವುದರ ಮುಖಾಂತರ ಶಾಂತಿವನ ಮತ್ತು ಸೌಖ್ಯವನ ಎಂಬ ವಿಶೇಷ ಸೌಲಭ್ಯದ ಎರಡು ಆಸ್ಪತ್ರೆಯನ್ನು ಆರಂಭಿಸಿ ಸಾರ್ವಜನಿಕರ ಉಪಯೋಗಕ್ಕೆ ನೀಡಿರುತ್ತಾರೆ. ಇದರಿಂದ ಔಷಧರಹಿತ ಚಿಕಿತ್ಸೆಗಾಗಿ ದೇಶ – ವಿದೇಶಗಳಿಂದ ಜನರು ಈ ಎರಡು ಆಸ್ಪತ್ರೆಗಳಿಗೆ ದಾಖಲಾಗಿ ಗುಣಮುಖರಾಗುವುದರೊಂದಿಗೆ ಜೀವನ ಮೌಲ್ಯದ ಪಾಠವನ್ನು ಇದರ ಮೂಲಕ ಅರಿತು ಕೊಳ್ಳುವುದು ವಿಶೇಷವಾಗಿರುತ್ತದೆ.
ಪೂಜ್ಯ ಹೆಗ್ಗಡೆಯವರೊಂದಿಗೆ ಈ ಎರಡು ಆಸ್ಪತ್ರೆಗಳ ಕಾರ್ಯದರ್ಶಿಯಾಗಿ 25 ವರುಷಗಳಿಂದ ಸೇವೆ ಸಲ್ಲಿಸುತ್ತ ಬಂದಿರುವ ಹಾಗೂ 2024ನೇಯ ಪ್ರತಿಷ್ಠಿತ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಬಿ ಸೀತಾರಾಮ ತೋಳ್ಪಾಡಿತ್ತಾಯ ಇವರನ್ನು ಚಿನ್ನದ ಉಂಗುರವನ್ನು ತೊಡಿಸಿ ಸನ್ಮಾನಿಸಿ, ಇವರಿಗೆ ಇನ್ನು ಹೆಚ್ಚಿನ ಕಾಲ ಸೇವೆ ಗೈಯುವ ಸೌಭಾಗ್ಯ ದೊರಕಲಿ ಹಾಗೂ ಇನ್ನೂ ಹೆಚ್ಚಿನ ಪ್ರಶಸ್ತಿ ಪುರಸ್ಕಾರಗಳು ಲಭ್ಯವಾಗಲಿ ಎಂದು ಹರಸಿ ಆಶೀರ್ವದಿಸಿದರು.
ಮುಖ್ಯ ಅಭ್ಯಾಗತರಾಗಿ ಅಭಿನಂದನಾ ನುಡಿಗಳನ್ನು ಖ್ಯಾತ ಕರ್ನಾಟಕ ಯಕ್ಷಗಾನ ಅಕಾಡೆಮಿಯ ಮಾಜಿ ಅಧ್ಯಕ್ಷರು, ಎಂ.ಜಿ.ಎಂ ಕಾಲೇಜಿನ ನಿವೃತ್ತ ಪ್ರಾಂಶುಪಾಲರಾದ ಪ್ರೋ.ಎಂ ಎಲ್ ಸಾಮಗ ಸಲ್ಲಿಸಿದರು. ನಂತರ ಸನ್ಮಾನ ಸ್ವೀಕರಿಸಿದ ಸೀತಾರಾಮರವರು ಎಲ್ಲರಿಗೂ ತಮ್ಮ ಭಾವಪೂರ್ಣ ಕೃತಜ್ಞತೆಗಳನ್ನು ಸಲ್ಲಿಸಿದರು. ವೇದಿಕೆಯಲ್ಲಿ ಬಿ ಮನೋರಮಾ ತೋಳ್ಪಾಡಿತ್ತಾಯ ಹಾಗೂ ಸೌಖ್ಯವನ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿಯಾದ ಡಾ|| ಗೋಪಾಲ ಪೂಜಾರಿಯವರು ಉಪಸ್ಥಿತರಿದ್ದು ತಮ್ಮ ಅಭಿನಂದನೆಯನ್ನು ಸಲ್ಲಿಸಿದರು.
ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿಯಾದ ಡಾ|| ಗೋಪಾಲ ಪೂಜಾರಿಯವರು ಉಪಸ್ಥಿತರಿದ್ದು ತಮ್ಮ ಅಭಿನಂದನೆಯನ್ನು ಸಲ್ಲಿಸಿದರು. ಆಸ್ಪತ್ರೆಯ ವ್ಯವಸ್ಥಾಪಕ ಪ್ರವೀಣ್ ಕುಮಾರ್‌ರವರು ಕಾರ್ಯಕ್ರಮವನ್ನು ಸಂಘಟಿಸುದರರೊಂದಿಗೆ ಸ್ವಾಗತಿಸಿದರು.ಡಾ|| ಪೂಜಾ ಜಿ ಮತ್ತು ಡಾ|| ನವ್ಯತಾ ಬಲ್ಲಾಳ್‌ರವರು ಸನ್ಮಾನ ಪತ್ರವನ್ನು ವಾಚಿಸಿದರು. ಡಾ|| ಶೋಭಿತ್ ಶೆಟ್ಟಿಯವರು ಪ್ರಸ್ತಾವಣೆ ಸಲ್ಲಿಸಿ ಕಾರ್ಯಕ್ರಮ ನಿರೂಪಿಸಿದರು.ಆಡಳಿತ ವಿಭಾಗದ ನಾಗರಾಜ ಎಚ್ ಕೆ ಧನ್ಯವಾದನಿತ್ತರು.